ಮುಂಬಯಿ, ಸೆ. 6: ನಗರದ ಯಾಂತ್ರಿಕ ಬದುಕಿನ ಮಧ್ಯೆ ನಮ್ಮನ್ನು ನಾವು ಸಮಾಜಮುಖೀಯಾಗಿ ಗುರುತಿಸಿಕೊಂಡು ಸಮಾಜಕ್ಕಾಗಿ ಏನಾದರೂ ಕೊಡುಗೆಯನ್ನು ನೀಡಬೇಕು. ಆಗಲೇ ನಮ್ಮ ಬದುಕು ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲು ಸಹಕರಿಸುತ್ತಿರುವ ದಿ ಹೋಪ್ ಫೌಂಡೇಶನ್ ಧಾರಾವಿ ಕಾರ್ಯಗಳು ಶ್ಲಾಘನೀಯ. ವಿದ್ಯಾದಾನಕ್ಕಿಂತ ಮಿಗಿಲಾದ ದಾನ ಮತ್ತೂಂದಿಲ್ಲ ಎಂದು ನಾಮಾಂಕಿತ ನೃತ್ಯ ಕಲಾವಿದೆ ತಮಿಳು, ಕನ್ನಡ ಚಿತ್ರನಟಿ ರೂಪಿಣಿ ನುಡಿದರು.
ಆ. 28ರಂದು ಸಾವಿತ್ರಿಬಾಯಿ ಪುಲೆ ಸಭಾಗೃಹ ಧಾರಾವಿ ಇಲ್ಲಿ ಧಾರಾವಿ ಪರಿಸರದ ಬಡ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ತರಗತಿಯನ್ನು ನೀಡುವುದರ ಜತೆಗೆ ಶೈಕ್ಷಣಿಕ ನೆರವನ್ನು ನೀಡುತ್ತಿರುವ ಸರಕಾರೇತರ ಸಂಸ್ಥೆ ದಿ ಹೋಪ್ ಫೌಂಡೇಶನ್ ಧಾರಾವಿ ಇದರ ಪ್ರಥಮ ವಾರ್ಷಿಕೋತ್ಸವ ಸಂಭ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮುಖ್ಯ ಅಥಿತಿ ಸ್ಥಾನದಿಂದ ಮಾತನಾಡಿದ ಅವರು, ಫೌಂಡೇಶನ್‌ನ ಮುಖೇನ ಇನ್ನಷ್ಟು ಕಾರ್ಯಗಳು ನೆರವೇರಲಿ ಎಂದು ಶುಭ ಹಾರೈಸಿದರು.
ಫೌಂಡೇಶನ್‌ನ ಹಿತೈಷಿ ಸಮಾಜ ಸೇವಕ ಡಾ| ಪ್ರಕಾಶ್ ಮೂಡಬಿದ್ರೆ ಅವರು ಅತಿಥಿ-ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅತಿಥಿ ಸ್ಥಾನದಿಂದ ವಿದ್ಯಾದಾಯಿನಿ ಸಭಾದ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್ ಮಾತನಾಡಿ, ಬೇಟಿ ಪಡಾವೋ ಬೇಟಿ ಬಚಾವೋ ಆಂದೋಲನಕ್ಕೆ ಪೂರಕವಾಗಿ ವಿದ್ಯಾದಾಯಿನಿ ಸಭಾ ಕೂಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಒತ್ತು ಕೊಟ್ಟು ಸಹಕರಿಸುತ್ತಿದೆ. ಈ ನಿಟ್ಟಿನಲ್ಲಿ ಹೋಪ್ ಫೌಂಡೇಶನ್ ಶೈಕ್ಷಣಿಕ ಕ್ಷೇತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹ ಸಹಕಾರ ಗುರುತರವಾಗಿದೆ. ಡಾ| ಪ್ರಕಾಶ್ ಮೂಡಬಿದ್ರಿ ಮತ್ತು ಯಶೋಧರ ಪ್ರಕಾಶ್ ಮೂಡಬಿದ್ರಿ ಇವರು ಶೈಕ್ಷಣಿಕ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅಪಾರ. ಅವರಿಂದ ಇನ್ನಷ್ಟು ಸಮಾಜಮುಖೀ ಕಾರ್ಯಗಳು ನೆರವೇರಲಿ ಎಂದು ಆಶಿಸಿದರು.
