Advertisement

ಬೆಳಗಾವಿ: ಸ್ಮಾರ್ಟ್‌ ಸಿಟಿ ಸುಡಗಾಡದಾಗ ಹೆಣ ಸುಡಾಕೂ ಗತಿ ಇಲ್ಲ!

06:28 PM May 30, 2023 | Team Udayavani |

ಬೆಳಗಾವಿ: ತಾಸಗಟ್ಟಲೇ ಹೆಣ ಸುಡಾಕ ಸಾವರಾರ ರೂಪಾಯಿ ರೊಕ್ಕ ಖರ್ಚ ಮಾಡಬೇಕಾಗೈತಿ… ಕಟ್ಟಿಗೆ, ಸೆಗಣಿ ಕುಳ್ಳದಿಂದ ಹೆಣ ಸುಟ್ಟ ಮುಗಿಸಿ ಹೋಗಾಕ ಮೂರ್‍ನಾಲ್ಕ ತಾಸ ಹಿಡ್ಯಾತೈತಿ… ಗ್ಯಾಸ್‌ ಹಚ್ಚಿ ನಾಲ್ಕೈದ ನಿಮಿಷದಾಗ ಹೆಣ ಸುಡಬೇಕಂದ್ರ ವ್ಯವಸ್ಥಾ ಇಲ್ಲದ ದೊಡ್ಡ ತಲಿನೋವಾಗೈತಿ… ಗ್ಯಾಸ್‌ ಇದ್ರೂ ಚಾಲೂ ಮಾಡಿಲ್ಲ…ಸ್ಮಾರ್ಟ್‌ ಸಿಟಿ ಬೆಳಗಾವಿಯಲ್ಲಿ ಅಂತ್ಯಸಂಸ್ಕಾರಕ್ಕೆ ಅತ್ಯಾಧುನಿಕ ಸೌಲಭ್ಯ ಇಲ್ಲದೇ ಇನ್ನೂ ಸೌದೆ ಮೇಲೆಯೇ ಅಂತ್ಯಸಂಸ್ಕಾರ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಪಾಲಿಕೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಬೆಳಗಾವಿಯ ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ಅತ್ಯಾಧುನಿಕ ಗ್ಯಾಸ್‌ ಒಲೆ ವ್ಯವಸ್ಥೆ ಇದ್ದರೂ ತಾಂತ್ರಿಕ ದೋಷದಿಂದ ಇನ್ನೂ ಆರಂಭಿಸಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ಈ ಸ್ಮಶಾನದಲ್ಲಿ ಸೌದೆ, ಸೆಗಣಿ ಕುಳ್ಳಿನಿಂದಲೇ
ಗಂಟೆಗಟ್ಟಲೇ ಮೃತದೇಹ ಸುಡಲಾಗುತ್ತಿದೆ. ಇದರಿಂದ ಸಾವಿರಾರು ಹಣ ವೆಚ್ಚ ಮಾಡಬೇಕಾಗಿದೆ. ಸಾರ್ವಜನಿಕರು ಮಹಾನಗರ
ಪಾಲಿಕೆಯ ಈ ದುಸ್ಥಿತಿ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸಾವಿರಾರು ರೂ. ವೆಚ್ಚ: ಸೌದೆ, ಕಟ್ಟಿಗೆ, ಸೆಗಣಿ ಕುಳ್ಳು ಬಳಸಿ ತಾಸುಗಟ್ಟಲೇ ಹೆಣ (ಮೃತದೇಹ) ಸುಡುವ ಬದಲು ಕ್ಷಣಾರ್ಧದಲ್ಲಿ ಡೀಸೆಲ್‌ ಒಲೆ ಬಳಸಿ ಮೃತದೇಹ ಸುಡುವ ಸೌಲಭ್ಯವನ್ನು ಸದಾಶಿವ ನಗರ ಸ್ಮಶಾನದಲ್ಲಿ ಅಳವಡಿಸಿ ಮೂರು ವರ್ಷ ಕಳೆದರೂ ಇನ್ನೂ ಇದಕ್ಕೆ ಕಾಯಕಲ್ಪ ಸಿಕ್ಕಿಲ್ಲ. ಹೀಗಾಗಿ ಸಾರ್ವಜನಿಕರು ಮೃತದೇಹ ದಹಿಸಲು ಸಾವಿರಾರು ವೆಚ್ಚ ಮಾಡುವ ದುಸ್ಥಿತಿ ಬಂದಿದೆ. ಮೃತದೇಹಗಳನ್ನು ಬೇಗ ದಹಿಸಲು ಡೀಸೆಲ್‌ ಒಲೆ ಆರಂಭಿಸಿ ಮೂರು ವರ್ಷ ಕಳೆದಿದೆ. ಆದರೆ ಇನ್ನೂ ಅದರ ಬಳಕೆ ಆಗುತ್ತಿಲ್ಲ.

