ಚಿಂಚೋಳಿ: ತಾಲೂಕಿನಲ್ಲಿ ರೈತರಿಗೆ ಮುಂಗಾರು ಬಿತ್ತನೆ ಬೀಜದ ಕೊರತೆಯಿಲ್ಲ. ಹೆಚ್ಚಿನ ಬಿತ್ತನೆ ಬೀಜಗಳನ್ನು ಸಂಗ್ರಹಣೆ ಮಾಡಲಾಗಿದೆ. ರೈತರು ಆತಂಕಪಡುವ ಅಗತ್ಯವಿಲ್ಲವೆಂದು ಶಾಸಕ ಡಾ| ಅವಿನಾಶ ಜಾಧವ ಹೇಳಿದರು.
ಪಟ್ಟಣದ ಚಂದಾಪುರ ರೈತ ಸಂಪರ್ಕ ಕೇಂದ್ರದಲ್ಲಿ ತಾಲೂಕು ಕೃಷಿ ಇಲಾಖೆಯಿಂದ 2022-23ನೇ ಸಾಲಿನ ಮುಂಗಾರು ಹಂಗಾಮಿನ ಕೃಷಿ ಅಭಿಯಾನ ಚಾಲನೆ ಮತ್ತು ಬೀಜ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ರೈತರ ಬೇಡಿಕೆಯಂತೆ ಸೋಯಾಬಿನ್, ಉದ್ದು, ಹೆಸರು, ತೊಗರಿ ಬೀಜಗಳನ್ನು ಒಟ್ಟು 5535ಕ್ವಿಂಟಲ್ ಸಂಗ್ರಹಣೆ ಮಾಡಲಾಗಿದೆ. ಸೋಯಾಬಿನ್-5271 ಕ್ವಿಂಟಲ್, ತೊಗರಿ 179ಕ್ವಿಂಟಲ್, ಹೆಸರು 69 ಕ್ವಿಂಟಲ್, ಉದ್ದು 15ಕ್ವಿಂಟಲ್ ಸೇರಿದಂತೆ ಒಟ್ಟು 5535ಕ್ವಿಂಟಲ್ ಬಿತ್ತನೆ ಬೀಜಗಳನ್ನು ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಜೂನ್ 6ರಿಂದ ನೀಡಲಾಗುವುದು. ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ಈ ಬಗ್ಗೆ ಕೃಷಿ ಸಚಿವರ ಗಮನಕ್ಕೆ ತರಲಾಗಿದೆ. ಕುಂಚಾವರಂ, ಶಾದೀಪುರ, ಸಂಗಾಪುರ ಗ್ರಾಮಗಳಲ್ಲಿ ರೈತರಿಗೆ ಬೀಜ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೊಡ ಮಾತನಾಡಿ, ಚಿಮ್ಮನಚೋಡ, ಐನಾಪುರ, ಸುಲೇಪೇಟ, ಕೋಡ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ನೀಡಲು ವ್ಯವಸ್ಥೆ ಮಾಡಲಾಗುವುದು. ಜೂನ್ ಮೊದಲ ವಾರದಲ್ಲಿ ಮಳೆ ಆಗದ ಕಾರಣ ರೈತರಿಗೆ ಬೀಜಗಳನ್ನು ನೀಡಲ್ಲ. ಸೋಯಾಬಿನ್ ಬೀಜಗಳ ಬೇಡಿಕೆ ಹೆಚ್ಚಿದ್ದು, ಈ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಬೀಜ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ತಾಪಂ ಅಧಿಕಾರಿ ಅನಿಲಕುಮಾರ ರಾಠೊಡ, ಪುರಸಭೆ ಅಧ್ಯಕ್ಷೆ ಜಗದೇವಿ ಗಡಂತಿ, ಕೃಷಿ ಅಧಿಕಾರಿಗಳಾದ ಅಭಿಲಾಷ ಸುಬೇದಾರ, ಇಮ್ರಾನ ಅಲಿ, ಅಲ್ಲಮಪ್ರಭು ಹುಲಿ, ಸಂತೋಷ ಗಡಂತಿ, ಕೆ.ಎಂ.ಬಾರಿ, ಶಾಮರಾವ್ ಕೊರವಿ, ಮಾರುತಿ ಎಂಪಳ್ಳಿ, ಶಿವಯೋಗಿ ರುಸ್ತಂಪುರ, ರಮೇಶ ಪಡಶೆಟ್ಟಿ, ಗಣಪತರಾವ್, ಚಂದ್ರಶೆಟ್ಟಿ ಜಾಧವ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಇದ್ದರು.