ಮೈಸೂರು: ದೇಶದಲ್ಲಿ ಮಾನ್ಸೂನ್ ಬೇಗ ಆರಂಭ ಆಗಬೇಕಿತ್ತು, ತಡವಾಗಿದೆ. ಆದರೂ ರೈತರು ಬಿತ್ತನೆ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದು, ದೇಶದಲ್ಲಿ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ್ಸೂನ್ ತಡವಾಗಿ ಆರಂಭವಾದರೂ ಬಿತ್ತನೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಬಿ, ಖಾರಿಫ್ ಬೆಳೆಗೆ ಸಂಬಂಧಿಸಿದಂತೆ ಕೇಂದ್ರದ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಭೆ ಮಾಡಿದೆ. ಯಾವ ರಾಜ್ಯಕ್ಕೆ ಯಾವ ಬಿತ್ತನೆ ಬೀಜ, ರಸಗೊಬ್ಬರ ಬೇಕು ಎಂಬ ಮಾಹಿತಿ ಪಡೆದು ಅದನ್ನು ಪೂರೈಸುವ ಕೆಲಸ ಮಾಡುತ್ತಿದೆ. ಈ ಬಾರಿಯೂ ಮುಂಗಾರಿಗೂ ಮೊದಲು ಎಲ್ಲಾ ರಾಜ್ಯಗಳ ಕೃಷಿ ಇಲಾಖೆಗಳೊಂದಿಗೆ ಸಂಪರ್ಕದಲ್ಲಿದ್ದು, ಸಭೆ ನಡೆಸಿ ಆಯಾ ರಾಜ್ಯಕ್ಕೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಬಿಜೆಪಿಯ ಕೆಲ ದೊಡ್ಡ ನಾಯಕರು ಮತ್ತು ಸಿದ್ದರಾಮಯ್ಯ ನಡುವೆ ಒಳ ಒಪ್ಪಂದ: ಪ್ರತಾಪ್ ಸಿಂಹ ಬಾಂಬ್
ಶಕ್ತಿ ಯೋಜನೆ ಟೀಕಿಸುವವರು ಮನುವಾದಿಗಳು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಟ್ಟಿ ಯೋಜನೆಗಳು 13 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರ ಘೋಷಣೆಗಳು. ಜವಾಬ್ದಾರಿಯುತವಾದ ರಾಜಕೀಯ ಪಕ್ಷ ರಾಜ್ಯದ ಆರ್ಥಿಕ ಸ್ಥಿತಿ ಹೇಗಿದೆ, ಎಷ್ಟು ಸಾಲದಲ್ಲಿದೆ, ಎಷ್ಟು ಬಡ್ಡಿ ಕಟ್ಟಬೇಕು, ಹಣಕಾಸಿನ ಸ್ಥಿತಿ ಹೇಗಿದೆ, ಎಷ್ಟು ತೆರಿಗೆ ಸಂಗ್ರಹ ಆಗುತ್ತದೆ, ಎಷ್ಟನ್ನು ಉಚಿತವಾಗಿ ಕೊಡಬಹುದು ಎಂಬ ಆಧಾರದಲ್ಲಿ ಯೋಜನೆಗಳನ್ನು ಘೋಷಣೆ ಮಾಡಬೇಕು. ಆದರೆ ಕಾಂಗ್ರೆಸ್ ಇದ್ಯಾವುದನ್ನೂ ಪರಿಗಣಿಸದೆ ಧೈರ್ಯದಿಂದ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಷರತ್ತುಗಳನ್ನು ವಿಧಿಸುತ್ತಿದೆ ಎಂದು ಕಿಡಿ ಕಾರಿದರು.
ವಿದ್ಯುತ್ ದರ ಏರಿಕೆಯಾಗಿದ್ದು, ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಹಣಕಾಸು ಸಚಿವರು, ಮುಖ್ಯಮಂತ್ರಿಗಳೂ ಆದ ಸಿದ್ದರಾಮಯ್ಯ ಅವರು ಹಣವನ್ನು ಎಲ್ಲಿಂದ ಹೊಂದಿಸುತ್ತಾರೆ ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು. ಮಹಿಳೆಯರು ಖುಷಿಯಿಂದಲೇ ಬಸ್ ಗಳಲ್ಲಿ ಓಡಾಡುತ್ತಿದ್ದಾರೆ. ಆದರೆ, ಕೆಎಸ್ಆರ್ಟಿಸಿ ಗೆ ಆಗುತ್ತಿರುವ ನಷ್ಟವನ್ನು ಯಾವ ರೀತಿ ಭರಿಸುತ್ತಾರೆ ಎಂಬುದನ್ನೂ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ದರ ಏರಿಕೆಗೆ ಬಿಜಪಿ ಕಾರಣ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿ ಮಾಡುವಾಗಲೇ ಇದೆಲ್ಲದರ ಮಾಹಿತಿ ಅವರಿಗಿತ್ತು. ಚುನಾವಣೆ ಮುಗಿದು ಒಂದು ತಿಂಗಳಾಗಿದೆ. ಚುನಾವಣೆ ಪ್ರಕ್ರಿಯೆ ಮುಗಿದು ಮೂರು ತಿಂಗಳಾಗಿದೆ. ಬೆಲೆ ಏರಿಕೆ ಹಗ್ಗ ತಿಳಿದು ಘೋಷಣೆ ಮಾಡಿದ್ದಾರೆ. ಚುನಾವಣೆ ನಂತರ ಇದೆಲ್ಲವನ್ನು ಬಿಜೆಪಿ ಮೇಲೆ ಹಾಕಿ ಕೈ ತೊಳೆದುಕೊಳ್ಳಬಹುದು ಎಂದುಕೊಂಡಿದ್ದರೆ ಅದಕ್ಕೆ ಜನರೇ ಉತ್ತರ ನೀಡುತ್ತಾರೆ ಎಂದರು.