Advertisement

Udupi: ಕಟ್ಟಡ ನಿರ್ಮಾಣ ಸಾಮಗ್ರಿ ಕೊರತೆಯಿಲ್ಲ: ಉಡುಪಿ ಡಿಸಿ

02:18 AM Oct 01, 2023 | Team Udayavani |

ಉಡುಪಿ: ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳಿಗೆ ಕೊರತೆ ಇಲ್ಲ. 2023-24ನೇ ಸಾಲಿನಲ್ಲಿ 127 ಅಧಿಕೃತ ಕಟ್ಟಡ ಕಲ್ಲುಗಣಿ ಗುತ್ತಿಗೆಗಳಿಂದ 32,62,808 ಮೆಟ್ರಿಕ್‌ ಟನ್‌ ಉಪಖನಿಜ ವಾರ್ಷಿಕವಾಗಿ ಉತ್ಪಾದನೆ ಮಾಡಲಾಗುತ್ತಿದೆ. ಜಿಲ್ಲೆಯ ಬೇಡಿಕೆಯ ಪ್ರಮಾಣ 20,00,000 ಮೆಟ್ರಿಕ್‌ ಟನ್‌ಗಳಾಗಿವೆ. ಹೀಗಾಗಿ ಜಿಲ್ಲೆಯ ಬೇಡಿಕೆಯನ್ನು ಪೂರ್ಣವಾಗಿ ಪೂರೈಸಲಾಗುತ್ತಿದೆ.
ಸಾಮಾನ್ಯ ಮರಳು ತಿಂಗಳಿಗೆ ಅಂದಾಜು 65,500 ಮೆಟ್ರಿಕ್‌ ಟನ್‌ ಕಟ್ಟಡ ನಿರ್ಮಾಣ ಕಾಮಗಾರಿಗೆ ಬೇಕಾಗುತ್ತದೆ. ಈಗಾಗಲೇ 1,32,215 ಮೆ.ಟನ್‌ ಸಾಮಾನ್ಯ ಮರಳು ಲಭ್ಯವಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ 41 ಮರಳು ಬ್ಲಾಕ್‌ಗಳಲ್ಲಿ ಅಕ್ಟೋಬರ್‌ನಿಂದ ಸಾಮಾನ್ಯ ಮರಳನ್ನು ಪೂರೈಸಲಾಗುತ್ತದೆ.

Advertisement

ಪರಿಸರ ವಿಮೋಚನಾ ಪತ್ರದಲ್ಲಿ ಜೂನ್‌ 5ರಿಂದ ಅಕ್ಟೋಬರ್‌ 15ರ ವರೆಗೆ ನಿರ್ಬಂಧವಿದ್ದು, ಪ್ರಸ್ತುತ ಮರಳು ಗಣಿ ಗುತ್ತಿಗೆಗಳಲ್ಲಿ ಮರಳುಗಾರಿಕೆ ಕಾರ್ಯವು ಸ್ಥಗಿತಗೊಂಡಿರುತ್ತದೆ. ಅದರಂತೆ 3 ಮರಳು ಗುತ್ತಿಗೆಗಳಿಂದ 96,220 ಮೆ.ಟನ್‌ ಸಾಮಾನ್ಯ ಮರಳು ಲಭ್ಯವಿರುತ್ತದೆ. ಪರಿಸರ ವಿಮೋಚನಾ ಪತ್ರದ ಪ್ರಕ್ರಿಯೆಯಲ್ಲಿರುವ 19 ಮರಳು ಬ್ಲಾಕ್‌ಗಳಲ್ಲಿ 3,44,603 ಮೆಟನ್‌ ಪ್ರಮಾಣದ ಮರಳು ಲಭ್ಯವಿರುತ್ತದೆ. ಟೆಂಡರ್‌ ಪ್ರಕ್ರಿಯೆ ಕೈಗೊಳ್ಳಲು ಬಾಕಿ ಇರುವ 36 ಮರಳು ಬ್ಲಾಕ್‌ಗಳಲ್ಲಿ 12,01,751 ಮೆ.ಟನ್‌ ಮರಳು ಲಭ್ಯವಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 1,61,360 ಮೆಟನ್‌ ಎಂ-ಸ್ಯಾಂಡ್‌ ಲಭ್ಯವಿದೆ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅ.7ರ ಗಡುವು
ರಾಜ್ಯ ಸರಕಾರ ಡಿಸೆಂಬರ್‌ನಿಂದಲೇ ಉಪಖನಿಜ ಸರಬರಾಜು ಮಾಡುವ ಎಲ್ಲ ವಾಹನಗಳಿಗೆ ಜಿಪಿಎಸ್‌ ಅನ್ನು ಕಡ್ಡಾಯಗೊಳಿಸಿದೆ. ಅದರಂತೆ ಜಿಪಿಎಸ್‌ ಅಳವಡಿಸಿಕೊಂಡಲ್ಲಿ ಐಎಲ್‌ಎಂಎಸ್‌ ತಂತ್ರಾಂಶದಲ್ಲಿ ಖನಿಜ ಸಾಗಾಣಿಕೆ ಪರವಾನಿಗೆ ತೆಗೆಯಲು ಸಾಧ್ಯವಿದೆ. ಕಟ್ಟಡ ಸಾಮಗ್ರಿ ಸಾಗಾಣಿಕೆ ವಾಹನಗಳಿಗೆ ಅ. 7ರ ವರೆಗೆ ಜಿಪಿಎಸ್‌ ಅಳವಡಿಸಿಕೊಳ್ಳಲು ಕಾಲಾವಕಾಶ ನೀಡಲಾಗಿದೆ. ಕಟ್ಟಡ ಕಲ್ಲು, ಜಲ್ಲಿ, ಎಂ-ಸ್ಯಾಂಡ್‌ ಆವಶ್ಯಕತೆಯಿದ್ದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಂಟ್ರೋಲ್‌ ರೂಂ: 0820-2950088ಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.