ಜತೆಗೆ ಈ ಸ್ಮಶಾನದಲ್ಲಿ ಸೆಗಣಿ ಕುಳ್ಳಗಳನ್ನು ಸಂಗ್ರಹಿಸಿ ಇಡಲು ಶೆಡ್‌ ಇಲ್ಲ. ಇದರಿಂದ ಜನ ಪಾಲಿಕೆಯಿಮದ ನೀಡುವ ಉಚಿತ ಕುಳ್ಳುಗಳ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸದಾಶಿವ ನಗರದ ಸ್ಮಶಾನದಲ್ಲಿಯ ಅನೇಕ ಸಮಸ್ಯೆಗಳಿಗೆ ಮುಕ್ತಿ ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ.

ಮೂರು ವರ್ಷವಾದರೂ ಆರಂಭಿಸಿಲ್ಲ: ಡೀಸೆಲ್‌ ಮೂಲಕ ಮೃತದೇಹ ಸುಡುವ ಸೌಲಭ್ಯವನ್ನು 2017ರಲ್ಲಿ ಆರಂಭಿಸಲಾಯಿತು. ಈ ಒಲೆಗೆ ಸುಮಾರು 54 ಲಕ್ಷ ರೂ. ವೆಚ್ಚ ಮಾಡಲಾಗಿತ್ತು. ಕೊರೊನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಳಿಸಿ ಬಳಿಕ 2020-21ರಲ್ಲಿ ಕೆಲಸ ಮುಗಿಸಲಾಗಿತ್ತು. ಆಗ ಅನಾಥ ಮೃತದೇಹವನ್ನು ಈ ಒಲೆಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಆದರೆ ಡೀಸೆಲ್‌ ಒಲೆಯಲ್ಲಿ ತಾಂತ್ರಿಕ ದೋಷ ಕಂಡು ಬಂತು. ಡಿಸೇಲ್‌ ಹಾಗೂ ಸಮಯ ವ್ಯರ್ಥ ಆಗುತ್ತಿರುವುದನ್ನು ಅರಿತ ಮಹಾನಗರ ಪಾಲಿಕೆಯವರು ಈ ಒಲೆ ಬಳಸುವುದನ್ನು ನಿಲ್ಲಿಸಿದರು.

Advertisement

ಗ್ಯಾಸ್‌ದಿಂದ ಅಂತ್ಯಸಂಸ್ಕಾರ ಮಾಡುವ ಒಲೆಯ ಚಿಮಣಿ (ಹೊಗೆ ಕೊಳವೆ)ಯಲ್ಲಿ ತಾಂತ್ರಿಕ ದೋಷ ಇದೆ. ಇದರಿಂದ ಗ್ಯಾಸ್‌ ಪ್ರಮಾಣ ಹೆಚ್ಚಾಗಿ ಹೋಗುತ್ತಿರುವುದರಿಂದ ತಾಪ ಹೆಚ್ಚಾಗುತ್ತಿದೆ. ಬರ್ನಿಂಗ್‌ ಪ್ರಮಾಣವೂ ಅಧಿಕವಾಗುತ್ತಿದೆ. ಹೀಗಾಗಿ ಗ್ಯಾಸ್‌ ಸೋರಿಕೆ ಬಹಳ ಆಗುತ್ತಿರುವುದರಿಂದ ಇದರ ವೆಚ್ಚವೂ ದ್ವಿಗುಣಗೊಂಡಿದೆ. ಹೀಗಾಗಿ ಈ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ ಎಂದು ಸಂಬಂಧಿಸಿದ ಅ ಧಿಕಾರಿಗಳು ತಿಳಿಸಿದ್ದಾರೆ. ಗ್ಯಾಸ್‌ ಒಲೆಯಲ್ಲಿಯ ತಾಂತ್ರಿಕ ದೋಷವನ್ನು ಪಾಲಿಕೆಯ ಲೋಕೋಪಯೋಗಿ ಇಲಾಖೆ ದುರಸ್ತಿ ಮಾಡಬೇಕಾಗುತ್ತದೆ.

