Advertisement

ಮಣ್ಣು ಸಿಗುತ್ತಿಲ್ಲ, ಮಡಕೆಗೆ ಬೇಡಿಕೆಯೂ ಇಲ್ಲ

10:45 PM Jan 16, 2020 | mahesh |

ಆಲಂಕಾರು: ಜೀವನ ಶೈಲಿಯಲ್ಲಿ ಬದಲಾವಣೆ ಹಾಗೂ ಅನುಕೂಲದ ದೃಷ್ಟಿಯಿಂದ ಮಣ್ಣಿನ ಪಾತ್ರೆಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಮಡಕೆ ತಯಾರಕರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದ್ದು, ಜನತೆಯ ಬೇಡಿಕೆಗೆ ತಕ್ಕಂತೆ ಮಡಕೆ ಪೂರೈಸುವುದೂ ಅವರಿಗೆ ಅಸಾ ಧ್ಯವಾಗಿದೆ. ಬೆಲೆಯೂ ಗಗನಕ್ಕೇರಿದೆ.

Advertisement

ಬೇಸಗೆಯಲ್ಲಿ ಧಗೆ ನಿವಾರಿಸಲು ಜನ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ತಂಪು ನೀರಿಗಾಗಿ ಹಾತೊರೆಯುವ ಜನರು ಫ್ರಿಜ್‌ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ದೃಷ್ಟಿಯಿಂದ ಮಡಕೆಗಳಲ್ಲಿಟ್ಟು ಕುಡಿಯುತ್ತಿದ್ದಾರೆ. ಪ್ರತಿಯೊಂದು ಅಡುಗೆ ಮನೆಗೂ ಗ್ಯಾಸ್‌ ಒಲೆಗಳು ಬಂದ ಮೇಲೆ ಮಣ್ಣಿನ ಮಡಕೆಗಳಿಗೆ ಬೇಡಿಕೆ ಕಡಿಮೆಯಾಯಿತು.

ಸ್ಟೀಲ್‌ ಪಾತ್ರೆಗಳಿಗೆ ಬೇಡಿಕೆ
ಸ್ಟೀಲ್‌ ಹಾಗೂ ಅಲ್ಯೂಮೀನಿಯಂ ಪಾತ್ರೆಗಳಿಗೆ ಹೋಲಿಸಿದರೆ ಮಣ್ಣಿನ ಮಡಕೆಗಳಲ್ಲಿ ಅಡುಗೆ ತಯಾರಿಸಲು ಹೆಚ್ಚು ಸಮಯ ಹಾಗೂ ಇಂಧನ ಬೇಕಾಗುತ್ತದೆ. ಹೀಗಾಗಿ, ಸ್ಟೀಲ್‌ ಪಾತ್ರೆಗಳಿಗೆ ಬೇಡಿಕೆ ಹೆಚ್ಚಿದೆ.

ಮಣ್ಣಿನ ಅಭಾವ
ಮಡಕೆ ಮಾಡಲು ಸೂಕ್ತವಾದ ಜೇಡಿ ಮಣ್ಣು ಪುತ್ತೂರು ತಾಲೂಕಿನ ಎಲ್ಲಿಯೂ ಲಭ್ಯವಿಲ್ಲ. ಈ ಹಿಂದೆ ಆಲಂಕಾರು ಗ್ರಾಮದ ಕೊಂಡಾಡಿ ಕೊಪ್ಪದ ಬಳಿ ಮಣ್ಣು ದೊರೆಯುತ್ತಿತ್ತು. ಆ ಜಾಗದಲ್ಲೀಗ ರಬ್ಬರ್‌ ಬೆಳೆದಿರುವ ಕಾರಣ ಮಣ್ಣು ತೆಗೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಬೆಳ್ತಂಗಡಿ ತಾಲೂಕಿನ ದಿಡುಪೆ ಮತ್ತು ಕಾಜೂರಿನಿಂದ ತರಬೇಕು. ಇದು ವೆಚ್ಚದಾಯಕವಾಗಿದೆ.

4 ಮನೆಗಳಲ್ಲಿ ಮಾತ್ರ ಕೆಲಸ
ಒಂದೊಮ್ಮೆ ಈ ಪ್ರದೇಶದ ಸುಮಾರು 60 ಮನೆಗಳಲ್ಲಿ ಮಡಿಕೆ ತಯಾರಿಯನ್ನು ಕುಲಕಸುಬಾಗಿ ನಿರ್ವಹಿಸಲಾಗಿತ್ತು. ಹಲವರಿಗೆ ಅದೇ ಜೀವನಾಧಾರವೂ ಆಗಿತ್ತು. ಈಗ ಬಹುತೇಕ ಕುಟುಂಬಗಳು ಬದಲಿ ಉದ್ಯೋಗವನ್ನು ನೆಚ್ಚಿಕೊಂಡಿವೆ.
ಈಗ ನಾಲ್ಕು ಮನೆಗಳ ಸದಸ್ಯರು ಮಾತ್ರ ತಮ್ಮ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಅನ್ನಡ ಮಡಕೆ, ಪದಾರ್ಥದ ಪಾತ್ರೆ, ನೀರಿನ ಕೊಡಪಾನ, ಹಂಡೆ, ಭತ್ತ ಬೇಯಿಸುವ ಹಂಡೆ, ಕಾವಲಿ, ಬಾವಡೆ, ದೇವಾಲಯದ ಮುಗುಳಿ, ಹೂಜಿ ಮುಂತಾದ ಪಾತ್ರ ಪರಿಕರಗಳನ್ನು ತಯಾರಿಸುತ್ತಾರೆ.

Advertisement

ಮಾಸಾಶನ ಸಿಗುವಂತಾಗಲಿ
ಜೀವನ ಪರ್ಯಂತ ಮಡಕೆ ತಯಾರಿಯನ್ನೇ ನೆಚ್ಚಿಕೊಂಡು ಇಳಿ ವಯಸ್ಸಿನಲ್ಲಿ ಪುಡಿಗಾಸಿಗೂ ಪರದಾಡಬೇಕಾದ ಅನಿವಾರ್ಯ ಕುಂಬಾರ ಕುಟುಂಬಗಳದ್ದಾಗಿದೆ. ಗುಡಿ ಕೈಗಾರಿಕೆ ಸಂಘದ ಮೂಲಕ ಎಲ್ಲ ಮಡಕೆ ತಯಾರಕ ಕುಟುಂಬಗಳಿಗೂ ಮಾಸಾಶನ ಸಿಗುವಂತಾಗಬೇಕು. ಸರಕಾರ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ, ಕುಂಬಾರರ ಹಿತ ಕಾಯುವಂತಾಗಬೇಕು ಎಂದು ಹಿರಿಯ ಮಡಕೆ ತಯಾರಕ ನಾಡ್ತಿಲ ಕೊಪ್ಪ ಮುತ್ತಪ್ಪ ಕುಂಬಾರ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next