ಬೆಂಗಳೂರು: “ಯುಗ ಯುಗಾದಿ ಕಳೆದು ಮತ್ತೂಮ್ಮೆ ಯುಗಾದಿ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮ, ಖರೀದಿ ಉತ್ಸಾಹ ಅಷ್ಟಾಗಿ ಕಾಣುತ್ತಿಲ್ಲ. ಹಬ್ಬದ ಸಂದರ್ಭಗಳಲ್ಲಿ ಮಾರುಕಟ್ಟೆಯಲ್ಲಿ ಜನಜಂಗುಳಿ ನಿರೀಕ್ಷಿತ. ಆದರೆ, ಈ ಬಾರಿ ಮಳಿಗೆದಾರರು ಹಾಗೂ ವ್ಯಾಪಾರಿಗಳಲ್ಲಿರುವ ಉತ್ಸಾಹ ಗ್ರಾಹಕರಲ್ಲಿ ಕಾಣುತ್ತಿಲ್ಲ. ಶುಕ್ರವಾರ ನಗರದ ಹಲವು ಮಾರುಕಟ್ಟೆಗಳಿಗೆ ಭೇಟಿ ನೀಡಿದಾಗ ಕಂಡುಬಂದದ್ದು ಗ್ರಾಹಕರ ಮಂದ ಸ್ಪಂದನೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತರಕಾರಿ, ಹೂವು-ಹಣ್ಣು ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಿದೆ.ಆದರೆ ಜನರಲ್ಲಿ ಖರೀದಿ ಭರಾಟೆ ಕಾಣುತ್ತಿಲ್ಲ. “ನಮಗೆ ಯುಗಾದಿ ಇದೆ ಅಂತ ಅನಿಸುತ್ತಿಲ್ಲ. ಹಬ್ಬದ ವ್ಯಾಪಾರ ಕಾಣುತ್ತಿಲ್ಲ. ಹೋದ ವರ್ಷದಷ್ಟು ವ್ಯಾಪಾರ ಈ ವರ್ಷ ಆಗುತ್ತಿಲ್ಲ. ಹಬ್ಬ ಭಾನುವಾರ ಇರುವುದರಿಂದ ಶನಿವಾರ ಗ್ರಾಹಕರು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ,’ ಎಂದು ಕೆ.ಆರ್.ಮಾರುಕಟ್ಟೆ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
“ಕಳೆದ ವರ್ಷ ಹೂವಿನ ಬೆಲೆ ಏರಿಕೆಯಾಗಿತ್ತು. ಆದರೆ ಈ ವರ್ಷ ಬೆಲೆ ಹೆಚ್ಚೇನೂ ಇಲ್ಲ. ಆದರೂ ಹೇಳಿಕೊಳ್ಳುವ ವ್ಯಾಪಾರ ಆಗಿಲ್ಲ,’ ಎಂದವರು ಹೂವಿನ ವ್ಯಾಪಾರಿ, ಕೊರಟೆಗೆರೆಯ ಸಂತೋಷ್. “ಹಿಂದಿನ ವರ್ಷ ಒಂದು ಕೆ.ಜಿ ಕನಕಾಂಬರ ಬಲೆ 800 ರೂ. ಇತ್ತು. ಈ ವರ್ಷ 600 ರೂ. ಇದೆ. ಆದರೆ ಜನ ಹೂವು ಕೊಳ್ಳುವ ಉತ್ಸಾಹ ತೋರುತ್ತಿಲ್ಲ,’ ಎಂಬುದು ಅವರ ಅಳಲು.
ಮಾರುಕಟ್ಟೆಯಲ್ಲಿ ಚಂಡು ಹೂವು ಬೆಲೆಯೂ ಇಳಿದಿದೆ. ಕಳೆದ ವರ್ಷ ಕೆ.ಜಿಗೆ 80 ರಿಂದ 100 ರವರೆಗೂ ಇದ್ದ ಬೆಲೆ ಈ ವರ್ಷ 40 ರೂ. ಇದೆ. ಕಳೆದ ವರ್ಷ 600 ರೂ.ಇದ್ದ ಪ್ರತಿ ಕೆಜಿ ಮಲ್ಲಿಗೆ ಹೂವು 300 ರೂ.ಆಗಿದೆ. 200 ರಿಂದ 250 ಕೆ.ಜಿ ಇದ್ದ ಸೇವಂತಿಗೆ ಹೂವು ಬೆಲೆ ಈ ವರ್ಷ 100 ರೂ. ಆಗಿದೆ. ಕಳೆದ ವರ್ಷ ನಾನೇ ಒಂದು ಮಾರು ಸೇವಂತಿಗೆ ಹೂವು 150 ರೂ.ಗೆ ಮಾರಿದ್ದೆ ಆದರೆ, ಈ ವರ್ಷ 80 ರಿಂದ 60 ರೂ. ವರೆಗೂ ದರ ಇದ್ದರೂ ಮಾರಾಟ ಆಗುತ್ತಿಲ್ಲ ಎಂದು ಹೂವು ಮಾರುವ ಸೆಲ್ವಿ ಹೇಳುತ್ತಾರೆ.
