ಬಂದರು: ಬಂಗುಡೆ, ಬೂತಾಯಿ, ಮಾಂಜಿ, ಎಟ್ಟಿ, ಅಂಜಲ್, ಕೊಡ್ಡೈ , ಮದಿಮಾಲ್, ನಂಗ್…. ಹೀಗೆ ತರತರದ ಮೀನುಗಳ ಬಗ್ಗೆಯೇ ಲೆಕ್ಕಾಚಾರ ಹಾಕುವ ಮಂಗಳೂರು ಮೀನುಗಾರಿಕೆ ದಕ್ಕೆಯಲ್ಲಿ ಬೋಟುಗಳು ಸಮರ್ಪಕವಾಗಿ ನಿಲ್ಲಲು ಸರಿಯಾದ ಜಾಗವೇ ಇಲ್ಲ!
ಕಡಲಲ್ಲಿ ಮೀನು ಹಿಡಿದು ಬೋಟು ಮೂಲಕ ಮಂಗಳೂರು ದಕ್ಕೆಗೆ ಬಂದರೆ ಇಲ್ಲಿ ಬೋಟು ನಿಲ್ಲಲು ಸ್ಥಳವಿಲ್ಲದ ಸಮಸ್ಯೆ ಗಂಭೀರತೆಯನ್ನು ಪಡೆದುಕೊಂಡಿದೆ. ಪ್ರಸ್ತುತ ಇಲ್ಲಿ ಒಂದರ ಹಿಂದೆ ಒಂದರಂತೆ ಅನೇಕ ಸಾಲುಗಳಲ್ಲಿ ಬೋಟುಗಳು ನಿಲ್ಲುತ್ತಿದ್ದು, ಅವುಗಳಿಗೆ ಸರ್ಕಸ್ ಮಾಡಿಕೊಂಡು ಹೋಗುವ ಸ್ಥಿತಿ ಇದೆ.
ಮಂಗಳೂರು ಮೀನುಗಾರಿಕೆ ದಕ್ಕೆಗೆ ಒಳಪಟ್ಟಂತೆ ಪರ್ಸಿನ್, ಟ್ರಾಲ್‌ಬೋಟು ಸಹಿತ ಸುಮಾರು ಸಾವಿರಾರು ಬೋಟುಗಳು ಇವೆ.ಈಗ ಇರುವ ದಕ್ಕೆ 600 ಮೀಟರ್ ಉದ್ದವಿದೆ. ಇದರಲ್ಲಿ ಒಂದು ಸಾಲಿನಲ್ಲಿ ಸುಮಾರು 350 ಬೋಟುಗಳಿಗೆ ನಿಲ್ಲಲ್ಲು ಅವಕಾಶವಿದೆ. ಉಳಿದಂತೆ 1,200ಕ್ಕೂ ಅಧಿಕ ಬೋಟುಗಳು ಇತರ ಪ್ರದೇಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಇತರ ಜಾಗವನ್ನು ಹುಡುಕಿ ತಂಗಬೇಕಾಗಿದೆ. ಒಂದರ ಹಿಂದೆ ಇನ್ನೊಂದರಂತೆ 7 ಸಾಲುಗಳಲ್ಲಿ ಬೋಟುಗಳು ನಿಲ್ಲುವ ಪರಿಸ್ಥಿತಿ ಇಲ್ಲಿದೆ. ಮರದ ಹಾಗೂ ಸ್ಟೀಲ್‌ಬೋಟುಗಳು ಇದರಲ್ಲಿ ಇರುವುದರಿಂದ ಬಹಳಷ್ಟು ಬಾರಿ ಬೋಟುಗಳು ಒಂದಕ್ಕೊಂದು ತಾಗಿ ಹಾನಿ ಸಂಭವಿಸುತ್ತಿವೆ. ಇದರ ದುರಸ್ತಿಗಾಗಿ ಲಕ್ಷಾಂತರ ರೂ.ಗಳನ್ನು ಬೋಟುಗಳ ಮಾಲಕರು ವೆಚ್ಚ ಮಾಡಬೇಕಾತ್ತದೆ. 7 ಸಾಲುಗಳಲ್ಲಿ ನಿಂತ ಬಳಿಕವೂ ಬಹಳಷ್ಟು ಬೋಟುಗಳು ಸ್ಥಳವಾಕಾಶವನ್ನು ಹುಡುಕಿಕೊಂಡು ಇತರ ಕಡೆಗಳಿಗೆ ಸಾಗುತ್ತವೆ. ಕಸ್ಬಾ ಬೆಂಗ್ರೆ, ಬೋಳೂರು, ಕುದ್ರೋಳಿ ಬೊಕ್ಕಪಟ್ಣ ಮುಂತಾದ ಕಡೆಗಳಲ್ಲಿ ನಿಲ್ಲುತ್ತವೆ.
