Advertisement
ನಗರದ ಛತ್ರದ ಬೀದಿಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಪಕ್ಕದ ರಸ್ತೆಯಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆಗೆ ಸಂಪರ್ಕ ಕಲ್ಪಿಸಲು ಅರ್ಕಾವತಿ ನದಿಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಬರೋಬ್ಬರಿ 8 ವರ್ಷ ಬೇಕಾಯಿತು. ಆದರೆ, ಸೇತುವೆಗೆ ಅಪ್ರೋಚ್ ರಸ್ತೆ ನಿರ್ಮಾಣವಾಗದೇ ಸೇತುವೆ ಬಳಕೆಗೆ ಯೋಗವಾಗಿಲ್ಲ. ಆದರೆ, ಇತ್ತೀಚೆಗೆ ನಗರಸಭೆಯ ಕೆಲವು ಅಧಿಕಾರಿಗಳು ಕಟ್ಟಡ ತ್ಯಾಜ್ಯವನ್ನು ಸುರಿದು ದ್ವಿಚಕ್ರ ವಾಹನಗಳು ಮತ್ತು ಪಾದಚಾರಿಗಳು ಓಡಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ, ಇದು ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ವಾಹನ ಚಾಲಕರು ಎಚ್ಚರ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ.
Related Articles
Advertisement
2011ರಲ್ಲಿ 8ನೇ ವಾರ್ಡ್‌ನ ನಗರಸಭಾ ಸದಸ್ಯರಾಗಿದ್ದ ಜೆ.ಮುಕುಂದರಾಜ್ ಕಾಳಜಿವಹಿಸಿ, ಸೇತುವೆ ಕಾಮಗಾರಿ ಪೂರ್ಣಗೊಳಿಸಿದರು. ಆದರೆ, ನಾಲಬಂದವಾಡಿ ಕಡೆಯ ಸೇತುವೆ ಬಳಿ ಇರುವುದೆಲ್ಲ ಖಾಸಗಿ ಸ್ಥಳ, ಅಪ್ರೋಚ್ ರಸ್ತೆಗೆ ಮೊದಲು ಸ್ಥಳ ಮಾಡಿಕೊಂಡು ನಂತರ ಸೇತುವೆ ನಿರ್ಮಿಸಬೇಕಿತ್ತು. ಇದು ಅಧಿಕಾರಿಗಳು ಮಾಡಿದ ಎಡವಟ್ಟು ಎಂಬುದು ಈ ಭಾಗದ ನಾಗರಿಕರ ದೂರು.
ನಾಲಬಂದವಾಡಿ ಸೇತುವೆಗೂ ಅಪ್ರೋಚ್ ರಸ್ತೆ ತತ್ಕಾಲಿಕವಾಗಿದ್ದು, ಹಲವಾರು ವರ್ಷಗಳಿಂದ ಈ ಸೇತುವೆಯನ್ನು ಜನರು ಬಳಸುತ್ತಿದ್ದಾರೆ. ಪಾದಚಾರಿಗಳ ಓಡಾಟಕ್ಕೆಂದು ನಿರ್ಮಾಣವಾಗಿರುವ ಈ ಸೇತುವೆಯ ಮೇಲೆ ದ್ವಿಚಕ್ರ ವಾಹನಗಳು ನಿರಂತರವಾಗಿ ಸಂಚರಿಸುತ್ತಿವೆ.
ಸ್ಥಳೀಯ ಶಾಸಕರು ಕಾಳಜಿವಹಿಸಿ ಈ ಎರಡೂ ಸೇತುವೆಗಳ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಪಾದಚಾರಿಗಳು ಮತ್ತು ವಾಹನ ಸವಾರರು ಸುರಕ್ಷಿತವಾಗಿ ಈ ಸೇತುವೆಯನ್ನು ಬಳಕೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
● ಬಿ.ವಿ.ಸೂರ್ಯ ಪ್ರಕಾಶ್