Advertisement

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

10:43 PM Sep 18, 2024 | Team Udayavani |

ಚಿಕ್ಕಬಳ್ಳಾಪುರ: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಯಡಿ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 25ರಷ್ಟು ಮೀಸಲಿಸಿರುವ ಆರ್‌ಟಿಇ ಸೀಟುಗಳಿಗೆ ಈ ವರ್ಷವೂ ಕೇಳುವವರೇ ಇಲ್ಲವಾಗಿದೆ.

Advertisement

ರಾಜ್ಯಾದ್ಯಂತ 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಿಗದಿಪಡಿಸಿದ್ದ ಒಟ್ಟು 14,231 ಸೀಟುಗಳಲ್ಲಿ ಭರ್ತಿಯಾಗಿದ್ದು ಕೇವಲ 3,412 ಸೀಟುಗಳು ಮಾತ್ರ.

ಪ್ರಸ್ತಕ ಸಾಲಿನಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡು 3 ತಿಂಗಳೇ ಕಳೆದಿದೆ. ಆದರೆ ಆರ್‌ಟಿಇ ಹೊಸದಾಗಿ ಆರಂಭಗೊಂಡ ಸಂದರ್ಭದಲ್ಲಿ ವಿದ್ಯಾರ್ಥಿ ಪೋಷಕರಲ್ಲಿ ಸೀಟು ಪಡೆಯಲು ಇದ್ದ ಧಾವಂತ, ಪೈಪೋಟಿ ಈಗ ಮಾಯವಾಗಿದೆ. ಸರಕಾರದ ಹಲವು ಕಠಿನ ಕ್ರಮಗಳ ಪರಿಣಾಮ ಮುಂದಿನ ವರ್ಷಗಳಲ್ಲಿ ಆರ್‌ಟಿಇ ಸೀಟುಗಳು ಭರ್ತಿಯಾಗದೆ ಸಂಪೂರ್ಣ ಉಳಿಕೆಯಾದರೂ ಅಚ್ಚರಿ ಪಡುವ ಅಗತ್ಯವಿಲ್ಲ.

ಈ ವರ್ಷ ರಾಜ್ಯದ 31 ಜಿಲ್ಲೆಗಳ ಖಾಸಗಿ ಶಾಲೆಗಳಲ್ಲಿ 14,231 ಆರ್‌ಟಿಇ ಸೀಟುಗಳು ನಿಗದಿಯಾಗಿದ್ದವು. ಆ ಪೈಕಿ 6,090 ಮಕ್ಕಳು ಮೊದಲ ಹಂತದ ಲಾಟರಿಯಲ್ಲಿ ಸೀಟು ಪಡೆದರೆ 2ನೇ ಹಂತದಲ್ಲಿ 1,846 ಮಕ್ಕಳು ಲಾಟರಿ ಮೂಲಕ ಸೀಟು ಪಡೆದಿದ್ದರು. ಆದರೆ ದಾಖಲಾಗಿದ್ದು ಮಾತ್ರ ಮೊದಲ ಹಂತದಲ್ಲಿ 2,885 ಮತ್ತು 2ನೇ ಹಂತದಲ್ಲಿ 527 ಮಕ್ಕಳು. ಎರಡು ಹಂತಗಳ ಲಾಟರಿ ಪ್ರಕ್ರಿಯೆಯಲ್ಲಿ ಒಟ್ಟು 7,936 ಮಂದಿಗೆ ಆರ್‌ಟಿಇ ಸೀಟು ಸಿಕ್ಕರೂ ಶಾಲೆಗೆ ದಾಖಲಾಗಿದ್ದು ಮಾತ್ರ 3,412 ಮಾತ್ರ, ಸೀಟು ಸಿಕ್ಕರೂ 4,524 ಮಕ್ಕಳು ಆರ್‌ಟಿಇ ಸೀಟು ಪಡೆಯಲೇ ಇಲ್ಲ.

