Advertisement

ಡಿಕೆಶಿ ಜತೆ ಹೊಂದಾಣಿಕೆ ಆಗುವ ಪ್ರಶ್ನೆಯೇ ಇಲ್ಲ : ಸಚಿವ ಸತೀಶ

12:31 AM Nov 12, 2023 | Team Udayavani |

ಬೆಳಗಾವಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆಗೆ ಹೊಂದಾಣಿಕೆ ಆಗುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಎಲ್ಲ ನಿರ್ಧಾರವನ್ನೂ ಹೈಕಮಾಂಡ್‌  ತೆಗೆದುಕೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Advertisement

ಡಿಕೆಶಿ ಹಾಗೂ ಸತೀಶ ಜಾರಕಿಹೊಳಿ ಒಂದಾಗಿದ್ದಾರೆ. ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಇಬ್ಬರ ನಡುವೆಯೂ ಹೊಂದಾ ಣಿಕೆ ನಡೆದಿದೆಯೇ ಎಂಬ ಮಾಧ್ಯಮ ದವರ ಪ್ರಶ್ನೆಗೆ ನಗರದಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ಹೊಂದಾ ಣಿಕೆ ಆಗುವ ಪ್ರಶ್ನೆಯೇ ಇಲ್ಲ. ಅಂತಿಮವಾಗಿ ಹೈಕಮಾಂಡ್‌ ಚರ್ಚೆ ಮಾಡುತ್ತದೆ. ನಾನು ಯಾವುದೇ ಬೇಡಿಕೆ ಮುಂದಿಟ್ಟಿಲ್ಲ ಎಂದರು.

ಡಿಕೆಶಿ ನಮ್ಮ ಮನೆಗೆ ಅನೇಕ ಸಲ ಬಂದಿದ್ದಾರೆ. ಡಿ.ಕೆ.ಸುರೇಶ ಅವರೂ ಬಂದಿದ್ದಾರೆ. ಪಕ್ಷ ಹಾಗೂ ಸಂಘಟನೆ ಬಗ್ಗೆ ಚರ್ಚೆ ಆಗಿದೆ. ಪಕ್ಷದ ವಿಚಾರ ಮತ್ತು ಅಭಿವೃದ್ಧಿ ಕುರಿತು ಚರ್ಚೆ ಆಗಿದೆ. ನಮ್ಮ ನಡುವೆ ಪ್ಯಾಚಪ್‌ ಎಂಬ ಪ್ರಶ್ನೆಯೇ ಬರಲ್ಲ. ಮೈಸೂರು ಪ್ರವಾಸ ಹೋಗುವ ಉದ್ದೇಶ ಬೇರೆ, ಅವರು ನನ್ನನ್ನು ಭೇಟಿಯಾದ ಉದ್ದೇಶವೇ ಬೇರೆ. ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ ಆಗಿವೆ ಎಂದರು.

ಲೋಕಸಭೆ ಚುನಾವಣೆ ಆದ ಮೇಲೆ ಯಾವ ಹೊಸ ವಿಚಾರ ಬರುತ್ತದೆ ಎಂಬುದನ್ನು ಕಾದು ನೋಡೋಣ. ಮಾಜಿ ಶಾಸಕಿ ಡಾ| ಅಂಜಲಿ ನಿಂಬಾಳ್ಕರ್‌ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿದರೆ ಒಳ್ಳೆಯದಾಗುತ್ತದೆ. ನಮ್ಮ ಭಾಗದಲ್ಲಿ ಮಹಿಳೆಗೆ ಕೊಡುವುದರಿಂದ ಅನುಕೂಲ ಆಗುತ್ತದೆ. ಅವರಿಗೆ ಕಾರ್ಯಾಧ್ಯಕ್ಷ ಮಾಡಬೇಕು ಅಂತ ನಾವೂ ಮನವಿ ಮಾಡಿದ್ದೇವೆ. ಅಂತಿಮವಾಗಿ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ವಿಜಯೇಂದ್ರ ಆಕರ್ಷಣೆ ಇಲ್ಲ

