Advertisement

ಪ್ರಧಾನಿಯವರ ಜನಪ್ರಿಯತೆಗೆ ಸರಿಸಮಾನರಾದ ನಾಯಕರೇ ವಿರೋಧ ಪಕ್ಷದಲ್ಲಿಲ್ಲ: ಸಚಿವ ಆರ್ ಅಶೋಕ್

06:02 PM Aug 19, 2021 | Team Udayavani |

ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ದೇಶದ ಯಾವುದೇ ಪಕ್ಷದಲ್ಲಿಯೂ ಸರಿಸಮನಾದ ನಾಯಕರಿಲ್ಲ. ಅವರು ದೇಶದಲ್ಲಿಯೇ ಜನಪ್ರಿಯತೆಯ ಉತ್ತುಂಗಕ್ಕೇರಿದ ನಾಯಕರು”, ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.

Advertisement

ಬೆಂಗಳೂರಿನಲ್ಲಿ ಇಂದು(ಗುರುವಾರ, ಆಗಸ್ಟ್ 19) ನಡೆದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಮಾತನಾಡಿದ  ಅಶೋಕ, “ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಈಗಾಗಲೇ ಎಲ್ಲಾ ರಾಜ್ಯಗಳಲ್ಲಿಯೂ ತನ್ನ ಹಿಡಿತ ಕಳೆದುಕೊಳ್ಳುತ್ತಿದ್ದು, ನಿಧಾನವಾಗಿ ರಾಷ್ಟ್ರೀಯ ಪಕ್ಷದ ತನ್ನ ಸ್ಥಾನಮಾನವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಿದೆ. ಹಾಗೇ ನೋಡಿದರೆ ಈಗ ಅದೆಷ್ಟೋ ಪ್ರಾದೇಶಿಕ ಪಕ್ಷಗಳು  ಕಾಂಗ್ರೆಸ್‍ಗಿಂತ ಪ್ರಬಲವಾಗಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ಅಮೆರಿಕದಂತಹ ದೇಶವು ಕೋವಿಡ್ ಪರಿಸ್ಥಿತಿಯನ್ನು ನಿರ್ವಹಿಸಲು ಹೆಣಗಾಡುತ್ತಿರುವಾಗ, ನರೇಂದ್ರ ಮೋದಿ ಸರ್ಕಾರವು ಕೋವಿಡ್ ನಂತಹ ಕಠಿಣ ಸವಾಲನ್ನು ದಿಟ್ಟವಾಗಿ ಮತ್ತು ಯಶಸ್ವಿಯಾಗಿ ನಿಭಾಯಿಸಿದೆ. ಕರ್ನಾಟಕದಲ್ಲಿ ನಾವು ಈಗಾಗಲೇ ಮೂರನೇ ಅಲೆ ಎದುರಾದರೆ ಅದನ್ನು ಎದುರಿಸಲು ಅಗತ್ಯ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದೇವೆ. ಬೆಂಗಳೂರಿನಲ್ಲಿ ವೈದ್ಯರು ಪ್ರತಿ ಮನೆಗೂ ಹೋಗಿ ಪರೀಕ್ಷೆ ನಡೆಸುವ ವಿಶಿಷ್ಟ ಕಾರ್ಯಕ್ರಮವನ್ನು ಆರಂಭಿಸಿದ್ದೇವೆ. ಈ ಮೂಲಕ ಬೆಂಗಳೂರಿನ 29 ಲಕ್ಷ ಮನೆಗಳನ್ನು ತಲುಪುತ್ತೇವೆ. ಈಗಾಗಲೇ 60 ಲಕ್ಷ ಜನರು ಮೊದಲ ಡೋಸ್ ವಾಕ್ಸಿನ್ ಪಡೆದಿದ್ದು ಮತ್ತು 17 ಲಕ್ಷ ಜನರು ಎರಡನೇ ಡೋಸ್ ಪಡೆದಿದ್ದಾರೆ. ಡಿಸೆಂಬರ್ ವೇಳೆಗೆ ನಾವು ಎಲ್ಲರಿಗೂ ಲಸಿಕೆ ನೀಡುವ ಗುರಿ ಹೊಂದಿದೇವೆ” ಎಂದಿದ್ದಾರೆ.

ಇದನ್ನೂ ಓದಿ : ಅನಧಿಕೃತ ಕೈಗಾರಿಕಾ ಶೆಡ್‌ ನಿರ್ಮಾಣಕ್ಕೆ ವಿರೋಧ

“ದಶಕಗಳಿಂದ ದೇಶ ಮತ್ತು ರಾಜ್ಯವನ್ನು ಆಳಿದ ಕಾಂಗ್ರೆಸ್ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಬೆಂಗಳೂರಿಗಾಗಿ ಮೆಟ್ರೋ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ದೊಡ್ಡ ಯೋಜನೆಗಳನ್ನು ಕೊಟ್ಟಿದೆ. ನರೇಂದ್ರ ಮೋದಿ ಸರ್ಕಾರವು ಬೆಂಗಳೂರಿಗೆ 17,000 ಕೋಟಿ ಮೊತ್ತದ ಉಪ ನಗರ ರೈಲು ಯೋಜನೆಯನ್ನು ಮಂಜೂರು ಮಾಡಿದೆ ಎಂದು ನಾನು ಮತ್ತೊಮ್ಮೆ ಹೇಳಬಯಸುತ್ತೇನೆ” ಎಂದಿದ್ದಾರೆ.

“ನೂತನ ಸಿಎಂ  ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಅಭಿವೃದ್ಧಿಗೆ ಮತ್ತು ರಾಜ್ಯಾದ್ಯಂತ ಬಡವರು, ಕೃಷಿಕರ ಪರ ಯೋಜನೆಗಳನ್ನು ಘೋಷಿಸಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಸರ್ಕಾರ ಅಂದರೆ ಅಭಿವೃದ್ಧಿ ಪರ ಸರ್ಕಾರ” ಎಂದು ಅವರು ಅಭಿಪ್ರಾಯ ಪಟ್ಟರು.

Advertisement

ಇದಕ್ಕೂ ಮುನ್ನ ಅವರು ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ನಂತರ, ಅಶೋಕ ವಿಜಯನಗರದ ಶ್ರೀ ಆದಿಚುಂಚನಗಿರಿ ಮಠದಲ್ಲಿ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿಮಾಡಿ ಒಕ್ಕಲಿಗ ಅಭಿವೃದ್ಧಿ ನಿಗಮದ ಬಗ್ಗೆ ಚರ್ಚೆ ನಡೆಸಿದರು. ಒಕ್ಕಲಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾದ ಎಂ ಕೃಷ್ಣಪ್ಪ ಈ ಸಂದರ್ಭದಲ್ಲಿ ಸಚಿವರ ಜತೆ ಉಪಸ್ಥಿತರಿದ್ದರು.

ಇದನ್ನೂ ಓದಿ : ಜನಾರ್ಧನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಷರತ್ತುಬದ್ಧ ಅನುಮತಿ ನೀಡಿದ ಸುಪ್ರೀಂ ಕೋರ್ಟ್

Advertisement

Udayavani is now on Telegram. Click here to join our channel and stay updated with the latest news.

Next