ಒಲೆಯ ಆಂತರಿಕವಾಗಿ ಇರುವ ಚಿಮಣಿಯ ಮರು ವಿನ್ಯಾಸ ಮಾಡಿ ಸರಿಪಡಿಸಬೇಕಾಗಿದೆ. ಇದಕ್ಕೆ ಸುಮಾರು 15 ಲಕ್ಷ ರೂ. ವೆಚ್ಚ ಆಗಲಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯವಾದ ಬಳಿಕ ಹಣ ಬಿಡುಗಡೆ ಮಾಡಲಾಗುವುದು. ಅಲ್ಲಿಯವರೆಗೆ ಸೌದೆ ಬಳಸಿಯೇ ಅಂತ್ಯಸಂಸ್ಕಾರ ನಡೆಸುವುದು ಅನಿವಾರ್ಯವಾಗಿದೆ.

ಡೀಸೆಲ್‌ದಿಂದ ಗ್ಯಾಸ್‌ಗೆ ಪರಿವರ್ತನೆ
ಬೆಳಗಾವಿ ಉತ್ತರ ಮತಕ್ಷೇತ್ರದ ಹಿಂದಿನ ಶಾಸಕ ಅನಿಲ್‌ ಬೆನಕೆ ಅವರು ಸದಾಶಿವ ನಗರ ಸ್ಮಶಾನಕ್ಕೆ ಭೇಟಿ ನೀಡಿ ಸ್ಥಗಿತಗೊಂಡಿದ್ದ
ಡೀಸೆಲ್‌ ಒಲೆಯನ್ನು ಪರಿಶೀಲಿಸಿದ್ದರು. ಡೀಸೆಲ್‌ ಒಲೆಯನ್ನು ಗ್ಯಾಸ್‌ ಒಲೆಗೆ ಪರಿವರ್ತಿಸುವಂತೆ ಪಾಲಿಕೆಗೆ ಸೂಚನೆಯನ್ನೂ ನೀಡಿದ್ದರು. ಅದಕ್ಕೆ ಮೆಗಾ ಗ್ಯಾಸ್‌ ಕಂಪನಿಯವರು ಸ್ಪಂದಿಸಿ ಕಾಮಗಾರಿ ಕೈಗೆತ್ತಿಕೊಂಡರು. ಆದರೆ ಈ ಒಲೆಯ ಚಿಮಣಿಯಲ್ಲಿ ತಾಂತ್ರಿಕ ದೋಷ ಇದ್ದಿದ್ದರಿಂದ ಗ್ಯಾಸ್‌ ಮೂಲಕ ಅಂತ್ಯಸಂಸ್ಕಾರ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.

