Advertisement
ಪುತ್ತೂರಿನಿಂದ ಪರ್ಲಡ್ಕ, ದೇವಸ್ಯ, ಪಾಣಾಜೆ ರಸ್ತೆಯಲ್ಲಿ ದೇವಸ್ಯದ ವರೆಗೆ ಲೋಕೋಪಯೋಗಿ ಇಲಾಖೆ ಸುಸಜ್ಜಿತ ಕಾಮಗಾರಿ ನಿರ್ವಹಿಸಿದೆ. ಆದರೆ, ಅಲ್ಲಿಂದ ಮುಂದೆ ಚೆಲ್ಯಡ್ಕದ ವರೆಗೆ ತೀರಾ ಹದಗೆಟ್ಟಿದ್ದು, ಸಂಚಾರಕ್ಕೆ ಸೂಕ್ತವಾಗಿಲ್ಲ. ಸದ್ಯ ದೇವಸ್ಯದಿಂದ ಕಾಪಿಕಾಡ್ ವರೆಗೆ ಶಾಸಕರು ಅನುದಾನ ಮಂಜೂರು ಮಾಡಿದ್ದರಿಂದ ರಸ್ತೆ ಅಗಲಗೊಳಿಸಿ, ಡಾಮರು ಹಾಕಿಸುವ ಕೆಲಸ ನಡೆದಿದೆ.
ಇದೇ ರಸ್ತೆಯಲ್ಲಿ ಚೆಲ್ಯಡ್ಕ ಮುಳುಗು ಸೇತುವೆ ಇದ್ದು, ಪ್ರತಿ ಮಳೆಗಾಲದಲ್ಲಿ ಏನಿಲ್ಲವೆಂದರೂ ಐದಾರು ಸಲ ಪ್ರವಾಹದ ನೀರಿನಲ್ಲಿ ಮುಳುಗುತ್ತದೆ. ಒಂದು ಸಲ ಪ್ರವಾಹ ಬಂದರೆ ಐದಾರು ತಾಸು ಸೇತುವೆಯ ಮೇಲೆ ನೀರು ಹರಿಯುತ್ತಿರುತ್ತದೆ. ಮಳೆಗಾಲದಲ್ಲಿ ಜಲಾ ವೃತವಾಗುವ ಸಂದರ್ಭ ಮಾತ್ರ ಜನಪ್ರ ತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ನೆನಪಾಗುವ ಈ ಸೇತುವೆ, ಆಮೇಲೆ ವಿಸ್ಮತಿಗೆ ಸರಿಯುತ್ತದೆ. ಈ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಈ ಭಾಗದ ಜನರ ಬೇಡಿಕೆ ಹಲವು ವರ್ಷಗಳಿಂದ ಈಡೇರಲೇ ಇಲ್ಲ. ಹಿಂದೊಮ್ಮೆ ಬಸ್ಸು ಬಿದ್ದು ಪ್ರಾಣಾಪಾಯ
ಕೆಲವು ವರ್ಷಗಳ ಹಿಂದೆ ಭಾರಿ ಮಳೆಗೆ ಸೇತುವೆ ಸ್ವಲ್ಪ ಮುಳುಗಿತ್ತು. ಖಾಸಗಿ ಬಸ್ ಚಾಲಕ ಸೇತುವೆಯ ಮೇಲಿಂದ ಬಸ್ ದಾಟಿಸುವ ಪ್ರಯತ್ನ ಮಾಡಿದ್ದ. ಆಗ ಬಸ್ ಹೊಳೆಗೆ ಬಿದ್ದು ಪ್ರಾಣಾಪಾಯ ಸಂಭವಿಸಿತ್ತು. ಸೇತುವೆಯ ಎರಡೂ ಬದಿಗಳಲ್ಲಿ ತಡೆಬೇಲಿ ಇಲ್ಲದಿರುವುದೂ ವಾಹನ ಹೊಳೆಗೆ ಬೀಳಲು ಕಾರಣವಾಗಿದೆ. ಸಣ್ಣ ವಾಹನಗಳೂ ಹೊಳೆಗೆ ಬಿದ್ದಿವೆ.
Related Articles
ಸೇತುವೆಯನ್ನು ಅದೆಷ್ಟೋ ವರ್ಷಗಳ ಹಿಂದೆ ನಿರ್ಮಿಸಿರುವುದರಿಂದ ಅಡಿಪಾಯವನ್ನು ಕಗ್ಗಲ್ಲಿನ ಕಂಬದಿಂದ ಕಟ್ಟಲಾಗಿದೆ. ಆದರೆ, ನೀರಿನೊಂದಿಗೆ ತೇಲಿ ಬಂದ ಮರದ ದಿಮ್ಮಿಗಳ ಹೊಡೆತಕ್ಕೆ ಕಂಬದ ಕಲ್ಲುಗಳು ಜಾರಿ ಹೋಗಿ ಶಿಥಿಲಗೊಂಡಿದೆ. ಇದು ಇದೆ ರೀತಿ ಮುಂದುವರಿದರೆ ಸೇತುವೆ ಕುಸಿಯುವುದರಲ್ಲಿ ಸಂದೇಹವಿಲ್ಲ.
