Advertisement

ಆಸ್ತಿ ವಿವರ ಸಲ್ಲಿಸದ ಜನಪ್ರತಿನಿಧಿಗಳಿಗೆ ಶಿಕ್ಷೆಯೂ ಇಲ್ಲ , ದಂಡವೂ ಇಲ್ಲ !

12:33 AM Jun 28, 2023 | Team Udayavani |

ಬೆಂಗಳೂರು: ಚುನಾಯಿತ ಜನಪ್ರತಿನಿಧಿ ಗಳು ಲೋಕಾಯುಕ್ತ ಸಂಸ್ಥೆಗೆ ಕಡ್ಡಾಯವಾಗಿ ಪ್ರತೀ ವರ್ಷ ಆಸ್ತಿ ವಿವರ ಸಲ್ಲಿಸಬೇಕೆಂಬ ನಿಯಮವಿದ್ದರೂ ಅದನ್ನು ಬಹುತೇಕರು ಪಾಲಿಸುತ್ತಿಲ್ಲ. ಇದಕ್ಕೆ ಕಾರಣ ಇದೆ: ಆಸ್ತಿ ವಿವರ ಸಲ್ಲಿಸದೆ ಇದ್ದರೆ ಶಿಕ್ಷೆಯೂ ಇಲ್ಲ, ದಂಡವೂ ಇಲ್ಲ. ಹೀಗಾಗಿ ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.

Advertisement

ಈ ನಿಯಮ ಕೇವಲ ನಾಮ್‌ ಕೇ ವಾಸ್ತೆಗೆ ಜಾರಿಯಲ್ಲಿದ್ದು, ಸರಕಾರವು ಇದಕ್ಕೆ ತಿದ್ದುಪಡಿ ತರುವ ಅಗತ್ಯ ಇದೆ ಎಂಬುದು ಬಹುಜನರ ವಾದ.

ವಿವರ ಸಲ್ಲಿಸದಿದ್ದರೆ ಏನಾಗುತ್ತದೆ?
ಲೋಕಾಯುಕ್ತ ಸಂಸ್ಥೆಗೆ ಜನಪ್ರತಿನಿಧಿಗಳು ಆಸ್ತಿ ವಿವರ ಸಲ್ಲಿಸದಿದ್ದರೆ ಲೋಕಾಯುಕ್ತರು ಈ ವಿಚಾರವನ್ನು ಸರಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರುತ್ತಾರೆ. ಬಳಿಕ ನೋಟಿಸ್‌ ಜಾರಿಗೊಳಿಸಿ ಆಸ್ತಿ ವಿವರ ಸಲ್ಲಿಕೆಗೆ ಕಾಲಾವಕಾಶ ನೀಡಲಾಗುತ್ತದೆ. ನಿಗದಿತ ಕಾಲಾವಕಾಶದಲ್ಲಿ ವಿವರ ಸಲ್ಲಿಸದಿದ್ದರೆ ಲೋಕಾಯುಕ್ತ ಸಂಸ್ಥೆಯಿಂದ ಜನಪ್ರತಿನಿಧಿಗೆ ಹಲವು ಬಾರಿ ನೋಟಿಸ್‌ ಜಾರಿಗೊಳಿಸಲಾಗುತ್ತದೆ. ನೋಟಿಸ್‌ಗೂ ಪ್ರತಿಕ್ರಿಯೆ ನೀಡದಿದ್ದಲ್ಲಿ ಅಂತಹ ಜನಪ್ರತಿನಿಧಿಗಳ ಹೆಸರನ್ನು ರಾಜ್ಯ ಮಟ್ಟದ ಮೂರು ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ. ಇದಕ್ಕೂ ಬಗ್ಗದಿದ್ದರೆ ಇಂತಹ ಜನಪ್ರತಿನಿಧಿಗಳು ಆಸ್ತಿ ವಿವರ ಸಲ್ಲಿಸದಿರುವ ವಿಚಾರವನ್ನು ರಾಜ್ಯಪಾಲರ ಗಮನಕ್ಕೆ ತರುತ್ತಾರೆ. ರಾಜ್ಯಪಾಲರು ಸಂಬಂಧಿಸಿದ ಜನಪ್ರತಿನಿಧಿಗಳ ವಿವರಗಳನ್ನು ಸದನದ ಮುಂದೆ ತರುತ್ತಾರೆ. ಸದನದಲ್ಲಿ ಆಸ್ತಿ ವಿವರ ಸಲ್ಲಿಸುವಂತೆ ಸೂಚಿಸಲಾಗುತ್ತದೆ. ಇದನ್ನು ಹೊರತುಪಡಿಸಿದರೆ ಆಸ್ತಿ ವಿವರ ಸಲ್ಲಿಸದ ಜನಪ್ರತಿನಿಧಿಗಳಿಗೆ ಯಾವ ಶಿಕ್ಷೆಯೂ ಆಗುವುದಿಲ್ಲ.

