ಈಗಾಗಲೇ ಎಲ್ಲೆಡೆ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ “ಕುರುಕ್ಷೇತ್ರ’, ಆಗಸ್ಟ್ 9 ರಂದು ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಚಿತ್ರದಲ್ಲಿ ದರ್ಶನ್ ಜೊತೆಗೆ ಕನ್ನಡದ ಬಹುತೇಕ ನಟರು ನಟಿಸಿದ್ದಾರೆ. ಪೌರಾಣಿಕ ಚಿತ್ರ ಇದಾಗಿರುವುದರಿಂದ ಸಹಜವಾಗಿಯೇ ಎಲ್ಲಾ ನಟರ ಅಭಿಮಾನಿಗಳಲ್ಲೂ ಕುತೂಹಲವಿದೆ. ಚಿತ್ರದಲ್ಲಿ ಅಭಿಮನ್ಯು ಪಾತ್ರ ಮಾಡಿರುವ ನಿಖಿಲ್, ತಮ್ಮ ಪಾತ್ರಕ್ಕೆ ಡಬ್ ಮಾಡಿದ್ದಾರೋ, ಇಲ್ಲವೋ ಎಂಬ ಪ್ರಶ್ನೆ ಇತ್ತು. ಚಿತ್ರತಂಡ ಕೂಡ ಆ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ.
ಈಗ ಸ್ವತಃ ನಿಖಿಲ್ ಅವರೇ ತಮ್ಮ ಅಭಿಮನ್ಯು ಪಾತ್ರಕ್ಕೆ ಡಬ್ಬಿಂಗ್ ಶುರು ಮಾಡಿದ್ದಾರೆ. ಸೋಮವಾರ ಸಂಜೆ ಅವರು ಆಕಾಶ್ ಸ್ಟುಡಿಯೋದಲ್ಲಿ ಡಬ್ಬಿಂಗ್‌ಗೆ ಚಾಲನೆ ಕೊಟ್ಟಿದ್ದಾರೆ. ಅಂತೂ ಇಂತೂ ನಿಖಿಲ್ ಡಬ್ಬಿಂಗ್ ಮಾಡಲು ಮುಂದಾಗಿದ್ದು, ಚಿತ್ರದ ಬಿಡುಗಡೆಗೆ ಇನ್ನು ಎರಡು ವಾರಗಳು ಬಾಕಿ ಉಳಿದಿವೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ “ಕುರುಕ್ಷೇತ್ರ’ದ ಕುರಿತಾಗಿ, ತಮ್ಮ ಬಗ್ಗೆ ಹರಿದಾಡುತ್ತಿದ್ದ ಹಲವು ಅಂತೆ-ಕಂತೆಗಳಿಗೆ ತೆರೆ ಎಳೆದಿದ್ದಾರೆ.
ಕಳೆದ ಕೆಲ ತಿಂಗಳಿನಿಂದ “ಕುರುಕ್ಷೇತ್ರ’ ಚಿತ್ರದ ಟೀಸರ್, ಆಡಿಯೋ, ಟ್ರೇಲರ್ ಅಂತ ಪ್ರಮೋಶನ್ ಕೆಲಸಗಳನ್ನು ಚಿತ್ರತಂಡ ನಡೆಸುತ್ತಿದ್ದರೂ, ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ನಿಖಿಲ್ ಕುಮಾರ್ ಎಲ್ಲೂ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಮಾತನಾಡಿದ ನಿಖಿಲ್ ಕುಮಾರ್ “ನಾನು “ಕುರುಕ್ಷೇತ್ರ’ ಚಿತ್ರದಲ್ಲಿ ಅಭಿನಯಿಸಿ ಬಂದ ಬಳಿಕ ಚುನಾವಣೆಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದೆ. ಹಾಗಾಗಿ ಚಿತ್ರದ ಡಬ್ಬಿಂಗ್, ಪೋಸ್ಟ್ ಪ್ರೊಡಕ್ಷನ್ಸ್, ಪ್ರಮೋಶನ್ ಕೆಲಸಗಳಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಈಗ ಬೇರೆ ಕೆಲಸಗಳಿಂದ ಸ್ವಲ್ಪ ಬಿಡುವು ಸಿಕ್ಕಿರುವುದರಿಂದ, ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡುತ್ತಿದ್ದೇನೆ. ಇದನ್ನು ಹೊರತುಪಡಿಸಿದರೆ ಚಿತ್ರದ ಪ್ರಮೋಶನ್ ಕೆಲಸಗಳಲ್ಲಿ ಕಾಣಿಸಿಕೊಳ್ಳದಿರಲು ಬೇರೇನೂ ಕಾರಣವಿಲ್ಲ. ಕೆಲವರು ನಿರ್ಮಾಪಕ ಮುನಿರತ್ನ, ನಟ ದರ್ಶನ್ ಅವರೊಂದಿಗೆ ಮನಸ್ತಾಪ ಇರುವುದರಿಂದ ಪ್ರಮೋಶನ್ಸ್‌ಗೆ ಬರುತ್ತಿಲ್ಲ ಎನ್ನುತ್ತಿದ್ದಾರೆ. ಆದ್ರೆ ಅದೆಲ್ಲವೂ ಊಹಾಪೋಹಾ ಅಷ್ಟೆ. ಮುನಿರತ್ನ ಅವರ ಜೊತೆಗಾಗಲಿ, ದರ್ಶನ್ ಅವರ ಜೊತೆಗಾಗಲಿ ಯಾವುದೇ ಮನಸ್ತಾಪವಿಲ್ಲ.