ವೇದಿಕೆಯಲ್ಲಿ ಫೌಂಡೇಶನ್‌ನ ಹಿತೈಷಿ ಸಮಾಜ ಸೇವಕಿ ಯಶೋಧರ ಪ್ರಕಾಶ್ ಮೂಡಬಿದ್ರಿ, ನಿರಂಜನ್ ಎಚ್. ನಂದೇಪಲ್ಲಿ, ತಮ್ಮಯ್ಯ ಕ್ಯಾಸರಾಮ್, ಸಮಾಜ ಸೇವಕಿ ಸಂಜೀವಿ ಕೋಟ್ಯಾನ್, ಸಮಾಜ ಸೇವಕರಾದ ಡಾ. ಸತೀಶ್ ಬಂಗೇರ, ಶೇಖರ್ ಕರ್ಕೇರ ಮತ್ತು ನಮನ ಫ್ರೆಂಡ್ಸ್ ಮುಂಬಯಿ ಇದರ ಸಂಸ್ಥಾಪಕ ಸಂಘಟಕರಾದ ಪ್ರಭಾಕರ ಬೆಳುವಾಯಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಫೌಂಡೇಶನ್‌ನ ಬೆನ್ನೆಲುಬಾಗಿ ಪ್ರೊತ್ಸಾಹವನ್ನಿತ್ತು ಸಹಕರಿಸುತ್ತಿರುವ ಪ್ರಕಾಶ್ ಮೂಡಬಿದ್ರಿ ಇವರನ್ನು ಫೌಂಡೇಶನ್‌ನ ವತಿಯಿಂದ ಗೌರವಿಸಿ ಸಮ್ಮಾನಿಸಲಾಯಿತು. ಮಾತ್ರವಲ್ಲದೆ ಮಕ್ಕಳಿಗೆ ಜರಗಿದ ಪ್ರತಿಭಾ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ಅಥಿತಿ ಗಣ್ಯರ ಹಸ್ತದಿಂದ ನೀಡಲಾಯಿತು. ಅತಿಥಿ-ಗಣ್ಯರನ್ನು ದಿ ಹೋಪ್ ಫೌಂಡೇಶನ್ ಧಾರಾವಿ ಇದರ ಅಧ್ಯಕ್ಷರಾದ ಅನಿಲ್ ಬೋದಲ್, ಕೋಚಿಂಗ್ ಶಿಕ್ಷಕ ಸಿದಾನಂದ ಅಮ್ಮೆನಾರ್ ಹಾಗೂ ಫೌಂಡೇಶನ್‌ನ ಪದಾಧಿಕಾರಿಗಳು ಸ್ಮರಣಿಕೆ ಪುಷ್ಪಗುಚ್ಛವನ್ನಿತ್ತು ಗೌರವಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಕ್ಕಳಿಂದ ನೃತ್ಯ ವೈಭವ, ಕಿರು ಪ್ರಹಸನ ಜರಗಿತು. ಕಾರ್ಯಕ್ರಮದ ಶ್ರೇಯಸ್ಸಿಗೆ ಫೌಂಡೇಶನ್‌ನ ಕಾರ್ಯದರ್ಶಿ ತಯಪ್ಪ ಅನ್ಮೋಲ್, ಕೋಶಾಧಿಕಾರಿ ರಾಕೇಶ್ ಬಡಿಗೇರ್, ಉಪಾಧ್ಯಕ್ಷ ಭೀಮರಾಯ ಚಿಲ್ಕ, ಜತೆ ಕಾರ್ಯದರ್ಶಿ ರವಿ ದಂಡು ಮತ್ತು ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯರು ಶ್ರಮಿಸಿದರು. ಕಾರ್ಯಕ್ರಮವನ್ನು ಕು| ಸೋನಿ ಬಸ್‌ರಾಜ್ ಮತ್ತು ಕು| ಯಶೋಧಾ ವಸುಮಣಿ ನಿರೂಪಿಸಿ ವಂದಿಸಿದರು.