ಕುಳ್ಳು ಸಂಗ್ರಹಿಸಿಡುವ ಶೆಡ್‌ ಕೊರತೆ
ಬೆಳಗಾವಿಯ ಶಹಾಪುರ ಹಾಗೂ ಸದಾಶಿವ ನಗರದ ಸ್ಮಶಾನದಲ್ಲಿ ಮಹಾನಗರ ಪಾಲಿಕೆಯಿಂದ ಕುಳ್ಳಿನಿಂದ ಉಚಿತ ಅಂತ್ಯಸಂಸ್ಕಾರದ ಸೌಲಭ್ಯ ಒದಗಿಸಿದೆ. ಅದರಂತೆ ಶಹಾಪುರ ಸ್ಮಶಾನದಲ್ಲಿ ಮಾತ್ರ ಈ ಸೌಲಭ್ಯ ಚಾಲ್ತಿಯಲ್ಲಿದೆ. ಸದಾಶಿವ ನಗರದ ಸ್ಮಶಾನದಲ್ಲಿ ಕುಳ್ಳಗಳನ್ನು ಇಡಲು ಶೆಡ್‌ ಇಲ್ಲವಾಗಿದೆ. ಸ್ಮಶಾನದ ಪಕ್ಕದಲ್ಲಿ ಸ್ವಲ್ಪ ಜಾಗ ಮಾಡಿಕೊಂಡು ಕುಳ್ಳಗಳನ್ನು ಸಂಗ್ರಹಿಸಿ ಇಡಲಾಗಿದೆ. ಈ ಮೊದಲು ಅಂತ್ಯಸಂಸ್ಕಾರಕ್ಕೆ ಸುಮಾರು 5 ಸಾವಿರ ರೂ. ವರೆಗೆ ಖರ್ಚು ಆಗುತ್ತಿತ್ತು. ಈಗ ಕುಳ್ಳುಗಳನ್ನು ಉಚಿತವಾಗಿ ಪಾಲಿಕೆಯಿಂದ ನೀಡಲಾಗುತ್ತಿದೆ. ಕೇವಲ 800-1000 ರೂ. ವರೆಗೆ ಕಟ್ಟಿಗೆ ಖರೀದಿಸಿದರೆ ಅಂತ್ಯಸಂಸ್ಕಾರ ಮಾಡಬಹುದಾಗಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ತಾಂತ್ರಿಕ ದೋಷ ನಿವಾರಣೆ ಯಾವಾಗ?
ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿಯ ಡೀಸೆಲ್‌ ದಹನವನ್ನು ಪರಿವರ್ತಿಸಿ ಗ್ಯಾಸ್‌ ಮೂಲಕ ದಹಿಸಲು ನಿರ್ಣಯ
ತೆಗೆದುಕೊಳ್ಳಲಾಗಿದೆ. ಮೆಗಾ ಗ್ಯಾಸ್‌ ಕಂಪನಿಯವರು ಸಿಎಆರ್‌ ಅನುದಾನದಲ್ಲಿ ಈ ಕಾಮಗಾರಿ ಕೈಗೊಳ್ಳುವ ಜವಾಬ್ದಾರಿಯನ್ನೂ ತೆಗೆದುಕೊಂಡಿತು. ಅದರಂತೆ ಕಂಪನಿ ಕಡೆಯಿಂದ ಗ್ಯಾಸ್‌ ಪೈಪ್‌ಲೈನ್‌ ಜೋಡಣೆ ಕಾರ್ಯವೂ ಪೂರ್ಣಗೊಂಡಿತು. ಆದರೆ ಮೃತದೇಹ ದಹಿಸುವ ಒಲೆಯಲ್ಲಿ ತಾಂತ್ರಿಕ ದೋಷ ಇದ್ದಿದ್ದರಿಂದ ಈ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ತಾಂತ್ರಿಕ ದೋಷ ಪಡಿಸುವ ಗೋಜಿಗೆ ಮಹಾನಗರ ಪಾಲಿಕೆ ಮುಂದಾಗಿಲ್ಲ ಎಂಬುದೇ ಸೋಜಿಗದ ವಿಷಯ.

ಸದಾಶಿವ ನಗರದ ಸ್ಮಶಾನದಲ್ಲಿ ಗ್ಯಾಸ್‌ ಪೈಪ್‌ ಲೈನ್‌ ಜೋಡಣೆ ಆಗಿದೆ. ಆದರೆ ಗ್ಯಾಸ್‌ ಮೂಲಕ ಅಂತ್ಯಸಂಸ್ಕಾರ ಮಾಡುವ ಒಲೆಯ ಚಿಮಣಿಯಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಇನ್ನು ಶೀಘ್ರದಲ್ಲಿಯೇ ಅದನ್ನು ದುರಸ್ಥಿಗೊಳಿಸಿ ಆರಂಭಿಸಲಾಗುವುದು.
ರುದ್ರೇಶ ಘಾಳಿ, ಆಯುಕ್ತರು, ಮಹಾನಗರ ಪಾಲಿಕೆ

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next