Advertisement

ಪುನರ್ವಸತಿಯೂ ಇಲ್ಲ ಸೌಕರ್ಯವೂ ಇಲ್ಲ

08:51 AM Jul 27, 2019 | Team Udayavani |

ಬೆಳಗಾವಿ: 16 ವರ್ಷ ಕಳೆದರೂ ಇನ್ನೂವರೆಗೆ ಗ್ರಾಮಗಳ ಸ್ಥಳಾಂತರವೂ ಇಲ್ಲ, ಪುನರ್ವಸತಿಯೂ ಇಲ್ಲ, ಮೂಲ ಸೌಕರ್ಯ ಕಲ್ಪಿಸದೇ ಹಾಗೂ ಪರಿಹಾರವನ್ನೂ ನೀಡದೇ ಸತಾಯಿಸುತ್ತಿರುವ ಅಧಿಕಾರಿಗಳ ವಿರುದ್ಧ ಸಂತ್ರಸ್ತರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇಡೀ ಊರಿಗೆ ಊರೇ ಒಕ್ಕಲೆಬ್ಬಿಸುವ ಯೋಜನೆ ರೂಪಿಸಿದ್ದರಿಂದ ಸೌಲಭ್ಯಗಳೂ ಮರೀಚಿಕೆ ಆಗಿದ್ದು, ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.

Advertisement

ಬಳ್ಳಾರಿ ನಾಲಾ ಅಣೆಕಟ್ಟು ನಿರ್ಮಾಣದಿಂದ ತಾಲೂಕಿನ ಕಬಲಾಪುರ, ಸಿದ್ಧನಹಳ್ಳಿ ಹಾಗೂ ಮಾಸ್ತಿಹೊಳಿ ಗ್ರಾಮಗಳು ಸಂಪೂರ್ಣ ಬಾಧಿತವಾಗಿದ್ದು, ಕಳೆದ 15-16 ವರ್ಷಗಳಿಂದ ಈ ಗ್ರಾಮಗಳ ಸಮೀಕ್ಷೆ ನಡೆಸಿ ಪುನರ್ವಸತಿ ಕಲ್ಪಿಸುವ ಯೋಜನೆ ರೂಪಿಸಲಾಗಿದೆ. ಹೀಗಾಗಿ ಈ ಊರುಗಳನ್ನು ಒಕ್ಕಲೆಬ್ಬಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರಿಂದ ಇನ್ನೂವರೆಗೆ ಈ ಊರುಗಳಿಗೆ ಸೌಲಭ್ಯಗಳೇ ಇಲ್ಲದಂತಾಗಿದೆ.

ಈ ಗ್ರಾಮಗಳಲ್ಲಿ ಇನ್ನು ಮುಂದೆ ಜನವಸತಿ ಇರುವುದಿಲ್ಲ ಎಂಬ ಕಾರಣಕ್ಕೆ ಜಿಲ್ಲಾಡಳಿತ ಯಾವುದೇ ಮೂಲ ಸೌಲಭ್ಯ ಕಲ್ಪಿಸಿಲ್ಲ. ಬೆಳಗಾವಿಯಿಂದ 19 ಕಿಮೀ ದೂರದಲ್ಲಿರುವ ಕಬಲಾಪುರ ಗ್ರಾಮದಲ್ಲಿ ಸರ್ಕಾರಿ ಸೌಲಭ್ಯಗಳೇ ಇಲ್ಲ. ಬೆಳಗಾವಿ-ಗೋಕಾಕ ಮಾರ್ಗದ ಕಲ್ಯಾಳ ಫೂಲ್(ಸೇತುವೆ)ದಿಂದ ಎಡಕ್ಕೆ 3.5 ಕಿಮೀ ಸಾಗಿದರೆ ಕಬಲಾಪುರ ಬರುತ್ತದೆ. 200ಕ್ಕೂ ಹೆಚ್ಚು ಮನೆಗಳಿದ್ದು, ಸುಮಾರು ಎರಡು ಸಾವಿರ ಜನಸಂಖ್ಯೆ ಹೊಂದಿದೆ. ಆದರೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸರಿಯಾಗಿಲ್ಲ. ಚರಂಡಿಗಳಿಲ್ಲದೇ ತ್ಯಾಜ್ಯ ನೀರು, ಬಟ್ಟೆ, ಪಾತ್ರೆ ತೊಳೆದ ನೀರು ರಸ್ತೆ ಮೇಲೆಯೇ ಹರಿಯುವುದರಿಂದ ಅನಾರೋಗ್ಯಕ್ಕೆ ಕಾರಣವಾಗಿದೆ.