3ನೇ ಹಂತವಾದರೆ ಅನುಕೂಲ
ಮಂಗಳೂರು ಬಂದರಿನ ಒಂದನೇ ಹಾಗೂ ಎರಡನೇ ಹಂತದ ಅಭಿವೃದ್ಧಿ ಆದರೂ ಕೂಡ, ಬೋಟು ನಿಲುಗಡೆಗಡೆಗೆ ಪರದಾಡುವ ಪರಿಸ್ಥಿತಿ ಮನಗಂಡು ಹಾಗೂ ಇಲ್ಲಿನ ಸ್ಥಳಾವಕಾಶ ಗಂಭೀರ ಸಮಸ್ಯೆಯ ಹಿನ್ನೆಲೆಯಲ್ಲಿ ಮೀನುಗಾರಿಕೆ ದಕ್ಕೆಯ ತೃತೀಯ ಹಂತದ ವಿಸ್ತರಣೆಗೆ ಮುಂದಾಗಲಾಗಿದೆ. ವಿನ್ಯಾಸ ಗೊಂದಲವನ್ನು ತ್ವರಿತವಾಗಿ ನಿವಾರಿಸಿ ಯೋಜನೆ ಮುಂದುವರಿಯುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಗಳು ನಡೆಯುತ್ತಿದೆ. ಇದು ಸಾಧ್ಯವಾದರೆ, ಮೀನುಗಾರಿಕ ಬೋಟುಗಳ ಬಹಳ ಕಾಲದ ಬೇಡಿಕೆ ಈಡೇರಿದಂತಾಗುತ್ತದೆ. ತೃತೀಯ ಹಂತದ ವಿಸ್ತರಣೆಯಾದರೆ ಇಲ್ಲಿ ಸುಮಾರು 1,000 ಬೋಟುಗಳಿಗೆ ತಂಗಲು ಸ್ಥಳಾವಕಾಶ ನಿರ್ಮಾಣವಾಗುತ್ತದೆ.
ಬಂದರಿನ ಕಾಮಗಾರಿ
ಕೇಂದ್ರ ಪುರಸ್ಕೃತ ಯೋಜನೆಯಡಿ ಮೊದಲ ಹಂತದ ಮಂಗಳೂರು ಮೀನುಗಾರಿಕೆ ಬಂದರಿನ ನಿರ್ಮಾಣವನ್ನು 1986ರಲ್ಲಿ ಪ್ರಾರಂಭಿಸಲಾಗಿತ್ತು. ನಿರ್ಮಾಣ 1991ರಲ್ಲಿ ಪೂರ್ಣಗೊಂಡಾಗ ಭರಿಸಲಾದ ವೆಚ್ಚ 147.80 ಲಕ್ಷ ರೂ., 138 ಮೀಟರ್ ಉದ್ದದ ಜೆಟ್ಟಿ, 675 ಚ.ಮೀ. ವಿಸ್ತೀರ್ಣದ ಮೀನು ಹರಾಜು ಪ್ರಾಂಗಣ ಇನ್ನಿತರ ಸೌಲಭ್ಯಗಳಾದ ರಸ್ತೆ ನಿರ್ಮಾಣ, ನೀರು ಸರಬರಾಜು ವಿದ್ಯುತ್ ಸೌಕರ್ಯ ಒದಗಿಸಲಾಗಿತ್ತು. ಮೊದಲ ಮೀನುಗಾರಿಕೆ ಬಂದರು ನಿರ್ಮಾಣಗೊಂಡಾಗ 300ರಿಂದ 350 ಸಂಖ್ಯೆಯ 30 ಅಡಿಯಿಂದ 43 ಅಡಿ ಉದ್ದದ ಯಾಂತ್ರೀಕೃತ ದೋಣಿಗಳು ಕಾರ್ಯಾಚರಿಸುತ್ತಿದ್ದವು.
ಅನಂತರ ಯಾಂತ್ರೀಕೃತ ದೋಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾದ ಕಾರಣ ಮೀನುಗಾರಿಕೆ ಬಂದರಿನ 2ನೇ ಹಂತದ ಕಾಮಗಾರಿಯನ್ನು ಕೇಂದ್ರ ಪುರಸ್ಕೃತ ಯೋಜನೆಯಡಿ 2003ರಲ್ಲಿ ಕೈಗೊಳ್ಳಲಾಯಿತು. 67 ಮೀಟರ್ ಉದ್ದದ ಜೆಟ್ಟಿಯನ್ನು 144.67 ಲಕ್ಷ ರೂ ವೆಚ್ಚದಲ್ಲಿ 2004ರಲ್ಲಿ ಪೂರ್ಣಗೊಳಿಸಲಾಯಿತು. ಇದೀಗ ಮೂರನೇ ಹಂತದ ವಿಸ್ತರಣೆಗೆ ಯೋಚಿಸಲಾಗಿದೆ.