ಇನ್ನು, ಎಲೆ-ಅಡಿಕೆ ವ್ಯಾಪರದಲ್ಲೂ ಇದೇ ಪರಿಸ್ಥಿತಿ. ಒಂದು ಕಟ್ಟು ನಾಟಿ ಎಲೆಗೆ 80 ರೂ. ಫಾರಂ ಎಲೆಗೆ 60 ರೂ. ಹಬ್ಬದ ವ್ಯಾಪಾರ ಇಲ್ಲ ಎಂದು ಎಲೆ ವ್ಯಾಪಾರಿ ಚಾಂದ್ ಪಾಷಾ ತಿಳಿಸಿದರು. ಹೂವು ಹಾಗೂ ದಿನಸಿಗೆ ಹೋಲಿಸಿದರೆ ಹಣ್ಣಿನ ವ್ಯಾಪಾರ ಕೊಂಚ ಉತ್ತಮ ಎಂಬಂತಿತ್ತು. ಬಾಳೆಹಣ್ಣು, ಸೇಬು, ದಾಳಿಂಬೆ, ದ್ರಾಕ್ಷಿ ಮಾರಾಟ ಹೆಚ್ಚಾಗಿ ಮಾರಾಟವಾಗುತ್ತಿದೆ ಎಂದು ತುಮಕೂರು ಮೂಲದ ಹಣ್ಣಿನ ವ್ಯಾಪಾರಿ ರವಿ ಹೇಳಿದರು.
ಈ ಮಧ್ಯೆ ಯುಗಾದಿ ಹಬ್ಬದ ಆಚರಣೆಗೆ ವಿಶೇಷವಾದ ಬೇವು ಮತ್ತು ಮಾವು ಸೊಪ್ಪು ಶುಕ್ರವಾರವೇ ಮಾರುಕಟ್ಟೆಗೆ ಬಂದಿತ್ತು. ಯುಗಾದಿ ವಿಶೇಷವಾದ ಹೋಳಿಗೆಗೆ ಬಳಸುವ ಬೆಲ್ಲ, ಬೇಳೆ,ಮೈದಾ ಹಿಟ್ಟು, ತುಪ್ಪ ಎಲ್ಲ ಮಳಿಗೆಗಳಲ್ಲಿ ಮುಂದೆ ಜೋಡಿಸಿದ್ದು ಇಟ್ಟು ಗ್ರಾಹಕರನ್ನು ಆಕರ್ಷಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಎಲ್ಲ ಬೆಲೆ ಇಳಿಕೆಯಾಗಿದ್ದರೂ ತೆಂಗಿನ ಕಾಯಿ ಬೆಲೆ ಮಾತ್ರ ಗಗನಕ್ಕೆ ಏರಿದ್ದು ಪ್ರತಿ ತೆಂಗಿನ ಕಾಯಿ ಬೆಲೆ 30 ರೂ.ವರೆಗೂ ಮಾರಾಟವಾಗುತ್ತಿತ್ತು.
ಈ ವರ್ಷ ವ್ಯಾಪಾರ ಡಲ್. ಹಣ್ಣುಗಳ ಬೆಲೆ ಇಳಿದರೂ ಕಳೆದ ವರ್ಷದಷ್ಟು ಈ ಬಾರಿ ವ್ಯಾಪಾರ ಆಗಿಲ್ಲ.
-ರುಮಾಯಿ, ಹಣ್ಣಿನ ವ್ಯಾಪಾರಿ
ತೆಂಗಿನ ಕಾಯಿ ಬೆಲೆ ಹೆಚ್ಚಾಗಿದೆ. ಕಳೆದ ವರ್ಷ 15ರಿಂದ 20 ರೂ. ಇದ್ದ ಬೆಲೆ ಈ ವರ್ಷ 25ರಿಂದ 35 ರೂ. ಆಗಿದೆ.
-ಮುತ್ತು, ತೆಂಗಿನಕಾಯಿ ವ್ಯಾಪಾರಿ
ಅಗತ್ಯ ಸಾಮಗ್ರಿಗಳ ದರ (ಕೆ.ಜಿಗೆ, ರೂ.ಗಳಲ್ಲಿ)
ಸಾಮಗ್ರಿ ಕಳೆದ ವರ್ಷದ ದರ ಈ ವರ್ಷದ ದರ
ಚೆಂಡು ಹೂವು 80 40
ಬಟನ್ ರೋಜ್ 200 100
ಕನಕಾಂಬರ 800 600
ಬೆಲ್ಲ 55 45
ತೆಂಗಿನ ಕಾಯಿ (ಒಂದಕ್ಕೆ) 20 30
* ದೇವೇಶ ಸೂರಗುಪ್ಪ