Advertisement

ಹಿರಿಯ ಇತಿಹಾಸಕಾರ ಷ.ಶೆಟ್ಟರ್‌ ಇನ್ನಿಲ್ಲ

11:40 PM Feb 28, 2020 | Lakshmi GovindaRaj |

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಇತಿಹಾಸಕಾರ ಮತ್ತು ಸಂಶೋಧಕ ಷ.ಶೆಟ್ಟರ್‌ (85) ಅವರು ಶುಕ್ರವಾರ ಕೊನೆಯುಸಿರೆಳೆದರು. ಉಸಿರಾಟದ ತೊಂದರೆಯಿಂದಾಗಿ ಕೆಲ ದಿನಗಳ ಹಿಂದೆಷ್ಟೇ ಷ.ಶೆಟ್ಟರ್‌ ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶುಕ್ರವಾರ ಮುಂಜಾನೆ 3.15ರ ವೇಳೆ ಹೃದಯಘಾತದಿಂದ ನಿಧನರಾದರು.

Advertisement

ಪತ್ನಿ, ಇಬ್ಬರು ಪುತ್ರಿಯರು ಸೇರಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಶೆಟ್ಟರ್‌ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಭೂಪಸಂದ್ರದ ಸ್ವಗೃಹದಲ್ಲಿ ಇರಿಸಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಸೇರಿ ಹಲವು ಗಣ್ಯರು ಶೆಟ್ಟರ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಷ.ಶೆಟ್ಟರ್‌ ಅವರ ಅಳಿಯಂದಿರು ಮತ್ತು ಮೊಮ್ಮಕ್ಕಳು ಶನಿವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಅವರು ಬಂದ ನಂತರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಲೂರು ತಾಲೂಕಿನ ಆಲಹಳ್ಳಿಯಲ್ಲಿ ಲಿಂಗಾಯಿತ ಸಂಪ್ರದಾಯದ ರೀತಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಶೆಟ್ಟರ್‌ ಅವರ ಆಪ್ತರಾದ ವೈ.ಎನ್‌.ಕೋದಂಡರಾಮ ತಿಳಿಸಿದ್ದಾರೆ.

ಹಂಪಸಾಗರದಲ್ಲಿ ಜನನ: ಇತಿಹಾಸ ಸಂಶೋಧನೆ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದವರೆಗೆ ಹೆಸರು ಮಾಡಿದ್ದ ಷ.ಶೆಟ್ಟರ್‌ ಅವರು 1935ರ ಡಿಸೆಂಬರ್‌ 11ರಂದು ಬಳ್ಳಾರಿ ಜಿಲ್ಲೆ ಹಡಗಲಿ ತಾಲೂಕಿನ ಹಂಪಸಾಗರದಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಳ್ಳಾರಿಯಲ್ಲಿ ಪೂರೈಸಿ ಆ ನಂತರ ಮೈಸೂರು, ಧಾರವಾಡ ಮತ್ತು ಕೇಂಬ್ರಿಡ್ಜ್ನಲ್ಲಿ ಉನ್ನತ ಶಿಕ್ಷಣ ಪಡೆದರು.

ಹಳೆಗನ್ನಡ ಸಾಹಿತ್ಯದ ಬಗ್ಗೆ ಹೆಚ್ಚಿನ ಅಭಿರುಚಿ ಹೊಂದಿದ್ದ ಅವರು ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ಕಾವ್ಯ ಕುರಿತು ಸುಮಾರು 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಹೆಸರಾಂತ ವಿಶ್ವವಿದ್ಯಾಲಯಗಳಾದ ಕೇಂಬ್ರಿಡ್ಜ್, ಹಾರ್ವಡ್‌, ಹೈಡಲ್‌ಬರ್ಗ್‌, ಮಾಸ್ಕೋ ಯೂನಿವರ್ಸಿಟಿಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.

Advertisement

2018ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಶ್ರವಣ ಬೆಳಗೊಳದಲ್ಲಿ ಹಮ್ಮಿಕೊಂಡಿದ್ದ “ಪ್ರಥಮ ಹಳೆಗನ್ನಡ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷರಾಗಿದ್ದರು. ಇತಿಹಾಸ ಹಾಗೂ ಪ್ರಾಚೀನ ಲಿಪಿಗಳ ಬಗ್ಗೆ ಆಳವಾದ ಸಂಶೋಧನೆ ನಡೆಸಿದ್ದ ಅವರು “ಶ್ರವಣಬೆಳಗೊಳ, “ಸಾವಿಗೆ ಆಹ್ವಾನ,” ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ,”ಬಾದಾಮಿ ಚಾಲುಕ್ಯರ ಶಾಸನ ಸಾಹಿತ್ಯ,” ಸಾವನ್ನು ಅರಸಿ,

“ಹಳಗನ್ನಡ – ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ,”ಹಳಗನ್ನಡ ಭಾಷೆ, ಭಾಷಾ ಬೆಳವಣಿಗೆ ಮತ್ತು ಭಾಷಾ ಬಾಂಧವ್ಯ,” ಪ್ರಾಕೃತ ಜಗದ್ವಲಯ’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಷ.ಶೆಟ್ಟರ್‌ ಅವರು, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್‌, ಪಂಪ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು.

ಗಣ್ಯರಿಂದ ಕಂಬನಿ: ಷ.ಶೆಟ್ಟರ್‌ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌, ಕನ್ನಡಪರ ಹೋರಾಟಗಾರ ರಾ.ನಂ.ಚಂದ್ರಶೇಖರ ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next