ನವದೆಹಲಿ: ತನ್ನ ಕ್ರಿಕೆಟಿಗರನ್ನು ಭಾರತ ಉದ್ದೀಪನ ನಿಗ್ರಹ ಸಂಸ್ಥೆ (ನಾಡಾ) ಪರೀಕ್ಷೆಗೊಳಪಡಿಸುವುದನ್ನು ಕಡೆಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ ಬಿಸಿಸಿಐ ತಪ್ಪಿಸಿಕೊಂಡಿದೆ.
ಬಿಸಿಸಿಐ ವ್ಯಾಪ್ತಿಯಲ್ಲಿ ಬರುವ ಕ್ರಿಕೆಟಿಗರು ನಾಡಾದಿಂದ ಉದ್ದೀಪನ ಪರೀಕ್ಷೆಗೊಳಗಾಗಬೇಕು ಇಲ್ಲವಾದರೆ ಭಾರತದ ಅಷ್ಟೂ ಅಥ್ಲೀಟ್‌ಗಳನ್ನು ನಾಡಾ ಪರೀಕ್ಷೆಗೊಳಪಡಿಸುವುದಿಲ್ಲ ಎಂದು ವಾಡಾ (ವಿಶ್ವ ಉದ್ದೀಪನ ನಿಗ್ರಹ ಸಂಸ್ಥೆ) ಬೆದರಿಕೆ ಹಾಕಿತ್ತು. ಆದ್ದರಿಂದ ಕೇಂದ್ರ ಸರ್ಕಾರ ಕೂಡ ಬಿಸಿಸಿಐ ಮೇಲೆ ಒತ್ತಡ ಹೇರಿ ಪರೀಕ್ಷೆ ಒಪ್ಪುವಂತೆ ಹೇಳಿತ್ತು. ಇದಕ್ಕೆ ಬಿಸಿಸಿಐ ಸುತಾರಾಂ ಒಪ್ಪಿರಲಿಲ್ಲ. ಸುದೀರ್ಘ ಪತ್ರ ವ್ಯವಹಾರದ ನಂತರ ಕೇಂದ್ರ ಸರ್ಕಾರ ಬಿಸಿಸಿಐ ನಿಲುವನ್ನೇ ಒಪ್ಪಿಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್, ದೇಶದ ಪ್ರತಿಯೊಬ್ಬ ಕ್ರೀಡಾಪಟು ಪರೀಕ್ಷೆಗೊಳಗಾಗಬೇಕು ಅನ್ನುವುದು ಸಚಿವಾಲಯದ ಉದ್ದೇಶ. ಪರೀಕ್ಷೆಯನ್ನು ಯಾರು ಮಾಡಿದರೂ ನಮಗೆ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ. ಇದು ಬಿಸಿಸಿಐ ನಿಲುವಿಗೆ ಸ್ಪಷ್ಟ ಬೆಂಬಲವಾಗಿದೆ.
ಇದಕ್ಕೂ ಮುನ್ನ ಇದೇ ವಿಚಾರದಲ್ಲಿ ದೊಡ್ಡ ಗೊಂದಲ ಉಂಟಾಗಿತ್ತು. ನಾಡಾದಿಂದಲೇ ಪರೀಕ್ಷೆಯಾಗಬೇಕೆಂದು ವಿಶ್ವ ಉದ್ದೀಪನ ನಿಗ್ರಹ ಸಂಸ್ಥೆ-ವಾಡಾ ಆಗ್ರಹಿಸಿತ್ತು. ಐಸಿಸಿಯ ಮೇಲೂ ಒತ್ತಡ ಹೇರಿತ್ತು. ಕೇಂದ್ರಸರ್ಕಾರದ ಮೇಲೂ ಒತ್ತಡ ಹೇರಿತ್ತು. ದೇಶದ ಇತರೆ ಅಥ್ಲೀಟ್‌ಗಳು ಸಂಕಷ್ಟಕ್ಕೆ ಸಿಲುಕುತ್ತಾರೆ, ಪ್ರಮುಖ ಕ್ರೀಡಾಕೂಟಗಳ ವೇಳೆ ಪರೀಕ್ಷೆ ಇಲ್ಲದೇ ತೆರಳಿ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂಬ ಕಾರಣಕ್ಕೆ ಕೇಂದ್ರ ಕೂಡ ಪ್ರಸ್ತಾವಕ್ಕೆ ಒಪ್ಪಿತ್ತು. ಆದರೆ ಕ್ರಿಕೆಟಿಗರು ಮತ್ತು ಬಿಸಿಸಿಐ ಇದಕ್ಕೆ ಬಲವಾದ ವಿರೋಧ ವ್ಯಕ್ತಪಡಿಸಿದರು.
ವಾಡಾ ಮಾನ್ಯತೆಯಿರುವ ಸಂಸ್ಥೆಯಿಂದಲೇ ಭಾರತದ ಕ್ರಿಕೆಟಿಗರು ಉದ್ದೀಪನ ಪರೀಕ್ಷೆಗೊಳಪಡುತ್ತಿದ್ದಾರೆ, ಆದ್ದರಿಂದ ನಾಡಾ ಪರೀಕ್ಷೆ ಅಗತ್ಯವಿಲ್ಲ. ಜೊತೆಗೆ ಪರೀಕ್ಷೆಯ ಗುಣಮಟ್ಟವೂ ಚೆನ್ನಾಗಿದೆ ಎಂದು ಪಟ್ಟು ಹಿಡಿದಿತ್ತು. ಈ ಬಗ್ಗೆ ಹಲವು ಸುತ್ತಿನ ಪತ್ರ ವ್ಯವಹಾರದ ನಂತರ ಬಿಸಿಸಿಐ ನಿಲುವನ್ನು ಕೇಂದ್ರ ಒಪ್ಪಿಕೊಂಡಿದೆ.