Advertisement

ಗುತ್ತಿಗೆ ಪೌರಕಾರ್ಮಿಕರ ಅಳಲು ಕೇಳುವವರಿಲ್ಲ!

08:11 AM Oct 23, 2019 | Suhan S |

ಹುಬ್ಬಳ್ಳಿ: ಕಳೆದೊಂದು ವರ್ಷದಿಂದ ಕೈಗಳಿಗೆ ಗ್ಲೌಸ್‌ ಸೇರಿದಂತೆ ಯಾವುದೇ ಸುರಕ್ಷತಾ ಸಲಕರಣೆ ಇಲ್ಲ. ಮೂರು ತಿಂಗಳಿಗೊಮ್ಮೆ ನಡೆಯಬೇಕಿದ್ದ ಆರೋಗ್ಯ ತಪಾಸಣೆ ಆರು ತಿಂಗಳಿಗೊಮ್ಮೆ ನಡೆಯುತ್ತದೆ. ಉಪಹಾರ ಭತ್ಯೆ ಕೈ ಸೇರಿದಾಗಲೇ ಗ್ಯಾರೆಂಟಿ. ನಾಲ್ಕೈದು ತಿಂಗಳಿಗೊಮ್ಮೆ ವೇತನ..

Advertisement

ಇದು ತಮ್ಮ ಆರೋಗ್ಯವನ್ನು ಲೆಕ್ಕಿಸದೆ, ನಗರ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಗುತ್ತಿಗೆ ಪೌರಕಾರ್ಮಿಕರ ನೋವಿನ ಕಥೆ. ಮನೆ, ವಾಣಿಜ್ಯ ಕಟ್ಟಡ, ಹೋಟೆಲ್‌ ಇನ್ನಿತರ ಕಡೆಗಳಿಂದ ತ್ಯಾಜ್ಯ ಸಂಗ್ರಹ, ವಿಲೇವಾರಿ, ಚರಂಡಿ ಸ್ವಚ್ಛತೆ, ಕಸ ಗುಡಿಸುವುದು ಇನ್ನಿತರ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಗುತ್ತಿಗೆ ಪೌರಕಾರ್ಮಿಕರಿಗೆ ಯಾವುದೇ ಸುರಕ್ಷತಾ ಸಲಕರಣೆಗಳು ಇಲ್ಲವಾಗಿವೆ. ಕೆಲವರ ಪ್ರಕಾರ ಒಂದು ವರ್ಷದ ಹಿಂದೆ ನೀಡಿದ್ದ ಸಲಕರಣೆಗಳು ಕೆಲವೇ ತಿಂಗಳಲ್ಲಿ ಹರಿದು ಹಾಳಾಗಿದ್ದು, ನಂತರದಲ್ಲಿ ಯಾವುದೇ ಸಲಕರಣೆ ನೀಡಿಲ್ಲವಂತೆ.

ಪ್ಲಾಸ್ಟಿಕ್‌ ಚೀಲವೇ ಗ್ಲೌಸ್‌: ತ್ಯಾಜ್ಯ ಸಂಗ್ರಹಣೆ ವಾಹನಗಳಲ್ಲಿ ಬರುವ ಮಹಿಳಾ ಗುತ್ತಿಗೆ ಕಾರ್ಮಿಕರು ಕೈಗವಸುಗಳಿಲ್ಲದೆ, ಸಣ್ಣ ಪ್ಲಾಸ್ಟಿಕ್‌ ಚೀಲಗಳನ್ನೇ ಕೈಗೆ ಸುತ್ತಿಕೊಂಡು ತ್ಯಾಜ್ಯವನ್ನು ವಾಹನಕ್ಕೆ ಸುರಿಯುತ್ತಾರೆ. ಮುಖಕ್ಕೆ ಧರಿಸುವ ಕವಚವೂ ಇಲ್ಲದೆ, ದುರ್ವಾಸನೆಯಲ್ಲೇ ಕಾರ್ಯ ನಿರ್ವಹಿಸಬೇಕಾಗಿದೆ. ಸ್ವತ್ಛತಾ ಗುತ್ತಿಗೆ ಟೆಂಡರ್‌ ಪಡೆಯಬೇಕಾದರೆ ಎಷ್ಟು ಜನ ಗುತ್ತಿಗೆ ಪೌರಕಾರ್ಮಿಕರು ಇರಬೇಕು, ಅವರಿಗೆ ಏನೆಲ್ಲಾ ಸುರಕ್ಷತಾ ಸಲಕರಣೆಗಳನ್ನು ನೀಡಬೇಕು, ವೇತನ ಎಷ್ಟು , ಭವಿಷ್ಯ ನಿಧಿ, ಆರೋಗ್ಯ ಸೌಲಭ್ಯ ಇನ್ನಿತರ ಸವಲತ್ತುಗಳನ್ನು ನೀಡಬೇಕು ಎಂಬ ನಿಯಮಗಳಿರುತ್ತವೆ. ಅದಕ್ಕೆ ಒಪ್ಪಿಕೊಂಡೇ ಗುತ್ತಿಗೆದಾರರು ಟೆಂಡರ್‌ ಪಡೆಯುತ್ತಾರೆ.

