Advertisement

ಕುಂದಾಪುರದಲ್ಲಿ ವಾಹನ ಪಾರ್ಕಿಂಗ್‌ ಜಾಗವಿಲ್ಲ 

06:00 AM Apr 13, 2018 | Team Udayavani |

ಕುಂದಾಪುರ: ಹೆಚ್ಚಿದ ಜನಸಂದಣಿ, ವಾಹನ ದಟ್ಟಣೆ ಅಧಿಕ ವಾಗಿರುವುದರಿಂದ ಇದೀಗ ನಗರದಲ್ಲಿ ಪಾರ್ಕಿಂಗ್‌ಗೆ ಸ್ಥಳವೇ ಇಲ್ಲ! ಪಾರ್ಕಿಂಗ್‌ಗೆ ನಗರದ ವಿವಿಧೆಡೆ ಒಂದಷ್ಟು ಜಾಗ ಮೀಸಲಿಟ್ಟಿದ್ದರೂ ಸಾಲುತ್ತಿಲ್ಲ. ಇದರೊಂದಿಗೆ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುತ್ತಿರುವುದು, ರಸ್ತೆಯಲ್ಲೇ ವಾಹನ ನಿಲ್ಲಿಸಿ ವ್ಯವಹಾರ ಮಾಡುತ್ತಿರುವುದು ತೀವ್ರ ಟ್ರಾಫಿಕ್‌ ಕಿರಿಕಿರಿ ಸೃಷ್ಟಿಸಿದೆ.

 
ತಕರಾರು
ನಗರದ  ಶಾಸ್ತ್ರೀ ಸರ್ಕಲ್‌ನಿಂದ ರಸ್ತೆಯ ಎರಡೂ ಕಡೆ ಇಂಟರ್‌ಲಾಕ್‌ ಅಳವಡಿಸಲಾಗುವುದು. ಆಗ ವಾಹನ ನಿಲ್ಲಿಸಲು ಸಾಕಷ್ಟು ಅವಕಾಶವಾಗುತ್ತದೆ ಎಂದು ಪುರಸಭಾ ಉಪಾಧ್ಯಕ್ಷ ರಾಜೇಶ್‌ ಕಾವೇರಿ ಪುರಸಭಾ ಸಾಮಾನ್ಯ ಸಭೆಯಲ್ಲಿ  ಹೇಳಿದ್ದಾರೆ. ಆದರೆ ಇಂಟರ್‌ಲಾಕ್‌ ಅಳವಡಿಸಲೂ ಜಾಗದ ತಕರಾರು ಬರುವ ಆತಂಕ ಎದುರಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ನಗರದ ಒಳಗೆ ಬರಬೇಕಿಲ್ಲ. ಬಸ್‌ ತಂಗುದಾಣವೂ ಹೊರಗೇ ಇದ್ದು ಬಸ್‌ಗಳು ಹೆದ್ದಾರಿ ಮುಖಾಂತರವೇ ಸಾಗಿದಾಗ ಅರ್ಧದಷ್ಟು  ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎನ್ನುತ್ತಾರೆ ಸಂಚಾರಿ ಠಾಣೆಯ ಉಪನಿರೀಕ್ಷಕ ಲೋಲಾಕ್ಷ .


