ದಾವಣಗೆರೆ: ಮಹಾಮಾರಿ ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಘೋಷಿಸಿರುವ ಲಾಕ್ ಡೌನ್ ಒಂದೊಮ್ಮೆ ಮುಂದುವರೆದರೂ ದಾವಣಗೆರೆ ಜಿಲ್ಲೆಯಲ್ಲಿ ಅಕ್ಕಿಗೆ ಕೊರತೆ ಎದುರಾಗದು.
ಭತ್ತದ ಹಂಗಾಮು ನವೆಂಬರ್‌ನಿಂದ ಪ್ರಾರಂಭವಾಗಿ ಜನವರಿ ವೇಳೆಗೆ ಬಹುತೇಕ ಮುಕ್ತಾಯವಾಗಲಿದೆ. ಆ ಸಂದರ್ಭದಲ್ಲಿ ಅಕ್ಕಿ ಗಿರಣಿಗಳಿಗೆ ಅವಶ್ಯ ಇರುವಷ್ಟು ಭತ್ತ ಖರೀದಿ ಮಾಡಲಾಗುತ್ತದೆ. ದಾವಣಗೆರೆ ಜಿಲ್ಲೆಯ ಬಹುತೇಕ ಎಲ್ಲಾ ಅಕ್ಕಿ ಗಿರಣಿಗಳಲ್ಲಿ ಭತ್ತದ ದಾಸ್ತಾನು ಇರುವುದರಿಂದ ಅಕ್ಕಿಯ ಸಮಸ್ಯೆಯೇ ಉಂಟಾಗದು ಎಂದು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಜೆ. ಪ್ರಭು ಮಾಹಿತಿ ನೀಡಿದ್ದಾರೆ.
ದಾವಣಗೆರೆ ತಾಲೂಕಿನಲ್ಲೇ 46 ಅಕ್ಕಿ ಗಿರಣಿ ಒಳಗೊಂಡಂತೆ ಜಿಲ್ಲೆಯಲ್ಲಿ 55 ರೈಸ್‌ಮಿಲ್ ಇವೆ. ದಾವಣಗೆರೆ ತಾಲೂಕಿನಲ್ಲಿ 32 ಒಳಗೊಂಡಂತೆ ಒಟ್ಟೂ 40ಕ್ಕೂ ಹೆಚ್ಚು ಅಕ್ಕಿ ಗಿರಣಿಗಳಲ್ಲಿ ಕೆಲಸ ಮಾಡುತ್ತಿವೆ. ಎಲ್ಲಾ ಮಿಲ್‌ಗಳಲ್ಲಿ ಭತ್ತದ ಸ್ಟಾಕ್ ಇದೆ.ಒಂದೊಮ್ಮೆ ಏ.14 ರ ನಂತರವೂ ಲಾಕ್‌ಡೌನ್ ಮುಂದುವರೆದರೂ ಜಿಲ್ಲೆಯಲ್ಲಿ ಅಕ್ಕಿ ಕೊರತೆ ಆಗುವುದೇ ಇಲ್ಲ ಎನ್ನುತ್ತಾರೆ ಪ್ರಭು.
ದಾವಣಗೆರೆಯಿಂದ ಗೋವಾ, ಕೇರಳಕ್ಕೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ರಫ್ತಾಗುತ್ತದೆ. ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಕಾರಣಕ್ಕೆ ಅಕ್ಕಿ ಸಾಗಿಸಲಾಗುತ್ತಿಲ್ಲ. ರಾಣೆಬೆನ್ನೂರು, ಹಾವೇರಿ ಭಾಗಕ್ಕೆ ಅಕ್ಕಿ ರವಾನೆ ಆಗಬೇಕಾಗಿದೆ. ಆ ಭಾಗದಿಂದ ಸಾಕಷ್ಟು ಬೇಡಿಕೆ ಬರುತ್ತಿದೆ. ಲಾಕ್‌ಡೌನ್ ನಡುವೆಯೂ ಅಗತ್ಯ ವಸ್ತುಗಳ ಸಾಗಾಣಿಕೆಗೆ ಅನುಮತಿ ದೊರೆತಲ್ಲಿ ಎಲ್ಲರಿಗೆ ಅನುಕೂಲ ಆಗಲಿದೆ ಎಂಬ ಅಭಿಪ್ರಾಯ ಕೆಲ ವರ್ತಕರದ್ದಾಗಿದೆ.
ಮಹಾಮಾರಿ ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಘೋಷಿಸಿರುವ ಲಾಕ್‌ಡೌನ್ ನಡುವೆ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ತಂದು, ಮಾರಾಟ ಮಾಡಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ದಾವಣಗೆರೆ ಎಪಿಎಂಸಿಯಲ್ಲಿ ಮತ್ತೆ ವಹಿವಾಟು ಪ್ರಾರಂಭವಾಗಿದೆ. ಆದರೆ, ಮಾಹಿತಿ ಕೊರತೆ ಇತರೆ ಕಾರಣಕ್ಕೆ ಮಂಗಳವಾರ ತರಕಾರಿ ಹೊರತುಪಡಿಸಿದರೆ ಇತರೆ ಧಾನ್ಯಗಳ ಅವಕ ಬಂದಿಲ್ಲ. ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ತರಬಹುದು. ಅವರಿಗೆ ಪಾಸ್ ಅವಶ್ಯಕತೆ ಇಲ್ಲ ಎಂದು ಜೆ. ಪ್ರಭು ತಿಳಿಸಿದ್ದಾರೆ.
ದಾವಣಗೆರೆ ಮಾರುಕಟ್ಟೆಯಲ್ಲಿ 1,600 ಖರೀದಿ ಅಂಗಡಿಗಳಿವೆ. 800 ಅಂಗಡಿಗಳಲ್ಲಿ ಖರೀದಿ ನಡೆಯುತ್ತದೆ. 400 ದಲ್ಲಾಲರು ಇದ್ದಾರೆ. ಕೋವಿಡ್ 19 ತಡೆಗಟ್ಟಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.