ಒಮ್ಮೆ ಟೆಂಡರ್‌ ಪಡೆದ ಮೇಲೆ ನಿಯಮ ಪಾಲನೆಯನ್ನು ಗುತ್ತಿಗೆದಾರರು ಮಾಡುವುದಿಲ್ಲ. ನಿಯಮ ಪಾಲನೆ ಆಗುತ್ತಿವೆಯೋ ಇಲ್ಲವೋ ಎಂಬುದನ್ನು ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಪರಿಶೀಲಿಸುವುದಿಲ್ಲ. ಎಂತಹ ಸಮಸ್ಯೆ ಎದುರಾದರೂ, ಏನಾದರೂ ಕೇಳಿದರೆ ಎಲ್ಲಿ ಕೆಲಸದಿಂದ ತೆಗೆದು ಬಿಡುತ್ತಾರೋ ಎಂಬ ಕಾರಣದಿಂದ ಗುತ್ತಿಗೆ ಪೌರಕಾರ್ಮಿಕರು ಸಹ ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗದೆ ಕಾರ್ಯನಿರ್ವಹಿಸುವಂತಾಗಿದೆ.

ಆರೋಗ್ಯ ತಪಾಸಣೆ: ಸರಕಾರದ ಸುತ್ತೋಲೆ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಪೌರಕಾರ್ಮಿಕರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಶಿಬಿರ ನಡೆಸಬೇಕು. ಆದರೆ ನಡೆಯುತ್ತಿಲ್ಲ ಎಂಬ ಆರೋಪ ಹಲವರದ್ದು. ಪೌರಕಾರ್ಮಿಕರಿಗೆ ನಿತ್ಯವೂ ಉಪಹಾರ ನೀಡಬೇಕಾಗಿದ್ದರೂ, ಉಪಹಾರ ಪೂರೈಕೆ ಗುತ್ತಿಗೆ ಪಡೆಯುವವರು ಗುಣಮಟ್ಟದ ಆಹಾರ ನೀಡದಿದ್ದರೆ ಅಥವಾ ಪೌರಕಾರ್ಮಿಕರಿಗೆ ಅದು ರುಚಿಸದಿದ್ದರೆ ಹೇಗೆ ಎಂಬ ಹಿನ್ನೆಲೆಯಲ್ಲಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ, ಪೌರಕಾರ್ಮಿಕರಿಗೆ ಉಪಹಾರ ಬದಲು ಉಪಹಾರ ಭತ್ಯೆ ನೀಡಿಕೆಗೆ ನಿರ್ಣಯಿಸಲಾಗಿತ್ತು. ಅದರಂತೆ ಅವರಿಗೆ ತಿಂಗಳ ವೇತನ ಜತೆಗೆ ಉಪಹಾರ ಭತ್ಯೆ ನೀಡಬೇಕಾಗುತ್ತದೆ. ಅನೇಕ ಪೌರಕಾರ್ಮಿಕರಿಗೆ ಉಪಹಾರ ಭತ್ಯೆ ಸಹ ಸಕಾಲಕ್ಕೆ ಸಿಗುತ್ತಿಲ್ಲವಾಗಿದೆ. ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಇಂತಹ ದುಸ್ಥಿತಿ ಬಗ್ಗೆ ಪಾಲಿಕೆ ಆಯುಕ್ತರು, ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ಕಾರ್ಮಿಕರ ಸಂಘಟನೆಗಳು ಸಹ ಗಟ್ಟಿ ಧ್ವನಿ ಎತ್ತಬೇಕಾಗಿದೆ.

