Advertisement

ನೀರು ಪೂರೈಸದೇ ಇರಲು ಕಾರಣವೇ ಇಲ್ಲ

11:47 AM Apr 20, 2018 | Team Udayavani |

ಬೆಂಗಳೂರು: “ಜಲಮಂಡಳಿಯಿಂದ ಅಧಿಕೃತವಾಗಿ ಕೆಲವು ಪ್ರದೇಶಗಳಲ್ಲಿ ನೀರಿನ ಸಂಪರ್ಕ ಪಡೆದಿರುವುದಿಲ್ಲ, ಶುಲ್ಕ ಪಾವತಿಸಿರುವುದಿಲ್ಲ. ಹೀಗಾಗಿ ಅಂಥ ಕಡೆಗಳಲ್ಲಿ ನೀರಿಗೆ ಸಮಸ್ಯೆ ಆಗಿರಬಹುದು. ಅದು ಬಿಟ್ಟರೆ ನೀರು ಪೂರೈಸದೇ ಇರಲು ನಮಗೆ ಕಾರಣವೇ ಇಲ್ಲ. ಏಕೆಂದರೆ, ನೀರಿನ ಲಭ್ಯತೆ ಸಾಕಷ್ಟಿದೆ,’ ಎಂದು ಜಲಮಂಡಳಿ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ಹೇಳುತ್ತಾರೆ.

Advertisement

ನಗರದ ಹೃದಯಭಾಗಗಳಲ್ಲಿ ಈಗಲೂ “ಕಾವೇರಿ’ ಮರೀಚಿಕೆಯಾಗಿದೆ. ಕೆಲವೆಡೆ ಪೈಪ್‌ಲೈನ್‌ ಹಾಕಿ ಹಲವು ವರ್ಷಗಳಾದರೂ ಅದರಲ್ಲಿ ನೀರು ಹರಿದಿಲ್ಲ. ಬೇಸಿಗೆ ಇನ್ನೂ ಎರಡು ತಿಂಗಳು ಇರುವುದರಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಆತಂಕ ಇದೆ.

ಈ ಹಿನ್ನೆಲೆಯಲ್ಲಿ ನೀರಿನ ಸ್ಥಿತಿಗತಿ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯಗಳಲ್ಲಿ 11 ಟಿಎಂಸಿ ನೀರು ಸಂಗ್ರಹಿಸಲು ಕೋರಲಾಗಿದೆ ಎಂದು ಹೇಳಿದ್ದಾರೆ.

* ಬೆಂಗಳೂರಿನಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತೀವ್ರವಾಗಿರುವ ಬಗ್ಗೆ ಸಾರ್ವಜನಿಕರ ದೂರಿದೆಯಲ್ಲ?
ಹಾಗೇನಿಲ್ಲ. 2016ರಲ್ಲಿ ಹಿಂದೆಂದೂ ಕಂಡರಿಯದ ಬರ ಇತ್ತು. ಹಾಗಾಗಿ, ಕಳೆದ ವರ್ಷ ಎಲ್ಲೆಡೆ ನೀರಿನ ಸಮಸ್ಯೆ ಎದುರಾಯಿತು. ಆದರೆ, ಈ ವರ್ಷ ಪರಿಸ್ಥಿತಿ ಹಾಗಿಲ್ಲ. ಉತ್ತಮ ಮಳೆ ಆಗಿರುವುದರಿಂದ ಜಲಾಶಯಗಳಲ್ಲಿ ಅಗತ್ಯ ಪ್ರಮಾಣದಷ್ಟು ನೀರಿನ ಸಂಗ್ರಹವಿದೆ. ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಲೆಕ್ಕಹಾಕಿ, ಸೋರಿಕೆ ತಡೆಗಟ್ಟಲಾಗಿದೆ. ಇದರಿಂದ ನಿತ್ಯ 60 ದಶಲಕ್ಷ ಲೀ. ನೀರು ಉಳಿತಾಯ ಆಗುತ್ತಿದೆ. ಆದ್ದರಿಂದ ಸಮಸ್ಯೆ ಇಲ್ಲ. ಚುನಾವಣೆ ಬಂದಿರುವುದು ಹಾಗೂ ನೀರಿನ ಸಮರ್ಪಕ ಸಂಗ್ರಹ ಇರುವುದು ಕೇವಲ ಕಾಕತಾಳೀಯ.

