ಕಲಬುರಗಿ: ಶಿಕ್ಷಕ ತನ್ನೆಲ್ಲ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆದರೆ ವಿದ್ಯಂ ಸರ್ವತ್ರ ಸಾಧನಂ ಆಗುತ್ತದೆ. ಅಲ್ಲದೇ ವಿದ್ಯೆಗೆ ಸಮನಾದ ಬಂಧು ಇಲ್ಲ ಹಾಗೂ ರೋಗಕ್ಕೆ ಸಮನಾದ ಶತ್ರುವಿಲ್ಲ ಎಂದು ಖ್ಯಾತ ಮಕ್ಕಳ ತಜ್ಞೆ ಡಾ| ವಿಜಯಲಕ್ಷ್ಮೀ ಬಾಳೇಕುಂದ್ರಿ ಹೇಳಿದರು. ನಗರದ ಪ್ರತಿಷ್ಠಿತ ಸರ್ವಜ್ಞ ಚಿಣ್ಣರ ಲೋಕ, ಪ್ರಾಥಮಿಕ ಮತ್ತು ಪ್ರೌಢಶಾಲೆ ವಾರ್ಷಿಕೋತ್ಸವ ಹಾಗೂ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ವಿಶೇಷ ಉಪನ್ಯಾಸ ನೀಡಿದರು.
ಮಕ್ಕಳ ಮನಸ್ಸು ಫಲವತ್ತಾದ ಭೂಮಿಯಿದ್ದ ಹಾಗೆ, ಅಲ್ಲಿ ಸದ್ಭಕ್ತಿ, ಸದ್ಭಾವ, ಉತ್ತಮವಾದ ಸಂಸ್ಕೃತಿಯನ್ನು ಬೆಳೆಸಬಹುದಾಗಿದೆ. ಶಿಕ್ಷಣದೊಂದಿಗೆ ಕಲೆ, ಸಾಹಿತ್ಯ, ಸಂಗೀತ ಕಲಿಯಬೇಕು. ದೇಶಪ್ರೇಮ ಬೆಳೆಸಿಕೊಳ್ಳಬೇಕು. ಮಾತೃಭಾಷೆ ಬೆಳೆಸಬೇಕು. ಮಾತೃಭಾಷೆ ಮರೆತರೆ ಮಾತೆ ಮರೆತಂತೆ. ಪಾಲಕರು ಮಕ್ಕಳಿಗೆ ಅಪ್ಪ ಅಮ್ಮ ಎನ್ನುವುದನ್ನು ಕಲಿಸಬೇಕು.
ಮಾತೃದೇವೋಭವ ಎಂಬ ಭರತ ಭೂಮಿಯಲ್ಲಿ ತಾಯಿಯೇ ದೇವರು. ಮಕ್ಕಳಿಗೆ ನೀಡುವ ಉತ್ತಮ ಶಿಕ್ಷಣ ದೇವರಿಗೆ ಸಲ್ಲಿಸುವ ನೈವೇದ್ಯ. ಮಕ್ಕಳಿಗೆ ಮಾಡುವ ಉಪಚಾರ ದೇವರಿಗೆ ಅಭಿಷೇಕ ಮಾಡಿದಂತೆ ಎಂದು ಹೇಳಿದರು.
