Advertisement
ಬಂಟ್ವಾಳ ತಾಲೂಕು ಕೇಂದ್ರವಾಗಿ ಗುರುತಿಸಿಕೊಂಡಿರುವ ಬಿ.ಸಿ.ರೋಡ್‌ನಲ್ಲಿ ಹೆಚ್ಚಿನ ವಾಣಿಜ್ಯ ಚಟುವಟಿಕೆಗಳ ಜತೆಗೆ ತಾಲೂಕು ಕಚೇರಿ, ನ್ಯಾಯಾಲಯ, ತಾ.ಪಂ., ಮೆಸ್ಕಾಂ ಹೀಗೆ ಬಹುತೇಕ ಸರಕಾರಿ ಕಚೇರಿಗಳು ಒಂದೇ ಕಡೆ ಕೇಂದ್ರಿಕೃತವಾಗಿರುವುದರಿಂದ ಅಲ್ಲಿಗೆ ವಾಹನಗಳ ಮೂಲಕ ಆಗಮಿಸುವವರು ವಾಹನ ನಿಲುಗಡೆಗೆ ಪರದಾಡಬೇಕಿದೆ.
Related Articles
Advertisement
ಬಂಟ್ವಾಳ ಪುರಸಭೆಯಲ್ಲಿ ಸಾಕಷ್ಟು ಬಾರಿ ಪಾರ್ಕಿಂಗ್ ವಿಚಾರ ಚರ್ಚೆಯಾಗಿದ್ದು, ಇನ್ನೂ ಕೂಡ ಒಂದೇ ಒಂದು ಪಾರ್ಕಿಂಗ್ ಸ್ಥಳವನ್ನು ಗುರುತಿಸುವುದಕ್ಕೆ ಸಾಧ್ಯವಾಗಿಲ್ಲ. ಒಂದಷ್ಟು ಸರಕಾರಿ ಜಾಗಗಳನ್ನು ಗುರುತಿಸಿ ಪಾರ್ಕಿಂಗ್ ಗೆ ಬೇಕಾದ ವ್ಯವಸ್ಥೆ ಕಲ್ಪಿಸಿದರೆ ಪೇ ಪಾರ್ಕಿಂಗ್ ವ್ಯವಸ್ಥೆಯನ್ನಾದರೂ ಮಾಡಬಹುದು.
ನಗರದ ಮಧ್ಯ ಭಾಗದಲ್ಲಿ ಖಾಸಗಿ ಖಾಲಿ ಜಾಗಗಳನ್ನಾದರೂ ಲೀಸಿಗೆ ಪಡೆದು ಪೇ ಪಾರ್ಕಿಂಗ್ ಮೂಲಕ ವ್ಯವಸ್ಥೆ ಕಲ್ಪಿಸಿದರೆ ನಗರದ ಒತ್ತಡ ಕಡಿಮೆ ಮಾಡಬಹುದು. ನಗರದಲ್ಲಿ ಇದ್ದ ಒಂದಷ್ಟು ಭಾಗಗಳಲ್ಲಿ ಹಲವು ಬಗೆಯ ಬಾಡಿಗೆ ವಾಹನಗಳ ಪಾರ್ಕಿಂಗ್ ಸ್ಥಳಗಳಾಗಿ ಮಾರ್ಪಟ್ಟಿದ್ದು, ಪುರಸಭೆಯ ಬಳಿ ಕೇಳಿದರೆ ನಾವು ಯಾರಿಗೂ ಪಾರ್ಕಿಂಗ್ ತಾಣಕ್ಕೆ ಅನುಮತಿ ನೀಡಿಲ್ಲ ಎಂಬ ಉತ್ತರ ನೀಡುತ್ತಾರೆ. ಆದರೆ ಬಾಡಿಗೆ ವಾಹನದವರು ತಮ್ಮ ಸ್ಥಳದಲ್ಲಿ ಒಂದು ಬೈಕನ್ನು ನಿಲ್ಲಿಸಿದರೂ ತಗಾದೆ ತೆಗೆಯುತ್ತಾರೆ.
