ಗಂಗಾವತಿ: ತಮಗೆ ಆಗದ ಕೆಲವರು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಲಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದು ಇದು ಸರಿಯಲ್ಲ. ತಾವು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಇಕ್ಬಾಲ್ ಅನ್ಸಾರಿ ತಮ್ಮ ಹೇಳಿದ್ದಾರೆ.
ತಮ್ಮ ಫೇಸ್ ಬುಕ್ ಹಾಗೂ ಟ್ವಿಟರ್ ಗಳಲ್ಲಿ ಆಡಿಯೋ ಮೂಲಕ ಹೇಳಿಕೆ ನೀಡಿ, ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕ್ರಮದಲ್ಲಿ ತಾವು ಪಾಲ್ಗೊಂಡಿಲ್ಲ. ಇದನ್ನೇ ಇಟ್ಟುಕೊಂಡು ತಮ್ಮ ಕೆಲವು ವಿರೋಧಿಗಳು ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ತೊರೆದು ಅನ್ಯ ಪಕ್ಷ ಸೇರಲಿದ್ದಾರೆಂದು ಗಾಳಿ ಸುದ್ದಿಯನ್ನು ಹರಡುತ್ತಿದ್ದಾರೆ. ಇಂಥ ಗಾಳಿ ಸುದ್ದಿಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ತಮ್ಮ ಅಭಿಮಾನಿಗಳು ಕಿವಿಗೊಡಬಾರದು ಎಂದು ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ತಾವು ಮನೆಯಲ್ಲೇ ಇದ್ದು ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಕೊಡಿಸುವುದು, ಅವರಿಗೆ ಆಹಾರ ಕಿಟ್ ಗಳನ್ನು ಕೊಡಿಸುವುದು, ಆಕ್ಸಿಜನ್ ವ್ಯವಸ್ಥೆ ಮಾಡುವುದು ಸೇರಿದಂತೆ ಕಾರ್ಯಕರ್ತರು ಅಭಿಮಾನಿಗಳ ಮುಖಾಂತರ ಸೋಂಕಿತರಿಗೆ ನೆರವಾಗುತ್ತಿದ್ದೇನೆ. ಕೋವಿಡ್ ಕಡಿಮೆಯಾದ ತಕ್ಷಣ ಗಂಗಾವತಿ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿತ ಮಾಡಿ ಪುನಃ ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶ. ಇದಕ್ಕೆ ಕಾರ್ಯಕರ್ತರು ಅಭಿಮಾನಿಗಳು ಹೆಗಲಿಗೆ ಹೆಗಲು ಕೊಟ್ಟು ದುಡಿಯಲು ಸಿದ್ಧರಾಗಿದ್ದಾರೆ. ಖಚಿತವಾಗಿ ಗಂಗಾವತಿ ಕ್ಷೇತ್ರದಲ್ಲಿ ಪುನಃ ಗೆದ್ದು ಇಲ್ಲಿ ಮಾಡಬೇಕಾದ ಕೆಲಸ ಬಹಳಷ್ಟಿದೆ. ಆದ್ದರಿಂದ ಅಭಿಮಾನಿಗಳು ಕಾರ್ಯಕರ್ತರು ಯಾವುದೇ ಕುತಂತ್ರಿಗಳ ಗಾಳಿಸುದ್ದಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಹುಣಸೂರು: ಬಾಳೆ ತೋಟದಲ್ಲಿ ಬೆಳೆದಿದ್ದ ಗಾಂಜಾ ಗಿಡ ಪೊಲೀಶರ ವಶ: ಆರೋಪಿ ಪರಾರಿ
ಇತ್ತೀಚೆಗೆ ಜೆಡಿಎಸ್ ಮುಖಂಡ ಮಾಜಿ ಎಂಎಲ್ ಸಿ ಎಚ್.ಆರ್ ಶ್ರೀನಾಥ್ ಇಕ್ಬಾಲ್ ಅನ್ಸಾರಿ ಜೆಡಿಎಸ್ ಗೆ ಬರುವುದು ತಮಗೆ ಗೊತ್ತಿಲ್ಲ, ವರಿಷ್ಠರಿಗೆ ಗೊತ್ತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಪೆಟ್ರೋಲ್ ದರ ಖಂಡಿಸಿ ನಡೆಸಿದ ಕಾಂಗ್ರೆಸ್ ಪ್ರತಿಭಟನೆ ನಿಮಿತ್ತ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದ ಕಾಂಗ್ರೆಸ್ ಉಸ್ತುವಾರಿ ಎಂಎಲ್ ಸಿ ಪ್ರಕಾಶ್ ರಾಠೋಡ್ ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಕುಂಠಿತವಾಗಿದ್ದು ಈ ಕುರಿತು ಇಕ್ಬಾಲ್ ಅನ್ಸಾರಿ ಅವರ ಜತೆ ಮಾತನಾಡಿ ಪಕ್ಷ ಸಂಘಟನೆ ಮಾಡುವುದಾಗಿ ತಿಳಿಸಿದ್ದರು. ನಂತರ ಈ ಸಾರಿ ಅವರು ಕಾಂಗ್ರೆಸ್ ತೊರೆದು ಅನ್ಯ ಪಕ್ಷ ಸೇರಲಿದ್ದಾರೆ ಎಂಬ ಗಾಳಿ ಸುದ್ದಿ ಗಂಗಾವತಿ ಕ್ಷೇತ್ರದಾದ್ಯಂತ ಹರಡಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ ಅನ್ಸಾರಿ ಸ್ಪಷ್ಟನೆ ನೀಡಿದ್ದಾರೆ.