ಎಲ್ಲೆಲ್ಲಿ? 
-  ಪುರಸಭೆ ಎದುರಿನ ರಸ್ತೆ ವಾಹನ ಚಾಲಕರ ಗೊಂದಲದ ಗೂಡು. ಆಕ್ಸಿಸ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಭಾರತ್‌ ಬ್ಯಾಂಕ್‌, 3 ಆಸ್ಪತ್ರೆಗಳಿರುವ ಪ್ರದೇಶವಾದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ.
-  ಮಂಜುನಾಥ ಆಸ್ಪತ್ರೆಯಿಂದ ಪೇಟೆ ವೆಂಕಟರಮಣ ದೇವಸ್ಥಾನವರೆಗೆ ಪಾರ್ಕಿಂಗ್‌ಗೆ ಜಾಗ ಕಡಿಮೆಯಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೂ ವಾಹನ ನಿಲ್ಲಿಸುವುದು ತಲೆನೋವಿನ ಸಂಗತಿ.
-  ಪುರಸಭೆಗೆ, ಎಸ್‌ಬಿಐಗೆ, ಯೋಜನಾ ಪ್ರಾಧಿಕಾರಕ್ಕೆ ಬರುವ ಜನರ ವಾಹನ ನಿಲ್ಲಿಸಲು ಜಾಗವಿಲ್ಲ.
-  ಶಾಸ್ತ್ರೀ ಸರ್ಕಲ್‌, ಜೆಕೆ ರೆಸಿಡೆನ್ಸಿ, ಪಾರಿಜಾತ ಹೊಟೇಲ್‌, ಶಾಸ್ತ್ರೀ ವೃತ್ತದಿಂದ ಖಾಸಗಿ ಬಸ್‌ ನಿಲ್ದಾಣ ವರೆಗೆ ದ್ವಿಪಥ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ನಿಂತಿರುತ್ತವೆ. ಹೆಚ್ಚಿನ ಬಾರಿ ರಸ್ತೆಯಲ್ಲೇ ಪಾರ್ಕ್‌ ಮಾಡಲಾಗಿರುತ್ತದೆ.
-  ಸಂತೆ ಮಾರುಕಟ್ಟೆ ಬಳಿಯೂ ಸಮಸ್ಯೆ ಇದೆ. ವಾರದ ಸಂತೆ ದಿನ ಪರದಾಡಬೇಕು. ಬೆಳಗ್ಗೆ ಶಾಲಾ ಕಾಲೇಜು ಆರಂಭದ ಹೊತ್ತು ಹೆಚ್ಚಾಗಿ ಟ್ರಾಫಿಕ್‌ ದಟ್ಟಣೆ ಇರುತ್ತದೆ. ಕಚೇರಿ ವ್ಯವಹಾರದ ಸಂದರ್ಭವೂ ವಾಹನ ದಟ್ಟಣೆಯಿಂದ ಸಮಸ್ಯೆಯಾಗುತ್ತದೆ.


ಪೇ ಆ್ಯಂಡ್‌ ಪಾರ್ಕ್‌ 
ನಿಲುಗಡೆ  ಅಗತ್ಯ

-  ಖಾಸಗಿ ಬಸ್‌ನವರು ಎಲ್ಲೆಂದರಲ್ಲಿ ನಿಲ್ಲಿಸುವ ಕಾರಣ ಟ್ರಾಫಿಕ್‌ ಸಮಸ್ಯೆ ಯಾಗುತ್ತಿದೆ. 
-  ವಾಣಿಜ್ಯ ಕಟ್ಟಡಗಳ ಎದುರು ಶೇ.90ರಷ್ಟು ಜನ ಉದ್ದೇಶ ಪೂರ್ವಕವಾಗಿ ಅಸಮರ್ಪಕವಾಗಿ ವಾಹನ ನಿಲ್ಲಿಸುತ್ತಾರೆ. 
–  ಸಮಸ್ಯೆ ಪರಿಹಾರಕ್ಕೆ ಪೇ ಆ್ಯಂಡ್‌ ಪಾರ್ಕ್‌ (ಪಾವತಿಸಿ ನಿಲುಗಡೆ) ಮಾಡಬೇಕೆಂದು ಸಾರ್ವಜನಿಕರಿಂದ ಆಗ್ರಹ ಇದೆ. 

Advertisement

ಚಿತ್ರ: ಸಂತೋಷ್‌ ಕುಂದೇಶ್ವರ
– ಲಕ್ಷ್ಮೀ ಮಚ್ಚಿನ / ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next