ಬಾಗಲಕೋಟೆ, ಬೆಳಗಾವಿ ಹೆಚ್ಚು ದಾಖಲಾತಿ
ಅತಿ ಹೆಚ್ಚು ಆರ್‌ಟಿಇ ಸೀಟು ಭರ್ತಿಯಾದ ಜಿಲ್ಲೆಯಲ್ಲಿ ಬಾಗಲಕೋಟೆ ಮಂಚೂಣಿಯಲ್ಲಿದೆ. ಇಲ್ಲಿ ಒಟ್ಟು 1,017 ಪೈಕಿ 482 ಸೀಟು ಭರ್ತಿಯಾದರೆ, ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ 1,342 ಸೀಟಿಗೆ ಬರೋಬ್ಬರಿ 457, ಧಾರವಾಡದಲ್ಲಿ 672 ಪೈಕಿ 302, ದಾವಣಗೆರೆ ಜಿಲ್ಲೆಯಲ್ಲಿ 866 ಪೈಕಿ 300, ಕಲಬುರಗಿ ಜಿಲ್ಲೆಯಲ್ಲಿ 1,126ಕ್ಕೆ 215, ಮೈಸೂರು ಜಿಲ್ಲೆಯಲ್ಲಿ 715ಕ್ಕೆ 342 ಆರ್‌ಟಿಇ ಸೀಟುಗಳು ಭರ್ತಿಯಾಗಿವೆ.

Advertisement

3 ಜಿಲ್ಲೆಗಳಲ್ಲಿ ಶೂನ್ಯ ದಾಖಲಾತಿ
ರಾಜ್ಯದ ಉತ್ತರ ಕನ್ನಡ ಜಿಲ್ಲೆ, ತುಮಕೂರಿನ ಮಧುಗಿರಿ ಶೈಕ್ಷಣಿಕ ಜಿಲ್ಲೆ ಹಾಗೂ ಚಿಕ್ಕಮಗಳೂರಿನಲ್ಲಿ ಇಲ್ಲಿಯವರೆಗೆ ಒಂದು ಕೂಡ ಆರ್‌ಟಿಇ ಸೀಟು ಭರ್ತಿಯಾಗದೆ ಶೂನ್ಯ ದಾಖಲಾತಿ ಖ್ಯಾತಿಗೆ ಒಳಗಾಗಿವೆ. ಮಧುಗಿರಿಗೆ 38, ಉತ್ತರ ಕನ್ನಡ ಜಿಲ್ಲೆ 8, ಚಿಕ್ಕಮಗಳೂರು ಜಿಲ್ಲೆಗೆ ಒಟ್ಟು 64 ಆರ್‌ಇಟಿ ಸೀಟುಗಳು ನಿಗದಿಯಾಗಿವೆ. ಯಾದಗಿರಿ ಜಿಲ್ಲೆಯಲ್ಲಿ 233ಕ್ಕೆ 5, ರಾಮನಗರದಲ್ಲಿ 143 ಕ್ಕೆ 6, ಕೊಡಗು ಜಿಲ್ಲೆಯಲ್ಲಿ 20ಕ್ಕೆ ಕೇವಲ 4, ಹಾಸನ ಜಿಲ್ಲೆಯಲ್ಲಿ 194 ಸೀಟುಗೆ 5, ಚಿತ್ರದುರ್ಗದಲ್ಲಿ 294ಕ್ಕೆ 3, ಬೆಂಗಳೂರು ಉತ್ತರ ಜಿಲ್ಲೆಯಲ್ಲಿ 487 ಪೈಕಿ ಕೇವಲ 2 ಸೀಟ್‌ಗಳು ಮಾತ್ರ ಭರ್ತಿ ಆಗಿವೆ.

-ರಾಜ್ಯದ ಒಟ್ಟು ಆರ್‌ಟಿಇ ಸೀಟು -14,231
– ಸೀಟು ಪಡೆದ ವಿದ್ಯಾರ್ಥಿಗಳು – 7,936
– ಶಾಲೆಗೆ ದಾಖಲಾದ ಮಕ್ಕಳು – 3,412
– ಅತಿ ಹೆಚ್ಚು ಮಕ್ಕಳ ದಾಖಲು – 482 (ಬಾಗಲಕೋಟೆ)

ಬೇಡಿಕೆ ಕುಸಿಯಲು ಕಾರಣವೇನು?
ಆರ್‌ಟಿಇಗೆ ಅರ್ಜಿ ಹಾಕಿದ ವಿದ್ಯಾರ್ಥಿಯ ವಾಸಸ್ಥಳದಿಂದ 3 ಕಿ.ಮೀ. ವ್ಯಾಪ್ತಿಯಲ್ಲಿ ಸರಕಾರಿ ಶಾಲೆ ಇದ್ದರೆ ಆ ವಿದ್ಯಾರ್ಥಿಗೆ ಆರ್‌ಟಿಇ ಸೀಟು ಸಿಗುವುದಿಲ್ಲ. ಇದು ಸರಕಾರ ರೂಪಿಸಿದ ನಿಯಮಾವಳಿ ಆಗಿರುವುದರಿಂದ ಆರ್‌ಟಿಇ ಸೀಟುಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಕುಸಿಯುತ್ತಿದೆ.

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next