ಶೇ. 70ರಷ್ಟು ಮಂದಿ ವಿವರ ಸಲ್ಲಿಸುವುದಿಲ್ಲ
ಇದುವರೆಗೆ ಕೇವಲ ನಾಲ್ವರು ಚುನಾಯಿತ ಶಾಸಕರು ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ. ಜೂ. 30 ಕೊನೆಯ ದಿನವಾದರೂ ಪ್ರತೀ ವರ್ಷ ಶೇ. 70ರಷ್ಟು ಶಾಸಕರು, ಎಂಎಲ್‌ಸಿಗಳು ಆಸ್ತಿ ವಿವರ ಸಲ್ಲಿಸಲು ಹಿಂದೇಟು ಹಾಕುತ್ತಾರೆ. ಆದರೆ ಈ ಬಾರಿ ಲೋಕಾಯುಕ್ತ ಬಿ.ಎಸ್‌. ಪಾಟೀಲ್‌ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಕಳೆದ ವರ್ಷ 60 ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ
ಕಳೆದ ವರ್ಷ 60 ಶಾಸಕರು ಹಾಗೂ 36 ವಿಧಾನ ಪರಿಷತ್‌ ಸದಸ್ಯರು ತಮ್ಮ ಆಸ್ತಿ ವಿವರ ಸಲ್ಲಿಸಿರಲಿಲ್ಲ. ಈ ಪೈಕಿ ಈಗ ಕೆಲವರು ಸಚಿವರಾಗಿದ್ದರೆ, ಇನ್ನು ಕೆಲವರು ಪ್ರಭಾವಿ ರಾಜಕಾರಣಿಗಳು ಎಂದು ತಿಳಿದು ಬಂದಿದೆ.

Advertisement

ಕಾಯ್ದೆಯಲ್ಲಿ ಯಾವುದೇ ವ್ಯಕ್ತಿ ನಿರ್ದಿಷ್ಟ ಮಾಹಿತಿ ಕೊಡಬೇಕು ಎಂಬ ಆದೇಶವಿದ್ದರೆ ಅದನ್ನು ಆತ ನೀಡಬೇಕಾಗುತ್ತದೆ. ಕಾನೂನಿನ ನಿಯಮದ ಪ್ರಕಾರ ಆಸ್ತಿ ವಿವರ ಸಲ್ಲಿಸದಿದ್ದರೆ ಅಂತಹ ಜನಪ್ರತಿನಿಧಿಗಳಿಗೆ ಶಿಕ್ಷೆ ಆಗಬೇಕು ಎಂಬುದು ನನ್ನ ಅಭಿಪ್ರಾಯ.
– ನ್ಯಾ| ಸಂತೋಷ್‌ ಹೆಗ್ಡೆ (ನಿವೃತ್ತ ), ಮಾಜಿ ಲೋಕಾಯುಕ್ತ

ರಾಜ್ಯದ ಎಲ್ಲ ಶಾಸಕರೂ ಜೂ. 30ರೊಳಗೆ ಆಸ್ತಿ ವಿವರ ಸಲ್ಲಿಸಬೇಕು. ಸಲ್ಲಿಸದಿದ್ದರೆ ಅಂತಹ ಶಾಸಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಕಾನೂನಿನ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು.
-ಬಿ.ಎಸ್‌. ಪಾಟೀಲ್‌, ಲೋಕಾಯುಕ್ತ

~ ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next