* ನೀರು ಇದ್ದರೂ, ಬಂಗಾರಪ್ಪನಗರ, ಶೆಟ್ಟಿಹಳ್ಳಿ, ಮಾರುತಿನಗರ ಮತ್ತಿತರ ಕಡೆ ಬರ ಯಾಕೆ?
ಕಾವೇರಿ ನೀರಿನ ಸಂಪರ್ಕ ಜಾಲ ಇರುವ ಕಡೆಗಳಲ್ಲಿ ನೀರು ಬಂದೇಬರುತ್ತದೆ. ಸಂಪರ್ಕ ಇಲ್ಲದಿರುವ ಕಡೆ ಬಿಬಿಎಂಪಿ ಕೊಳವೆಬಾವಿಗಳ ಮೂಲಕ ನೀರು ಪೂರೈಸುತ್ತದೆ.

Advertisement

* ದಶಕದ ಹಿಂದೆ ಪೈಪ್‌ಲೈನ್‌ಗಳು ಹಾದುಹೋಗಿದ್ದರೂ, ಇನ್ನೂ ನೀರು ಹರಿಯುತ್ತಿಲ್ಲ. ಇದು ಯಾವ ರೀತಿಯ ನೆಟ್‌ವರ್ಕ್‌?
ಈ ರೀತಿಯ ಸಮಸ್ಯೆ ಇರುವ ಕಡೆಗಳಲ್ಲಿ ಸ್ಥಳೀಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಸಮಸ್ಯೆ ಬಗೆಹರಿಸುತ್ತಾರೆ. ನೀರಿನ ಸಮಸ್ಯೆ ಸಂಬಂಧ ದೂರುಗಳಿದ್ದರೆ ಅಹವಾಲು ಸಲ್ಲಿಸಬಹುದು. ಆದರೆ, ಕೆಲವೆಡೆ ಜನರೇ ನೀರಿನ ಸಂಪರ್ಕ ಪಡೆದಿರುವುದಿಲ್ಲ. ಅಥವಾ ನೀರಿನ ಶುಲ್ಕ ಪಾವತಿಸಿರುವುದಿಲ್ಲ. ಹಾಗಾಗಿ, ಕೆಲವೆಡೆ ಸಮಸ್ಯೆ ಆಗಿರಬಹುದು. ಅಷ್ಟಕ್ಕೂ ನೀರು ಪೂರೈಸದೇ ಇರಲು ನಮಗೆ ಕಾರಣವೇ ಇಲ್ಲ. ಏಕೆಂದರೆ ಈ ಬಾರಿ ನೀರಿನ ಲಭ್ಯತೆ ಸಾಕಷ್ಟಿದೆ.

* ನಿತ್ಯ 1350 ಎಂಎಲ್‌ಡಿ ನೀರು ಪಂಪ್‌ ನಿಜಕ್ಕೂ ನೀರಿನ ಸ್ಥಿತಿಗತಿ ಹೇಗಿದೆ?
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯಗಳಲ್ಲಿ 11 ಟಿಎಂಸಿ ನೀರು ಸಂಗ್ರಹಿಸಲು ಕೋರಲಾಗಿದೆ. ಎರಡೂ ಜಲಾಶಯಗಳಿಂದ ಸದ್ಯ ನಿತ್ಯ 1,350 ಎಂಎಲ್‌ಡಿ ನೀರು ಪಂಪ್‌ ಮಾಡಲಾಗುತ್ತಿದ್ದು, ಹೆಚ್ಚುವರಿಯಾಗಿ 10ರಿಂದ 15 ಎಂಎಲ್‌ಡಿ ನೀರು ಪಂಪ್‌ ಮಾಡಲಾಗುತ್ತಿದೆ. ಮಂಡಳಿ ವ್ಯಾಪ್ತಿಯಲ್ಲಿರುವ ಕೊಳವೆ ಬಾವಿಗಳಿಗೆ ಹೆಚ್ಚುವರಿ ಪೈಪ್‌ ಅಳವಡಿಕೆ, ದುರಸ್ತಿಗೆ ಕಾರ್ಯಗಳಿಗೆ ಒತ್ತು ನೀಡಲಾಗಿದೆ. ನಗರದಲ್ಲಿರುವ 25 ನೆಲಮಟ್ಟದ ಜಲಾಗಾರಗಳಿಂದ ಟ್ಯಾಂಕರ್‌ಗಳಿಗೆ ನೀರು ತುಂಬಿಸಿ ಸಾರ್ವಜನಿಕರಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ.

* ವಿಜಯಕುಮಾರ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next