ಕಳೆದ ಮೂರು ತಿಂಗಳ ಹಿಂದೆ ಪುರಸಭೆಯ ನಿಯೋಗವೊಂದು ಬಿ.ಸಿ.ರೋಡ್‌ನಲ್ಲಿ ಪಾರ್ಕಿಂಗ್ ತಾಣಕ್ಕೆ ಸ್ಥಳ ಪರಿಶೀಲನೆ ನಡೆಸಿತ್ತು. ಕಳೆದ ಸಾಮಾನ್ಯ ಸಭೆಯಲ್ಲೂ ಸಾಕಷ್ಟು ಹೊತ್ತು ಪಾರ್ಕಿಂಗ್ ವಿಚಾರವೇ ಚರ್ಚೆಯಾಗಿತ್ತು. ಆದರೆ ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಇನ್ನೂ ಆರಂಭವಾಗಿಲ್ಲ. ಆದರೆ ಬಿ.ಸಿ.ರೋಡ್‌ನಲ್ಲಿ ದಿನ ಕಳೆದಂತೆ ವಾಹನಗಳು ಹೆಚ್ಚುತ್ತಲೇ ಇದ್ದು, ಪಾರ್ಕಿಂಗ್ ಸಮಸ್ಯೆಯೂ ವೃದ್ಧಿಯಾಗುತ್ತಲೇ ಇದೆ.
ಸರಕಾರಿ ಕಟ್ಟಡದಲ್ಲೂ ಪಾರ್ಕಿಂಗ್ ಇಲ್ಲ
ಬಿ.ಸಿ.ರೋಡ್‌ನ ಬಹುತೇಕ ಖಾಸಗಿ ಕಟ್ಟಡಗಳಲ್ಲಿ ಪಾರ್ಕಿಂಗ್ ತಾಣಗಳಿಲ್ಲ. ಅಲ್ಲಿಗೆ ಆಗಮಿಸಿದ ಗ್ರಾಹಕ ಎಲ್ಲೋ ವಾಹನ ನಿಲ್ಲಿಸಿ ಬರಬೇಕಾದುದು ಒಂದೆಡೆಯಾದರೆ, ಸರಕಾರಿ ಕಟ್ಟಡಗಳಲ್ಲೂ ಪಾರ್ಕಿಂಗ್ ಸ್ಥಳಗಳಿಲ್ಲ. ಹೀಗಾಗಿ ಬಿ.ಸಿ.ರೋಡ್ ನಗರದ ಪಾರ್ಕಿಂಗ್ ಸಮಸ್ಯೆಯ ವಿಚಾರ ನಿತ್ಯ ಜೀವಂತವಾಗಿದೆ.ಬಿ.ಸಿ.ರೋಡ್‌ನ ತಾಲೂಕು ಆಡಳಿತ ಸೌಧದ ಆವರಣದೊಳಗೆ ಒಂದಷ್ಟು ವಾಹನಗಳನ್ನು ನಿಲ್ಲಿಸುವುದಕ್ಕೆ ಅವಕಾಶವಿದ್ದರೂ, ಒಂದಷ್ಟು ಬೇರೆ ಕಡೆಗೆ ಕೆಲಸಕ್ಕೆ ಹೋಗುವವರು ಆವರಣದೊಳಗೆ ವಾಹನ ನಿಲ್ಲಿಸಿ ಹೋಗುತ್ತಾರೆ. ಮತ್ತೆ ಸಂಜೆಯೇ ವಾಹನ ತೆಗೆಯುತ್ತಾರೆ ಎಂಬ ಆರೋಪಗಳಿವೆ. ಹೀಗಾಗಿ ತಾಲೂಕು ಕಚೇರಿಗೆ ಆಗಮಿಸುವವರು ಹೊರಗಡೆಯೇ ನಿಲ್ಲಿಸಿ ಆಗಮಿಸಬೇಕಿದೆ.
ಇಲಾಖೆ ಸ್ಪಂದಿಸಿಲ್ಲ ಕಳೆದ ಸಾಮಾನ್ಯ ಸಭೆಯಲ್ಲಿ ವಾಹನ ಪಾರ್ಕಿಂಗ್‌ಗೆ ಸೂಕ್ತ ಸ್ಥಳಗಳನ್ನು ಗುರುತಿಸಿಕೊಡುವಂತೆ ಸಂಚಾರಿ ಪೊಲೀಸ್ ಇಲಾಖೆಗೆ ತಿಳಿಸಿದ್ದು, ಅವರಿಂದ ಪ್ರತಿಕ್ರಿಯೆ ಬಂದ ಬಳಿಕ ಅದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಿದ್ದೇವೆ. ಪ್ರಸ್ತುತ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರಿಗೆ ಮತ್ತೂಮ್ಮೆ ನೆನಪಿಸುವ ಕಾರ್ಯ ಮಾಡುತ್ತೇವೆ. -ಮೊಹಮ್ಮದ್ ಶರೀಫ್, ಅಧ್ಯಕ್ಷರು, ಬಂಟ್ವಾಳ ಪುರಸಭೆ.