ನಮ್ಮ ಸೂರು ನಮ್ಮದಲ್ಲ: ನಾವಿರುವ ಮನೆಗಳು ನಮ್ಮವಲ್ಲ, ಸರ್ಕಾರ ಹೇಳುವವರೆಗೆ ಇಲ್ಲಿಯೇ ವಾಸವಿರುತ್ತೇವೆ. ಈಗಾಗಲೇ ನಮ್ಮ ಸೂರುಗಳಿಗೆಲ್ಲ ಸರ್ಕಾರ ಹಣ ಕೊಟ್ಟು ಖರೀದಿ ಮಾಡಿದೆ. 16 ವರ್ಷದಿಂದ ಆತಂಕದಿಂದಲೇ ಬದುಕುತ್ತಿರುವ ನಮಗೆ ಇನ್ನೂ ಕಾಯಂ ನೆಲೆ ಇಲ್ಲದಂತಾಗಿದೆ. ನಮ್ಮ ಕೃಷಿ ಭೂಮಿಗಳನ್ನೂ ಸರ್ವೇ ಮಾಡಲಾಗಿದ್ದು, ಅವು ಕೂಡ ಇಂದೋ, ನಾಳೆ ನಮ್ಮ ಕೈ ಬಿಟ್ಟು ಹೋಗಲಿವೆ. ಪರಿಹಾರ ಕೊಟ್ಟಿಲ್ಲ ಎಂಬ ಕಾರಣಕ್ಕೆ ನಮ್ಮ ಹೆಸರಲ್ಲಿ ಉಳಿದಿವೆ. ಈ ಆತಂಕದಿಂದ ನಮ್ಮನ್ನು ದೂರ ಮಾಡಿ ನಮಗೆ ಸರ್ಕಾರದ ಕಾಯಂ ವಸತಿ ನೀಡಿ ನೆಮ್ಮದಿಯಾಗಿ ಬದುಕಲು ಬಿಡಲಿ ಎನ್ನುವುದು ಕಬಲಾಪುರ, ಮಾಸ್ತಿಹೊಳಿ, ಸಿದ್ಧನಹಳ್ಳಿ ಗ್ರಾಮಸ್ಥರ ಮನದಾಳದ ಮನವಿ.

ಆಸ್ಪತ್ರೆಗಾಗಿ 10 ಕಿ.ಮೀ. ಸಾಗಬೇಕು: ಗ್ರಾಮದ ಯಾರಾದರೂ ಅನಾರೋಗ್ಯಕ್ಕೀಡಾದರೆ ಊರಲ್ಲಿ ಆಸ್ಪತ್ರೆ ಇಲ್ಲ. ಕಬಲಾಪುರದಿಂದ 10 ಕಿ.ಮೀ. ದೂರದಲ್ಲಿರುವ ಸುಳೇಭಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರವೋ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಸುತ್ತಲಿನ ಯಾವ ಊರಲ್ಲೂ ಆಸ್ಪತ್ರೆಗಳಿಲ್ಲ. ರಾತ್ರಿ ಹೊತ್ತಲ್ಲಿ ಆರೋಗ್ಯ ಸಮಸ್ಯೆಯಾದರೆ ಶಿವನೇ ಗತಿ ಎಂಬ ಸ್ಥಿತಿ ಗ್ರಾಮಸ್ಥರದ್ದಾಗಿದೆ.