Advertisement

ಕುಟುಂಬ ನಿರ್ವಹಣೆ ಹೇಗೆ? :

ಕೆಲವೊಂದು ವಾರ್ಡ್‌ಗಳ ಗುತ್ತಿಗೆದಾರರಂತೂ ಪೌರಕಾರ್ಮಿಕರಿಗೆ ನೀಡುವ ವೇತನವನ್ನೂ ಸರಿಯಾಗಿ ನೀಡುತ್ತಿಲ್ಲ. ನಾಲ್ಕೈದು ತಿಂಗಳಿಗೊಮ್ಮೆ ನೀಡುತ್ತಾರೆ. ಕೇಳಿದರೆ ಪಾಲಿಕೆಯಿಂದ ಬಿಲ್‌ ಆಗಿಯೇ ಇಲ್ಲ ಎಲ್ಲಿಂದ ಕೊಡುವುದು, ಪಾಲಿಕೆಗೆ ಹೋಗಿ ಕೇಳಿ ಎನ್ನುತ್ತಾರಂತೆ. ಪಾಲಿಕೆಗೆ ಹೋದರೆ, ನೀವು ನಮಗೆ ಸಂಬಂಧವೇ ಇಲ್ಲ. ನಿಮ್ಮ ವ್ಯವಹಾರವೇನಿದ್ದರೂ ನಿಮ್ಮ ಗುತ್ತಿಗೆದಾರರ ಬಳಿ, ನಮ್ಮ ಮಾತುಗಳೇನಿದ್ದರೂ ನಿಮ್ಮ ಗುತ್ತಿಗೆದಾರರೊಂದಿಗೆ ಎಂದು ಸಾಗಹಾಕುತ್ತಿದ್ದು, ನಾಲ್ಕೈದು ತಿಂಗಳಿಗೊಮ್ಮೆ ವೇತನವಾದರೆ ಕುಟುಂಬ ನಿರ್ವಹಣೆ ಹೇಗೆ ಎಂಬ ಅಳಲು ಗುತ್ತಿಗೆ ಪೌರಕಾರ್ಮಿಕರದ್ದಾಗಿದೆ. ಪುರುಷ ಪೌರಕಾರ್ಮಿಕರಿಗೂ ಸಲಕರಣೆಗಳನ್ನು ನೀಡಿಲ್ಲ. ಪುರುಷ ಕಾರ್ಮಿಕರಿಗೆ ನೀಡಬೇಕಾಗಿದ್ದ ಶೂ, ಕೈ ಕವಚ, ಮಾಸ್ಕ್, ಕ್ಯಾಪ್‌ ಇದಾವುದನ್ನು ನೀಡಿಲ್ಲ. ಈ ಹಿಂದೆ ನೀಡಿದ್ದ ಸಲಕರಣೆಗಳು ಕಳಪೆಯಿಂದಾಗಿ ಬೇಗ ಹಾಳಾಗಿವೆ.

 

ಸ್ವಚ್ಛತಾ ಸಿಬ್ಬಂದಿಗೆ ನೀಡಿರುವ ಸಲಕರಣೆ ಬಳಸೋದಿಲ್ವಂತೆ :  ನೀಡಿರುವ ಸಲಕರಣೆಗಳನ್ನು ಪೌರಕಾರ್ಮಿಕರು ಬಳಕೆಯೇ ಮಾಡುವುದಿಲ್ಲ ಎನ್ನುವ ಆರೋಪಗಳು ಸಹ ಇವೆ. ಪಾಲಿಕೆಯಿಂದ ಅಗತ್ಯ ಸುರಕ್ಷಾ ಸಲಕರಣೆಗಳನ್ನು ನೀಡಿದ್ದರೂ, ಅದೆಷ್ಟೋ ಪೌರಕಾರ್ಮಿಕರು ಅವುಗಳನ್ನು ಧರಿಸದೇ ಹಾಗೇ ಕರ್ತವ್ಯಕ್ಕೆ ಆಗಮಿಸುತ್ತಾರೆ ಎಂಬ ಆರೋಪವೂ ಇದೆ.

 

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next