Advertisement
ಮುಳುಗಿದರೆ ಸಂಪರ್ಕ ಕಡಿತಈ ಸೇತುವೆ ಮುಳುಗಿದರೆ ಉಪ್ಪಳಿಗೆಯಿಂದ ಗುಮ್ಮಟೆಗದ್ದೆ, ಅಜ್ಜಿಕಲ್ಲು, ಒಳತ್ತಡ್ಕ ಪ್ರದೇಶದ ಜನರ ಸಂಪರ್ಕ ಕಡಿತಗೊಳ್ಳುತ್ತದೆ. ಖಾಸಗಿ ಬಸ್ಸುಗಳು ಇದೇ ರಸ್ತೆಯಲ್ಲಿ ಸಂಚರಿಸಲು ಪರವಾನಿಗೆ ಹೊಂದಿರುವುದರಿಂದ ಪ್ರಯಾಣಿಕರು ಈ ಬಸ್ಸನ್ನೇ ಅವಲಂಬಿಸಿದ್ದಾರೆ. ಇಲ್ಲಿ ಸೇತುವೆ ಮುಳುಗಿದರೆ ಬಸ್ಸು ಸಂಟ್ಯಾರ್ ರಸ್ತೆಯಲ್ಲಿ ಸಾಗುತ್ತದೆ. ಈ ಭಾಗದ ಜನರಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ಆದುದರಿಂದ ಚೆಲ್ಯಡ್ಕ ಮುಳುಗು ಸೇತುವೆಯನ್ನು ಸರ್ವಋತು ಸೇತುವೆಯನ್ನಾಗಿ ಮಾಡಬೇಕೆಂದು ಸಾರ್ವಜನಿಕರು ಒತ್ತಡ ಹಾಕುತ್ತಿದ್ದಾರೆ. ಪರ್ಯಾಯ ಸೇತುವೆ ನಿರ್ಮಾಣವಾಗಲಿ
ಅನೇಕ ವರ್ಷಗಳ ಬೇಡಿಕೆಯಾದ ಚೆಲ್ಯಡ್ಕ ಮುಳುಗು ಸೇತುವೆ ಮೇಲ್ದರ್ಜೆಗೇರಿಸಲು ಅಸಾಧ್ಯವಾದರೆ ಪರ್ಯಾಯ ಸೇತುವೆಯನ್ನು ನಿರ್ಮಿಸುವ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿದೆ. ಇದರಿಂದ ಚೆಲ್ಯಡ್ಕ ಮೂಲಕ ಬೆಟ್ಟಂಪಾಡಿ, ಪಾಣಾಜೆಗೆ ಮತ್ತು ದೇವಸ್ಯ, ಪುತ್ತೂರಿಗೆ ಸಂಚರಿಸುವವರಿಗೆ ಬಹಳ ಅನುಕೂಲವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
– ದಾಮೋದರ ಪಾಟಾಳಿ
ಅರಂತ್ನಡ್ಕ, ರಿಕ್ಷಾ ಚಾಲಕರು ನಬಾರ್ಡ್ ಅನುದಾನಕ್ಕೆ ಪ್ರಯತ್ನ
ಚೆಲ್ಯಡ್ಕ – ದೇವಸ್ಯ ರಸ್ತೆಯನ್ನು ಲೋಕೋಪಯೋಗಿ ರಸ್ತೆಯನ್ನಾಗಿ ಪರಿವರ್ತಿಸಿ ದುರಸ್ತಿ ಮಾಡಲು ಪ್ರಯತ್ನಿಸಲಾಗುವುದು. ಚೆಲ್ಯಡ್ಕ ಸೇತುವೆಯನ್ನು ಮೇಲ್ದರ್ಜೆಗೇರಿಸಲು 2 ಕೋಟಿ ರೂ.ಗಿಂತಲೂ ಹೆಚ್ಚಿನ ಹಣ ಬೇಕಾಗುವುದರಿಂದ ನಬಾರ್ಡ್ ಅನುದಾನಕ್ಕೆ ಪ್ರಯತ್ನಿಸುತ್ತೇನೆ.
- ಸಂಜೀವ ಮಠಂದೂರು
ಪುತ್ತೂರು ಶಾಸಕರು ಗಂಗಾಧರ ನಿಡ್ಪಳ್ಳಿ