ಉಡುಪಿ: ಜಿಲ್ಲಾಡಳಿತ ಮದುವೆ ಮಾಡದಂತೆ ತಡೆ ಒಡ್ಡಿದೆಯಾ? ಇಂತಹ ಅಧಿಕಾರ ಸರಕಾರಕ್ಕೆ ಇದೆಯಾ? ಮದುವೆ ಸಮಾರಂಭಕ್ಕೆ ಜಿಲ್ಲಾಡಳಿತದ ಅನುಮತಿ ಬೇಕೆ?…
ಇತ್ಯಾದಿ ಪ್ರಶ್ನೆಗಳು ಕೋವಿಡ್-19 ಕಾರಣದಿಂದ ಲಾಕ್‌ಡೌನ್ ಆದಂದಿನಿಂದ ಕೇಳಿಬರುತ್ತಿವೆ. ಇತ್ತೀಚಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ನಡೆಸಿದ ಸಭೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೂ ಈ ವಿಷಯ ಪ್ರಸ್ತಾವಿಸಿ, “ನಿರ್ದಿಷ್ಟ ಸಂಖ್ಯೆಯ ಜನರು ಸೇರಿ ಮದುವೆ ಮಾಡಿಕೊಳ್ಳಲು ಅನುಮತಿ ಕೊಡಿ’ ಎಂದು ಆಗ್ರಹಿಸಿ ದ್ದರು. ಇದೊಂದು ಸಂಕೀರ್ಣ ವಿಷಯ ವಾಗಿರುವು ದರಿಂದ ಸಚಿವರು ಅಲ್ಲಿಗೇ ತೇಲಿಸಿಬಿಟ್ಟಿದ್ದರು.
ಜಿಲ್ಲಾಡಳಿತ ಹೊರಡಿಸಿದ ಸೆಕ್ಷನ್ 144ರ ಆದೇಶದ ಪ್ರಕಾರ 5ಜನರಿಗಿಂತ ಹೆಚ್ಚಿಗೆ ಜನರು ಸೇರುವಂತಿಲ್ಲ. ಇದೇ ಕಾರಣಕ್ಕೆ ದೇವಸ್ಥಾನ, ಮಸೀದಿ, ಇಗರ್ಜಿಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸರಕಾರಕ್ಕೆ ಪ್ರಾಯಃ ಮದುವೆ ಸಮಾರಂಭವನ್ನು ನಿಷೇಧಿಸುವ ಅಧಿಕಾರವೂ ಇಲ್ಲ. ಅನುಮತಿ ಕೊಡುವುದಾದರೂ ಐದು ಜನರಿಗಿಂತ ಹೆಚ್ಚಿಗೆ ಸೇರ ಬಾರದು ಎಂದೇ ಅನುಮತಿ ಕೊಡ ಬೇಕಾಗುತ್ತದೆ ಎಂದು “ಉದಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟಪಡಿಸಿದ್ದರು.
ಈ ನಡುವೆ ಹೆಚ್ಚು ಜನರು ಸೇರದಂತೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮದುವೆ ನಡೆಸಲು ಜಿಲ್ಲಾಡಳಿತದ ಸಮ್ಮತಿ ಇದೆ. ಮಾ.19ರಂದು ಹೊರಡಿಸಿದ ಆದೇಶದ ಪ್ರಕಾರ ಮದುವೆ/ ನಿಶ್ಚಿತಾರ್ಥ ಸಮಾರಂಭಗಳನ್ನು ಹೆಚ್ಚಿನ ಜನ ಸಂದಣಿ ಸೇರದಂತೆ ಸರಳವಾಗಿ ಆಯೋಜಿಸಲು ಸೂಚಿಸಲಾಗಿದೆ. ದೇವಸ್ಥಾನಗಳಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲದ ಕಾರಣ ದೇವಸ್ಥಾನ ಗಳಲ್ಲಿ ಸರಳವಾಗಿಯಾದರೂ ಮದುವೆ ನಡೆಸುವಂತಿಲ್ಲ. ಮನೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಅತಿ ಕಡಿಮೆ ಜನರು ಪಾಲ್ಗೊಳ್ಳುವ ಮದುವೆ ನಡೆಸಬಹುದು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ. ಹೀಗಾಗಿ ಸಾರ್ವಜನಿಕರು ಮದುವೆಗೆ ಅನುಮತಿ ಕೋರಿ ಡಿಸಿ ಕಚೇರಿಯನ್ನು ಸಂಪರ್ಕಿಸ ಬೇಕಿಲ್ಲ.
ಸರಕಾರ/ ಜಿಲ್ಲಾಡಳಿತ ಮದುವೆ ಸಮಾರಂಭ ಗಳನ್ನು ನಿಷೇಧಿಸಿಲ್ಲ. ಕನಿಷ್ಠ ಸಂಖ್ಯೆಯ ಜನರು ಮನೆಗಳಲ್ಲಿ ಸರಳವಾಗಿ ಮದುವೆ ಕಾರ್ಯಕ್ರಮವನ್ನು ನಡೆಸಬಹುದು.
-ಸದಾಶಿವ ಪ್ರಭು,
ಅಪರ ಜಿಲ್ಲಾಧಿಕಾರಿ, ಉಡುಪಿ