ಬಂದ್‌ಗೆ ಅವಕಾಶವಿಲ್ಲ: ಪೊಲೀಸ್‌ ಇಲಾಖೆ
ಉಡುಪಿ: ಬಂದ್‌ ಕರೆ ನೀಡುವುದು ಕಾನೂನು ಬಾಹಿರ ಮತ್ತು ಸಂವಿಧಾನ ವಿರೋಧಿ, ಜನ ಸಾಮಾನ್ಯರ ಮೂಲಭೂತ ಹಕ್ಕು ವಿರೋಧಿ ಎಂದು ಕೇರಳದ ಹೈಕೋರ್ಟ್‌ ತೀರ್ಪಿನಲ್ಲಿ ಹೇಳಿದೆ ಮತ್ತು ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್‌ ಕೂಡ ಆದೇಶಿಸಿದೆ. ಹೀಗಾಗಿ ಅ. 3ರಂದು ಜಿಲ್ಲಾ ಲಾರಿ ಮಾಲಕರ ಒಕ್ಕೂಟ ಮತ್ತು ಇತರ ಸಂಘಟನೆಗಳು ನೀಡಿರುವ ಬಂದ್‌ ಕರೆ ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿಯಾಗಿದೆ. ಜನಸಾಮಾನ್ಯರ ಮೂಲಭೂತ ಹಕ್ಕು ಚ್ಯುತಿಯಾವುದರಿಂದ ಯಾವುದೇ ರೀತಿಯ ಬಂದ್‌ಗೆ ಅಥವಾ ಇದಕ್ಕೆ ಸಂಬಂಧಿಸಿದ ಇತರೆ ಪ್ರತಿಭಟನೆಗೆ ಅವಕಾಶ ಇರುವುದಿಲ್ಲ. ಜಿಲ್ಲೆಯಲ್ಲಿ ಯಾವುದೇ ರೀತಿಯ ಮೆರಣಿಗೆಯನ್ನು ಹಮ್ಮಿಕೊಳ್ಳಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ.ಅರುಣ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಲಾರಿ ಮಾಲಕರ ಮುಷ್ಕರ: ದೈವ ದೇವರಿಗೆ ಮೊರೆ
ಜಿಲ್ಲೆಯಾದ್ಯಂತ ಕಟ್ಟಡ ಸಾಮಗ್ರಿ ಸಾಗಿಸುವ ಲಾರಿ, ಟೆಂಪೋ ಮಾಲಕರ ಮುಷ್ಕರ ಶನಿವಾರವೂ ನಡೆದಿದ್ದು, ರವಿವಾರವೂ ಮುಂದುವರಿಯಲಿದೆ. ಈ ಮಧ್ಯೆ ಲಾರಿ ಮಾಲಕರ ಒಕ್ಕೂಟವು ಸಮಸ್ಯೆ ನಿವಾರಣೆಗಾಗಿ ದೈವ, ದೇವರ ಮೊರೆ ಹೋಗಿರುವುದು ಕಂಡು ಬಂದಿದೆ.

Advertisement

ಲಾರಿ/ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟದ ಪೆರ್ಡೂರು, ಹಿರಿಯಡಕ, ಕುಕ್ಕೆಹಳ್ಳಿ ವಲಯದಿಂದ ಶನಿವಾರ ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನ, ಮುಳ್ಳುಗುಡ್ಡೆ ಕೊರಗಜ್ಜನ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಹಾಗೆಯೇ ವಿವಿಧ ಒಕ್ಕೂಟದವರು ಅಲ್ಲಲ್ಲಿ$ ಸಭೆ ಸೇರಿ ಮುಂದಿನ ಹೋರಾಟಗಳ ಬಗ್ಗೆ ರೂಪರೇಖೆ ಸಿದ್ಧಪಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next