ಮನೆಯಲ್ಲಿ ತಯಾರಿಸಿದ ಬೆಲ್ಲದ ಸಿಹಿ, ಉಂಡಿ, ಪಾಯಸ, ಹುಗ್ಗಿ, ಚಕ್ಕಲಿ, ಹಾಲು, ಹಣ್ಣು, ತರಕಾರಿ ಮುಂತಾದ ಆಹಾರ ಕೊಡಬೇಕು. ಉಪ್ಪು, ಸಕ್ಕರೆ, ಮೈದಾ – ಇವು ಬಿಳಿ ವಿಷವಿದ್ದಂತೆ, ಇವನ್ನು ಕಡಿಮೆಮಾಡಬೇಕು. ಬೇಕರಿಯಲ್ಲಿ ಸಿಗುವ ಜಂಕ್ ಫುಡ್ ತಿಂದು ಆರೋಗ್ಯ ಹಾಳು ಮಾಡಿಕೊಳ್ಳಲು ಬಿಡಬಾರದು ಎಂದು ಹೇಳಿದರು ಹಿಂದಿನ ಕಾಲದ ಗುರುಕುಲ ಶಿಕ್ಷಣ ಹೋಗಿ ಈಗ ಕಾನ್ವೆಂಟ್ ಶಾಲೆ ಶಿಕ್ಷಣ ಪಡೆದು ಮಕ್ಕಳು ತಮ್ಮ ಸಂಸ್ಕೃತಿ ಮರೆಯಬಾರದು. ಪಾಲಕರನ್ನು ವೃದ್ಧಾಶ್ರಮಕ್ಕೆ ಕಳುಹಿಸಬಾರದು. ತಂದೆ-ತಾಯಿಗಿಂತ ಮಿಗಿಲಾದ ದೇವರಿಲ್ಲ. ಅವರೇ ಕಣ್ಣಿಗೆ ಕಾಣುವ
ದೇವರು ಎಂದು ಹೇಳಿದರು. ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ| ಶರಣಬಸಪ್ಪಗೌಡ ದರ್ಶನಾಪುರ, ಸರ್ವಜ್ಞ ಶಿಕ್ಷಣ ಸಂಸ್ಥೆ ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸುತ್ತಿದೆ. ಮಕ್ಕಳ ಆಸಕ್ತಿ ಕ್ಷೇತ್ರ ಅರಿತು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಶಾಸಕ ದತ್ತಾತ್ರೇಯ ಪಾಟೀಲ ಮಾತನಾಡಿದರು. ಸರ್ವಜ್ಞ ಚಿಣ್ಣರ ಲೊಕದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಪ್ರಾಚಿತಾ ಮಾಲಿ ರಾಷ್ಟ್ರೀಯ ಮಟ್ಟದಲ್ಲಿ ಅಬ್ಯಾಕಸ್ ಪರೀಕ್ಷೆಯಲ್ಲಿ 4ನೇ ರ್‍ಯಾಂಕ್ ಪಡೆದ ಪ್ರಯುಕ್ತ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮೊದಲು ಶತಾಯುಷಿ ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಹಾಗೂ ಪುಲ್ವಾಮದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಸಿಆರ್‌ಪಿಎಫ್ ಯೋಧರಿಗೆ ಹಾಡಿನ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಿವೃತ್ತ ನ್ಯಾಯಾಧೀಶರಾದ ಎಸ್.ಎಂ. ರಡ್ಡಿ. ಎನ್. ಶರಣಪ್ಪ, ನ್ಯಾಯಧೀಶರಾದ ಅಯ್ಯನಗೌಡ ಪಾಟೀಲ, ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥೆ ಸಂಸ್ಥಾಪಕರಾದ ಪ್ರೊ| ಚನ್ನಾರಡ್ಡಿ ಪಾಟೀಲ, ಸಂಸ್ಥೆ ಅಧ್ಯಕ್ಷೆ ಗೀತಾ ಚನ್ನಾರಡ್ಡಿ ಪಾಟೀಲ, ಕಾರ್ಯದರ್ಶಿಗಳಾದ ಅಭಿಷೇಕ ಚನ್ನಾರಡ್ಡಿ ಪಾಟೀಲ, ಪ್ರಶಾಂತ ಕುಲಕರ್ಣಿ, ಕರುಣೇಶ ಹಿರೇಮಠ, ಪೃಥ್ವಿರಾಜಗೌಡ, ಗುರುರಾಜ ಕುಲಕರ್ಣಿ, ಪಾಲಕರು, ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು. ಕುಮಾರಿ ಸ್ನೇಹಾ ಕುಲಕರ್ಣಿ ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಡಾ| ಸಂತೋಷಕುಮಾರ ನಾಗಲಾಪುರ ಸ್ವಾಗತಿಸಿದರು. ಗಂಗಾಧರ ಬಡಿಗೇರ ನಿರೂಪಿಸಿ, ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.