Advertisement
ಅಗದಲಿದವರಿಗೆ ಮುಕ್ತಿ ಕಲ್ಪಿಸಬೇಕು ಎನ್ನುವ ಕಾರಣಕ್ಕೆ ಹಿಂದೆ ಪ್ರತಿಯೊಂದು ಗ್ರಾಮದಲ್ಲಿ ಸ್ಮಶಾನ ಭೂಮಿಯಂತಲೇ ಗುರುತಿಸಿ ರಕ್ಷಣೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಹೊಸಗ್ರಾಮಗಳು ಹುಟ್ಟಿಕೊಂಡಂತೆ ಮನೆ, ಕಟ್ಟಡಗಳಿಗೆ ನೀಡಿದ ಆದ್ಯತೆ ಪ್ರತ್ಯೇಕ ಸ್ಮಶಾನ ಭೂಮಿಗೆ ನೀಡಲಿಲ್ಲ. ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸುರಿಯಲಾಗುತ್ತಿದೆ. ಮಹಾನಗರ ವ್ಯಾಪ್ತಿಯೊಂದರಲ್ಲಿ ಒಂದೊಂದು ಯೋಜನೆಗಳ ವೆಚ್ಚ ಸಾವಿರಾರು ಕೋಟಿ ರೂಪಾಯಿ. ಆದರೆ ಮೂಲ ಸೌಲಭ್ಯಗಳ ಪೈಕಿ ಒಂದಾದ ಗ್ರಾಮೀಣ ಪ್ರದೇಶದಲ್ಲಿ ಪ್ರತ್ಯೇಕ ಸ್ಮಶಾನ ಭೂಮಿ ವ್ಯವಸ್ಥೆ ಕಲ್ಪಿಸುವ ಕುರಿತು ಚಿಂತನೆಗಳು ಇಲ್ಲಂದತಾಗಿವೆ.
Related Articles
Advertisement
ಹಳ್ಳ, ಕೆರೆ ದಂಡೆಯೇ ಗತಿ: ನಗರ, ಪಟ್ಟಣ, ಕೈಗಾರಿಕೆ ಪ್ರದೇಶಗಳಿಗೆ ಹೊಂದಿ ಕೊಂಡಿರುವ ಗ್ರಾಮಗಳ ಭೂಮಿಗೆ ಚಿನ್ನದ ಮೌಲ್ಯ ಬರುತ್ತಿರುವುದು ಸ್ಮಶಾನ ಭೂಮಿ ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಲತಲಾಂತರ ದಿಂದ ಶವ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದರೂ ಭೂ ಮಾಲಿಕರ ತಕರಾರಿನಿಂದ ಸಮಸ್ಯೆಯಾಗಿಯೇ ಪರಿಣಮಿಸಿವೆ. ಮನೆಯ ಸದಸ್ಯರನ್ನು ಕಳೆದುಕೊಂಡು ದುಃಖ ಒಂದೆಡೆಯಾದರೆ ಅಂತ್ಯಸಂಸ್ಕಾರ ಮಾಡುವುದಾದರೂ ಎಲ್ಲಿ ಎನ್ನುವ ಚಿಂತೆ ಸೂತಕದ ಮನೆಗೆ ದೊಡ್ಡ ಸಮಸ್ಯೆಯಾಗಿದೆ. ಹೊಲ, ತೋಟ, ಸ್ವಂತ ಕೃಷಿ ಜಮೀನು ಹೊಂದಿದವರಿಗೆ ಇದೊಂದು ಸಮಸ್ಯೆಯಲ್ಲ. ಆದರೆ ಸ್ವಂತ ಭೂಮಿ ಇಲ್ಲದವರ ಪಾಡು ದೇವರಿಗೆ ಪ್ರೀತಿ. ಹೀಗಾಗಿಯೇ ಹಳ್ಳ, ನಾಲೆ, ಕರೆ ಅಕ್ಕಪಕ್ಕದ ಸ್ಥಳ ನೆಚ್ಚಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಭೂಮಿ ಕೊಡುವವರಿಲ್ಲ: ಕೆಲ ಗ್ರಾಮಗಳಲ್ಲಿ ಸರಕಾರಿ ಭೂಮಿಯಿದ್ದರೂ ರಕ್ಷಣೆಯ ಕೊರತೆ ಹಿನ್ನೆಲೆಯಲ್ಲಿ ಒತ್ತುವರಿ ಯಾಗಿವೆ. ಪ್ರತಿಯೊಂದು ಗ್ರಾಮಗಳಿಗೆ ರುದ್ರಭೂಮಿ ಕಲ್ಪಿಸಬೇಕೆನ್ನುವ ಕಾರಣಕ್ಕೆ ಸರಕಾರ ಬಿಡುಗಡೆ ಮಾಡುತ್ತಿರುವ ಹಣ ಯಾವುದಕ್ಕೂ ಸಾಲುತ್ತಿಲ್ಲ. ಜಿಲ್ಲೆಯೊಂದಕ್ಕೆ ಪ್ರತಿ ವರ್ಷ 20-22 ಲಕ್ಷ ರೂ. ಬಿಡುಗಡೆಯಾಗುತ್ತಿರುವುದು ಯಾವುದಕ್ಕೂ ಸಾಲುತ್ತಿಲ್ಲ. ಭೂಮಿಯ ಬೆಲೆ ಹೆಚ್ಚಾಗಿರುವುದರಿಂದ ಸರಕಾರ ಕೇಳುವ ದರಕ್ಕೆ ಯಾರೂ ಭೂಮಿ ಮಾರಾಟ ಮಾಡಲು ಮುಂದೆ ಬರುತ್ತಿಲ್ಲ. ಸರಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ಭೂಮಿ ಖರೀದಿಸಿ ಅಭಿವೃದ್ಧಿಪಡಿಸುವುದು ಅಸಾಧ್ಯ ಎನ್ನುವಂತಾಗಿದೆ.
ಕೆಲ ಗ್ರಾಮಗಳಲ್ಲಿ ಸರಕಾರಿ ಭೂಮಿ ಲಭ್ಯತೆ ಗುರುತಿಸಿ ಮಂಜೂರಾತಿಗೆ ಪ್ರಸ್ತಾವನೆ ಹಾಗೂ ನೇರ ಖರೀದಿಗೆ ಸಲ್ಲಿಸಿದ ಪ್ರಸ್ತಾವನೆಗಳು ಕೇವಲ ಪತ್ರ ವ್ಯವಹಾರಕ್ಕೆ ಸಿಮೀತವಾಗುತ್ತಿವೆ. ಬೇರೆ ಇಲಾಖೆಯಿಂದ ಕಂದಾಯ ಇಲಾಖೆಗೆ ಭೂಮಿ ಪರಭಾರೆ ಕಾರ್ಯ ಕೂಡ ಅಷ್ಟೊಂದು ಸುಲಭವಾಗಿ ಆಗುತ್ತಿಲ್ಲ. ಇನ್ನೂ ನೇರ ಖರೀದಿಗೆ ಬೇಕಾದ ಅಗತ್ಯ ಅನುದಾನ ಕೂಡ ಬಾರದಿರುವುದು ಇಷ್ಟೊಂದು ವರ್ಷ ಕಳೆದರೂ ಪ್ರತಿಯೊಂದು ಗ್ರಾಮಕ್ಕೆ ರುದ್ರಭೂಮಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ.
ಶವ ಸಂಸ್ಕಾರಕ್ಕಾಗಿ ಹಿಂದಿನಿಂದಲೂ ಪ್ರತಿಯೊಂದು ಗ್ರಾಮದಲ್ಲಿ ಒಂದಿಲ್ಲಾ ಒಂದು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪ್ರತ್ಯೇಕವಾಗಿ ಸ್ಮಶಾನ ಇಲ್ಲದ ಗ್ರಾಮಗಳಿಗೆ ಸರಕಾರದಿಂದಲೇ ಕಲ್ಪಿಸಲಾಗುತ್ತಿದೆ. ಪ್ರತ್ಯೇಕ ಸ್ಮಶಾನ ಇಲ್ಲದ ಗ್ರಾಮಗಳಲ್ಲಿ ಸರಕಾರಿ ಭೂಮಿ ಹಾಗೂ ಖಾಸಗಿಯವರಿಂದ ಖರೀದಿಸಿ ಒದಗಿಸಲಾಗುತ್ತಿದೆ. ಅಗತ್ಯಕ್ಕೆ ಹಾಗೂ ಸರಕಾರದ ಅನುದಾನ ಮೇರೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.– ಶಿವಾನಂದ ಕರಾಳೆ, ಅಪರ ಜಿಲ್ಲಾಧಿಕಾರಿ
–ಹೇಮರಡ್ಡಿ ಸೈದಾಪುರ