Advertisement

ದಕ್ಕೆಯಲ್ಲಿ ಬೋಟು ನಿಲುಗಡೆಗೆ ಜಾಗವೇ ಇಲ್ಲ

01:22 PM Nov 18, 2017 | |

ಮಹಾನಗರ: ಮೀನುಗಳ ಬಗ್ಗೆಯೇ ಲೆಕ್ಕಾಚಾರ ಹಾಕುವ ನಗರದ ಮೀನುಗಾರಿಕೆ ದಕ್ಕೆಯಲ್ಲಿ ಬೋಟುಗಳು ಸಮರ್ಪಕವಾಗಿ ನಿಲ್ಲಲು ವ್ಯವಸ್ಥೆಗಳಿಲ್ಲ.

Advertisement

ಸರಬರಾಜು ಮಾಡುವ ಉದ್ದೇಶದಿಂದ ಸಮುದ್ರದಲ್ಲಿ ಸಂಚರಿಸಿ, ಮೀನು ಹಿಡಿದು ಬೋಟು ಮೂಲಕ ಮಂಗಳೂರು ದಕ್ಕೆಗೆ ಬಂದರೆ ಇಲ್ಲಿ ಬೋಟು ನಿಲ್ಲಲು ಸ್ಥಳವಿಲ್ಲ. ನಗರದ ಮೀನುಗಾರಿಕೆ ದಕ್ಕೆಗೆ ಒಳ ಪಟ್ಟಂತೆ ಪರ್ಸಿನ್‌, ಟ್ರಾಲ್‌ಬೋಟು ಸಹಿತ ಸುಮಾರು 1,500ಕ್ಕೂ ಅಧಿಕ ಬೋಟುಗಳಿವೆ. ಈಗಿನ ದಕ್ಕೆ 600 ಮೀಟರ್‌ ಉದ್ದವಿದ್ದು, ಇದರಲ್ಲಿ ಒಂದು ಸಾಲಿನಲ್ಲಿ ಅಂದಾಜು 350 ಬೋಟುಗಳಿಗೆ ಸ್ಥಳಾವಕಾಶವಿದೆ. ಉಳಿದ 1250 ಬೋಟುಗಳು ಇತರೆಡೆಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ.
ಒಂದರ ಹಿಂದೆ ಇನ್ನೊಂದರಂತೆ 7 ಸಾಲುಗಳಲ್ಲಿ ಬೋಟುಗಳು ನಿಲ್ಲುವ ಪರಿಸ್ಥಿತಿ ಇಲ್ಲಿದೆ. ಬೋಟುಗಳು ಪರಸ್ಪರ ತಾಗಿ ಹಾನಿ ಸಂಭವಿಸುತ್ತಿವೆ. ಇದರ ದುರಸ್ತಿ ಗಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡುವುದು ಮಾಲಕರಿಗೆ ಅನಿವಾರ್ಯ ವಾಗುತ್ತದೆ. 7 ಸಾಲುಗಳಲ್ಲಿ ನಿಂತ ಬಳಿಕವೂ ಬಹಳಷ್ಟು ಬೋಟುಗಳು ಸ್ಥಳಾವಕಾಶ ಹುಡುಕುತ್ತಾ ಕಸ್ಬಾ ಬೆಂಗ್ರೆ, ಬೋಳೂರು, ಕುದ್ರೋಳಿ ಬೊಕ್ಕಪಟ್ಣ ಮುಂತಾದ ಕಡೆಗಳಲ್ಲಿ ನಿಲ್ಲುತ್ತವೆ. 