Advertisement

ಮೊಬೈಲ್ ನೆಟ್ವರ್ಕ್‌ ಸಿಗಲ್ಲ: ಕಲ್ಯಾಳ ಫುಲ್ ದಿಂದ ಕಬಲಾಪುರ ಮಾರ್ಗ ಪ್ರವೇಶಿಸಿದರೆ ಮೊಬೈಲ್ ನೆಟ್ವರ್ಕ್‌ ಬರುವುದೇ ಇಲ್ಲ. ಸಂಪರ್ಕ ವ್ಯವಸ್ಥೆ ಅಂತೂ ಇಲ್ಲವೇ ಇಲ್ಲ. ಗ್ರಾಮದಿಂದ 3 ಕಿಮೀ ದೂರ ಸಾಗಿದರೆ ಮಾತ್ರ ಮೊಬೈಲ್ ನೆಟ್ವರ್ಕ್‌ ಸಿಗುತ್ತದೆ. ಗುಡ್ಡದ ಪ್ರದೇಶವೋ ಅಥವಾ ಮುಖ್ಯ ರಸ್ತೆ ಬಳಿ ಬಂದಾಗ ಸಿಗ್ನಲ್ ಬರುತ್ತವೆ. ಈ ಮೊಬೈಲ್ಗಳು ಇದ್ದೂ ಇಲ್ಲದಂತಾಗಿದ್ದು, ಹೀಗಾಗಿ ಮೊಬೈಲ್ ಟಾವರ್‌ ಅಳವಡಿಸುವಂತೆ ಗ್ರಾಮಸ್ಥರ ಆಗ್ರಹವಾಗಿದೆ.

ಪುನರ್ವಸತಿ ಸಿಗುವುದೆಂಬ ಆಶಾಭಾವನೆ ಗ್ರಾಮಸ್ಥರಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ. ಈಗಾಗಲೇ ಬಹುತೇಕ ಎಲ್ಲ ಮನೆಗಳಿಗೂ ಪರಿಹಾರ ಕಲ್ಪಿಸಲಾಗಿದೆ. ಆದರೆ ಕೃಷಿ ಭೂಮಿಗಳ ಪರಿಹಾರ ನೀಡಿಲ್ಲ. ಜತೆಗೆ ಪುನರ್ವಸತಿ ಯಾವ ಜಾಗದಲ್ಲಿ ಮಾಡಲಾಗುತ್ತದೆ ಎಂಬುದೂ ತಿಳಿಸಿಲ್ಲ.

ಇಂದೋ ನಾಳೆಯೋ ನಮ್ಮ ಮನೆಗಳನ್ನು ಬಿಟ್ಟು ಬೇರೆ ಕಡೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಅಲ್ಲಿಯವರೆಗೆ ಯಾವುದೇ ಮೂಲ ಸೌಲಭ್ಯಗಳು ಇಲ್ಲದೇ ಬದುಕಬೇಕಾಗಿದೆ. ಬಳ್ಳಾರಿ ನಾಲಾ ಅಣೆಕಟ್ಟು ಪ್ರದೇಶಗಳ ಬಾಧಿತಗೊಂಡ ಈ ಗ್ರಾಮಗಳಿಗೆ ತಾತ್ಕಾಲಿಕವಾಗಿಯಾದರೂ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಜತೆಗೆ ತ್ವರಿತವಾಗಿ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಬೇಕು ಎಂಬುದೇ ಇಲ್ಲಿಯವರ ಬೇಡಿಕೆಯಾಗಿದೆ.

ಬಳ್ಳಾರಿ ನಾಲಾ ಅಣೆಕಟ್ಟು ನಿರ್ಮಾಣ ಹಿನ್ನೆಲೆಯಲ್ಲಿ ಮೂರು ಹಳ್ಳಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಈಗಾಗಲೇ ಮನೆಗಳ ಪರಿಹಾರ ಸಿಕ್ಕಾಗಿದೆ. ಆದರೆ ಕೃಷಿ ಭೂಮಿಗಳಿಗೆ ಸಿಗಬೇಕಾದ ಪರಿಹಾರ ಇನ್ನೂ ಬಂದಿಲ್ಲ. ತ್ವರಿತವಾಗಿ ಸಮಸ್ಯೆ ಬಗೆಹರಿಸಿ ಪುನರ್ವಸತಿ ಕಲ್ಪಿಸಬೇಕು ಇಲ್ಲವೇ ಅಲ್ಲಿಯವರೆಗೆ ಗ್ರಾಮದಲ್ಲಿ ರಸ್ತೆ, ಚರಂಡಿ, ಬಸ್‌, ಆಸ್ಪತ್ರೆ ಸೇರಿದಂತೆ ಇತರೆ ಮೂಲ ಸೌಕರ್ಯ ಒದಗಿಸಬೇಕು.• ನಾಗೇಂದ್ರ ಕೇರಲಿ, ಗ್ರಾಮದ ನಿವಾಸಿ

 

•ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next