ಬೀದರ: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಡಿಕೆಗೆ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್ ಹಾಗೂ ಹೋರಾಟಕ್ಕೆ ಜಿಲ್ಲೆಯಲ್ಲಿ ಸ್ಪಂದನೆ ದೊರೆತಿಲ್ಲ.
ಉತ್ತರ ಕರ್ನಾಟಕ ಹೋರಾಟ ಸಮಿತಿಯ ಕೆಲವು ಸದಸ್ಯರು ಜಿಲ್ಲಾ ಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರ ಸಲ್ಲಿಸಿದರು. ಕರ್ನಾಟಕ ಏಕೀಕರಣವಾಗಿ 62 ವರ್ಷಗಳ ಕಳೆದರೂ ಕೂಡ ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕದಂತೆ ಅಭಿವೃದ್ಧಿ ಹೊಂದಿಲ್ಲ. ಕಾರಣ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚಿಸುವ ಕುರಿತು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಹೈದ್ರಾಬಾದ ಕರ್ನಾಟಕದ ಸಮಗ್ರ ಅಭಿವದ್ಧಿಗಾಗಿ ಕಲಂ 371(ಜೆ) ಕಾನೂನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗೆ ವಿರೋಧಿ ಸುವುದಾಗಿ ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿತು.
ಹೈ.ಕ. ಸಮಿತಿ: ಹೈದ್ರಾಬಾದ ಕರ್ನಾಟಕ ಪ್ರದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಿರುವುದನ್ನು ಸಮಿತಿ ಖಂಡಿಸುತ್ತದೆ. ಕರ್ನಾಟಕ ಏಕೀಕರಣಕ್ಕಾಗಿ ನಮ್ಮ ಹಿರಿಯರು ಹೋರಾಟ ಮಾಡಿ ರಾಜ್ಯವನ್ನು ಕಟ್ಟಿದ್ದಾರೆ. ಡಾ| ಡಿ.ಎಂ. ನಂಜುಡಪ್ಪ ಅವರ ವರದಿಯಲ್ಲಿ, ಕರ್ನಾಟಕ ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ಇರುವುದು ಸತ್ಯವಾದರೂ ಅತೀ ಹೆಚ್ಚು ಅಸಮಾನತೆಗೆ ಗುರಿಯಾಗಿರುವುದು ಹೈದ್ರಾಬಾದ ಕರ್ನಾಟಕ ಭಾಗ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಹೈ.ಕ. ಸಂವಿಧಾನದ ಕಲಂ 371(ಜೆ) ತಿದ್ದುಪಡಿಯ ಮೂಲಕ ವಿಶೇಷ ಸ್ಥಾನಮಾನ ಪಡೆದಿದ್ದು, ಇದು ಸಮರ್ಪಕ ಅನುಷ್ಠಾನವಾಗುತ್ತಿಲ್ಲ ಎಂಬುದು ಸತ್ಯ. ಹೈ.ಕ. ವಿಶೇಷ ಸ್ಥಾನಮಾನದಲ್ಲಿನ ಗೊಂದಲಗಳನ್ನು ಕೂಡಲೆ ಬಗೆಹರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಪ್ರೊ| ದೇವಿಂದ್ರ ಕಮಲ್, ಗುಣವಂತರಾಚ ಮುಂಗಳೂರೆ, ಅನೀಲಕುಮಾರ ಬೆಲ್ದಾರ, ಶಂಕರರಾವ್ ಹೊನ್ನಾ, ಸುಭಾಷ ಗಾದಗೆ, ಶಿವರಾಜ ಪಾಟೀಲ, ಪ್ರಭು, ಸುಧಾಕರ ಗಂದಗೆ, ಬಸವರಾಜ ಪಾಟೀಲ ಇದ್ದರು.
ಕರವೇ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚಿಸುವ ಹೋರಾಟ ವಿರೋಧಿ ಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡುವುದಕ್ಕೆ ಕರವೇ ಬೆಂಬಲ ನೀಡುವುದಿಲ್ಲ. ಈ ಹೋರಾಟದಲ್ಲಿ ಕೆಲ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಮುಂದಾಗಿದ್ದಾರೆ. ಕೆಲ ರಾಜಕಾರಣಿಗಳು ಅಭಿವೃದ್ಧಿ ಮಾತು ಬಿಟ್ಟು ಪ್ರತ್ಯೇಕ ರಾಜ್ಯ ಕುರಿತು ಮಾತನಾಡುತ್ತಿರುವುದನ್ನು ಕರವೇ ಖಂಡಿಸುತ್ತದೆ. ಪ್ರತ್ಯೇಕ ರಾಜ್ಯಕ್ಕೆ ಯಾವುದೇ ಸ್ಪಂದನೆ ನೀಡಬಾರದೆಂದು ಆಗ್ರಹಿಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾ ಧಿಕಾರಿಗಳ ಕಚೇರಿಗೆ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಶಿವಕುಮಾರ ತುಂಗಾ, ವಿನೋದ ಗುಪ್ತಾ, ಮುಕೇಶ ಜಿ., ರಾಜು ಕೊಳ್ಳಾರ, ಸಂಜು ಯಾದವ, ಪಿಂಟು ಡೋಣೆ, ಶೋಭಾ, ರೇಖಾ ಇತರರು ಇದ್ದರು