ಇದೆಲ್ಲ ಕೇವಲ ವಂದತಿ. ಇಂದಿಗೂ ನನ್ನ ಮತ್ತು ಅವರೊಂದಿಗೆ ಸಂಬಂಧ ಚೆನ್ನಾಗಿಯೇ ಇದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ಖಂಡಿತ, ಚಿತ್ರದ ಪ್ರಮೋಶನ್‌ಗೆ ಬಿಡುವು ಮಾಡಿಕೊಂಡು ಹೋಗುತ್ತೇನೆ’ ಎಂದರು. ಇದೇ ವೇಳೆ ದರ್ಶನ್ ಅವರ ಜೊತೆ ಅಭಿನಯಿಸಿರುವುದರ ಬಗ್ಗೆಯೂ ಮಾತನಾಡಿದ ನಿಖಿಲ್ ಕುಮಾರ್, “ದರ್ಶನ್ ಅವರೊಬ್ಬರು ದೊಡ್ಡ ನಟರು. ಇದು ಅವರ 50ನೇ ಚಿತ್ರವಾಗಿರುವುದರಿಂದ ಎಲ್ಲರಿಗೂ ಆ ಚಿತ್ರದ ಮೇಲೆ ನಿರೀಕ್ಷೆ ಇರುತ್ತದೆ. ಇಂಥ ಚಿತ್ರದಲ್ಲಿ ಅವರ ಜೊತೆ ನಟಿಸಿರುವುದಕ್ಕೆ ನನಗೂ ಖುಷಿ ಇದೆ.
ಆದ್ರೆ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್ ಜೊತೆಗೆ ಹೆಚ್ಚಿನ ಸನ್ನಿವೇಶ ಇರಲಿಲ್ಲ. ಹಾಗಾಗಿ ಅವರ ಜೊತೆ ಸೆಟ್‌ನಲ್ಲಿ ಹೆಚ್ಚು ಸಮಯ ಕಳೆಯಲಾಗಲಿಲ್ಲ. ಉಳಿದಂತೆ ಚಿತ್ರದಲ್ಲಿ ನನ್ನ ಪಾತ್ರವನ್ನು ಅನವಶ್ಯಕವಾಗಿ ಎಳೆಯಲಾಗಿದೆ ಎಂಬ ಮಾತುಗಳುಕೂಡ ಸುಳ್ಳು. ಚಿತ್ರದಲ್ಲಿ ಪ್ರತಿಯೊಂದು ಪಾತ್ರಕ್ಕೂ, ಪ್ರತಿಯೊಬ್ಬರ ಪಾತ್ರಕ್ಕೂ ಅದರದ್ದೇ ಆದ ಮಹತ್ವ ಇದೆ’ ಎಂದು ವಿವರಣೆ ನೀಡಿದರು. ಇನ್ನು, ಈ ಚಿತ್ರದ ವಿತರಣೆ ಹಕ್ಕನ್ನು ರಾಕ್‌ಲೈನ್ ವೆಂಕಟೇಶ್ ಪಡೆದಿದ್ದಾರೆ. ಚಿ
ತ್ರ ಐದು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಸುಮಾರು ಮೂರು ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ. ಆದರೆ, ನಿಖರವಾಗಿ ಎಷ್ಟು ಚಿತ್ರಮಂದಿರದಲ್ಲಿ ಚಿತ್ರ ತೆರೆಕಾಣಲಿದೆ ಎಂಬುದಕ್ಕೆ ಆಗಸ್ಟ್ 2 ರಂದು ಗೊತ್ತಾಗಲಿದೆ. ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದು, ಮುನಿರತ್ನ ನಿರ್ಮಾಣವಿದೆ. ಚಿತ್ರದಲ್ಲಿ ದರ್ಶನ್, ನಿಖಿಲ್ ಕುಮಾರ್ ಅವರೊಂದಿಗೆ ರವಿಚಂದ್ರನ್, ಶಶಿಕುಮಾರ್, ರವಿಶಂಕರ್, ಅರ್ಜುನ್ ಸರ್ಜಾ, ಶ್ರೀನಿವಾಸಮೂರ್ತಿ, ಶ್ರೀನಾಥ್ , ಸೋನು ಸೂದ್, ಡ್ಯಾನೀಶ್ ಅಖ್ತರ್ ಹೀಗೆ ಹಲವು ಕಲಾವಿದರ ಬೃಹತ್ ತಾರಾಗಣವಿದೆ. ಹರಿಕೃಷ್ಣ ಸಂಗೀತವಿದೆ.