ಮಂಗಳೂರು ಬಂದರಿನ ಒಂದು ಹಾಗೂ ಎರಡನೇ ಹಂತದ ಅಭಿವೃದ್ಧಿ ಆದರೂ, ಬೋಟು ನಿಲುಗಡೆಗೆ ಪರದಾಡುವ ಪರಿಸ್ಥಿತಿ ಮನಗಂಡು ಹಾಗೂ ಇಲ್ಲಿನ ಸ್ಥಳಾಭಾವ ಸಮಸ್ಯೆಯ ಹಿನ್ನೆಲೆಯಲ್ಲಿ ದಕ್ಕೆಯ ತೃತೀಯ ಹಂತದ ವಿಸ್ತರಣೆಗೆ ನಿರ್ಧರಿಸಲಾಗಿದೆ. ಇದು ಸಾಧ್ಯವಾದರೆ ಬಹು ಕಾಲದ ಬೇಡಿಕೆ ಈಡೇರಿದಂತಾಗುತ್ತದೆ.

1,000 ಬೋಟುಗಳಿಗೆ ಅವಕಾಶ ಸಾಧ್ಯತೆ
ತೃತೀಯ ಹಂತದ ವಿಸ್ತರಣೆಯಾದರೆ ಇಲ್ಲಿ ಸುಮಾರು 1,000 ಬೋಟುಗಳಿಗೆ ತಂಗಲು ಸ್ಥಳಾವಕಾಶ ನಿರ್ಮಾಣವಾಗುತ್ತದೆ. ಇನ್ನೂ ಉಳಿಯುವ ಬೋಟುಗಳಿಗೆ ಮತ್ತೆ ಸ್ಥಳದ ಕೊರತೆ ಕಾಡುತ್ತದೆ. ಆ ಸಂದರ್ಭದಲ್ಲಿ ಬೋಳೂರು, ಬೊಕ್ಕಪಟ್ಣ, ಉಳ್ಳಾಲ ಮುಂತಾದ ಕಡೆಗಳಲ್ಲಿ ಕಿರು ಜೆಟ್ಟಿ ನಿರ್ಮಿಸಿದರೆ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜತೆಗೆ, ಸುಲ್ತಾನ್‌ಬತ್ತೇರಿಯಲ್ಲಿ ಐಡಲ್‌ ಬರ್ಫಿನ್ಗ್  ಜೆಟ್ಟಿ ನಿರ್ಮಾಣವಾಗಿದ್ದು,  ಅದು ಉದ್ಘಾಟನೆಯಾದರೆ, ಕೆಲವು ಬೋಟುಗಳು ಅಲ್ಲಿ ತಂಗಲು ಸಾಧ್ಯ.

ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ಜಿಲ್ಲೆಯ ಮೀನುಗಾರರಲ್ಲದೆ ಹೊರ ಜಿಲ್ಲೆಯ ಹಾಗೂ ತಮಿಳುನಾಡು, ಕೇರಳ, ಜಾರ್ಖಂಡ್‌, ಒರಿಸ್ಸಾ ಮುಂತಾದ ರಾಜ್ಯದವರು ಮೀನುಗಾರಿಕೆ ನಡೆಸುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 65 ಪರ್ಸಿನ್‌ ದೋಣಿಗಳು, 952 ಟ್ರಾಲರ್‌ ದೋಣಿಗಳು ಹಾಗೂ 1206 ಯಾಂತ್ರೀಕೃತ ದೋಣಿಗಳು ಹಾಗೂ 479 ಯಾಂತ್ರೀಕೃತವಲ್ಲದ ನಾಡದೋಣಿಗಳು ಮೀನುಗಾರಿಕೆಯಲ್ಲಿ ಕಾರ್ಯನಿರತವಾಗಿವೆ. ಮೀನುಗಾರಿಕೆ ಕೈಗಾರಿಕೆಗಳಿಗೆ ಪೂರಕವಾಗುವ ಖಾಸಗಿ ಹಾಗೂ ಸರಕಾರ ಸ್ವಾಮ್ಯದ 1022 ಮೆಟ್ರಿಕ್‌ ಟನ್‌ ಸಾಮರ್ಥಯದ 65 ಮಂಜುಗಡ್ಡೆ ಕಾರ್ಖಾನೆಗಳು, 11 ಶೀತಲೀಕರಣ ಸ್ಥಾವರಗಳು, 4 ಘನೀಕರಣ ಘಟಕಗಳು, 14 ಫಿಶ್‌ಮಿಲ್‌ ಘಟಕಗಳು, ಮೀನು ಹಾಗೂ ಮೀನಿನ ಉಪ ಉತ್ಪನ್ನಗಳನ್ನು ರಫ್ತು ಮಾಡುವ 8 ಸಂಸ್ಕರಣ ಘಟಕಗಳನ್ನು ಒಳಗೊಂಡಿದೆ.