Advertisement

ಬಿಜೆಪಿಯಲ್ಲಿ ಯಡಿಯೂರಪ್ಪ ಮಾತ್ರ ಪ್ರಬಲ ನಾಯಕ. ಅವರ ಪಕ್ಷಕ್ಕೆ ಅನುಕೂಲ ಆಗಲಿ ಎಂದು ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ, ನಮ್ಮಲ್ಲಿ ಸಿದ್ದರಾಮಯ್ಯ ಹೀಗೆ ಒಂದೊಂದು ಪಕ್ಷದಲ್ಲಿ ಒಬ್ಬೊಬ್ಬರು ಆಕರ್ಷಣೆ ಇರುತ್ತಾರೆ. ಯಡಿಯೂರಪ್ಪ ರೀತಿ ವಿಜಯೇಂದ್ರ ಆಕರ್ಷಣೆ ಇಲ್ಲ. ಅವರು ಯಡಿಯೂರಪ್ಪ ರೀತಿ ಬೆಳೆಯಬೇಕು. ಯಡಿಯೂರಪ್ಪ ಅವರ ಮಗ ಅಂದ ಕೂಡಲೇ ಎಲ್ಲ ಅವರೊಂದಿಗೆ ಬರಲ್ಲ. ವಿಜಯೇಂದ್ರ ಬಹಳಷ್ಟು ಕಲಿಯಬೇಕಿದೆ, ಹೋಗಬೇಕಿದೆ. ಇನ್ನೂ ಗುರುತಿಸಿಕೊಳ್ಳಬೇಕಿದೆ, ಪಕ್ಷ ಇನ್ನೂ ಸಹಕಾರ ಮಾಡಬೇಕಿದೆ ಎಂದು ಹೇಳಿದರು.

“ಬೆಳಗಾವಿ ಬೆಂಕಿ” ಗೊಂದಲವಿಲ್ಲ: ಸಚಿವ ಸತೀಶ-ಲಕ್ಷ್ಮೀ ಸ್ಪಷ್ಟನೆ

ಬೆಳಗಾವಿ: ನಮ್ಮ ಇಬ್ಬರ ಮಧ್ಯೆ ಯಾವುದೇ ಗೊಂದಲವಿಲ್ಲ. ಯಾವುದೇ ಬೆಂಕಿಯೂ ಇಲ್ಲ, ಹೊಗೆಯೂ ಇಲ್ಲ. ಮಾಧ್ಯಮಗಳು “ಬೆಳಗಾವಿ ಬೆಂಕಿ’ ಎಂದೆಲ್ಲ ಗೊಂದಲ ಸೃಷ್ಟಿಸಬಾರದು ಎಂದು ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಟಾಳ್ಕರ್‌ ಹೇಳಿದರು.

ನಗರದಲ್ಲಿ ಶನಿವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಚಿವದ್ವಯರು, ತಮ್ಮ ಬಗೆಗಿನ ಸುದ್ದಿಗಳ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಹೆಬ್ಟಾಳ್ಕರ್‌ ಮಾತನಾಡಿ, ಮಾಧ್ಯಮಗಳ ಸುದ್ದಿ ಬಗ್ಗೆ ವಿಮರ್ಶಿಸಬೇಕಾದ ಸ್ಥಿತಿ ಬಂದಿದೆ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವಂತೆ ಪತ್ರಕರ್ತರು ಕೆಲಸ ಮಾಡ ಬೇಕಿದೆ. ನಮ್ಮ ಮಧ್ಯೆ ಗೊಂದಲವಿದೆ ಎಂಬ ಸುಳ್ಳನ್ನೇ ಪದೇಪದೆ ಹೇಳುವುದರಿಂದ ಜನರಲ್ಲಿ ಗೊಂದಲ ಆಗುತ್ತದೆ ಎಂದು  ಹೇಳಿದರು.

ಸಚಿವ ಸತೀಶ ಜಾರಕಿಹೊಳಿ ಮಾತನಾಡಿ,  ನಾವು ಏನೇ ಹೇಳಿದ್ದನ್ನು ಬೇರೆ ರೀತಿಯಲ್ಲಿ ಅರ್ಥೈಸಿ ಬರೆಯಲಾಗುತ್ತಿದೆ. ಅದಕ್ಕೆ ಮತ್ತೆ  ಸ್ಪಷ್ಟೀಕರಣ ನೀಡಿ, ಆ ರೀತಿ ನಾವು ಹೇಳಿಲ್ಲ ಎಂದು ಬಚಾವಾಗಬೇಕಾದ ಸ್ಥಿತಿ ಬಂದಿದೆ. ಇಂಥದ್ದಕ್ಕೆ ಕಡಿವಾಣ ಹಾಕಬೇಕಿದೆ. ಬೇರೆ ದೇಶದಲ್ಲಿ ಒಬ್ಬ ಸಚಿವನ ವಿರುದ್ಧ ಸುದ್ದಿ ಬಂದರೆ ರಾಜೀನಾಮೆ ನೀಡುತ್ತಾರೆ. ಆದರೆ ನಮ್ಮಲ್ಲಿ ರಾಜೀನಾಮೆ ನೀಡುವಂತೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next