Advertisement

ಬಂದರು ಅಭಿವೃದ್ಧಿ ಹಾದಿ
ಕೇಂದ್ರ ಪುರಸ್ಕೃತ ಯೋಜನೆಯಡಿ ಮೊದಲ ಹಂತದ ಮೀನುಗಾರಿಕೆ ಬಂದರಿನ ನಿರ್ಮಾಣವನ್ನು 1986ರಲ್ಲಿ ಆರಂಭಿಸಲಾಗಿತ್ತು. 1991ರಲ್ಲಿ ಪೂರ್ಣಗೊಂಡಾಗ ಭರಿಸಲಾದ ವೆಚ್ಚ 147.80 ಲ.ರೂ. 138 ಮೀ. ಉದ್ದದ ಜೆಟ್ಟಿ, 675 ಚ.ಮೀ. ವಿಸ್ತೀರ್ಣದ ಮೀನು ಹರಾಜು ಪ್ರಾಂಗಣ, ರಸ್ತೆ, ನೀರು, ವಿದ್ಯುತ್‌ ಸೌಕರ್ಯ ಒದಗಿಸಲಾಗಿತ್ತು. ಆರಂಭದಲ್ಲಿ 300ರಿಂದ 350 ಸಂಖ್ಯೆಯ 30ರಿಂದ 43 ಅಡಿ ಉದ್ದದ ಯಾಂತ್ರೀಕೃತ ದೋಣಿಗಳು ಕಾರ್ಯಾಚರಿಸುತ್ತಿದ್ದವು. ಬಳಿಕ ಯಾಂತ್ರೀಕೃತ ದೋಣಿಗಳ ಸಂಖ್ಯೆಯಲ್ಲಿ ಹೆಚ್ಚಾದ ಕಾರಣ 2ನೇ ಹಂತದ ಕಾಮಗಾರಿಯನ್ನು 2003ರಲ್ಲಿ ಕೈಗೊಳ್ಳಲಾಯಿತು. 67 ಮೀ. ಉದ್ದದ ಜೆಟ್ಟಿಯನ್ನು 144.67 ಲ.ರೂ. ವೆಚ್ಚದಲ್ಲಿ 2004ರಲ್ಲಿ ಪೂರ್ಣಗೊಳಿಸಲಾಯಿತು.

ಬೋಟು ನಿಲುಗಡೆ ದೊಡ್ಡ ಸಮಸ್ಯೆ
ಪ್ರಸ್ತುತ ದಕ್ಕೆಯಲ್ಲಿ ಬೋಟುಗಳು ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಇಲ್ಲದೆ ಪರದಾಡುವ ಪರಿಸ್ಥಿತಿ ಇದೆ. ಸಾವಿರಾರು ಬೋಟುಗಳು ಈ ವ್ಯಾಪ್ತಿಯಲ್ಲಿ ಬಂದು ಹೋಗುವುದರಿಂದ ದಕ್ಕೆ ಇನ್ನಷ್ಟು ಅಗಲವಾಗಿರಬೇಕಿತ್ತು. ಈಗ ಮೂರನೇ ಹಂತದ ವಿಸ್ತರಣೆ ಶೀಘ್ರದಲ್ಲಿ ಈಡೇರಿದರೆ ಬೋಟುಗಳ ನಿಲುಗಡೆ ಸಮಸ್ಯೆ ನಿವಾರಣೆಯಾಗಬಹುದು.
ವಾಸುದೇವ ಬೋಳೂರು,
   ಹಿರಿಯ ಮೀನುಗಾರ ಮುಖಂಡ

   ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next