Advertisement
ಒಂದೆರಡು ವರ್ಷದ ಹಿಂದೆ ಮೊಬೈಲ್‌ನಲ್ಲಿ ಒಂದು ಜಿಬಿ ಡೇಟಾಗೆ 350 ರೂಪಾಯಿ ಕೊಡುತ್ತಾ, ಯೂಟ್ಯೂಬ್‌ನಲ್ಲಿ ಒಂದು ವಿಡಿಯೋ ನೋಡುವಾಗಲೂ ಜೇಬು ಮುಟ್ಟಿ ನೋಡಿಕೊಳ್ಳುತ್ತಿದ್ದ ಜನ ಮುಂದೊಂದು ದಿನ ಮೊಬೈಲ್‌ನಲ್ಲಿ ಗಂಟೆಗಟ್ಟಲೆ ಎಚ್‌ಡಿ ಟಿವಿ ನೋಡುವಷ್ಟು ಶ್ರೀಮಂತರಾಗುತ್ತಾರೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲವೇನೋ! ಆದರೆ ಅದಂತೂ ಈಗ ಸಾಧ್ಯವಾಗಿದೆ. ಆದರೆ ಜನ ಶ್ರೀಮಂತರಾಗಿದ್ದು ಅಷ್ಟು ಹಣ ಕೊಡುವ ಮಟ್ಟಿಗಲ್ಲ, ಬದಲಿಗೆ ಟೆಲಿಕಾಂ ಕಂಪನಿಗಳು ಅಷ್ಟು ಪ್ರಮಾಣದ ಡೇಟಾ ಕೊಡುತ್ತಿವೆ. ಅಷ್ಟೇ ಅಲ್ಲ, ಟೆಲಿಕಾಂ ಕಂಪನಿಗಳು ತಂತ್ರಜ್ಞಾನದಲ್ಲಿ ದಿನ ದಿನವೂ ಒಂದೊಂದೇ ಹೆಜ್ಜೆ ಮುಂದಿಡುತ್ತಲೂ ಇವೆ. ಟೆಲಿಕಾಂ ವಲಯಕ್ಕೆ ಎಲ್‌ಟಿಇ ಮತ್ತು ವಾಯ್ಸ ಓವರ್ ಎಲ್‌ಟಿಇ ಎಂಬ ಟೆಕ್ನಾಲಜಿಯನ್ನು ಅವಧಿಗೂ ಮೊದಲೇ ಪರಿಚಯಿಸಿದ ಮುಖೇಶ್ ಅಂಬಾನಿಯ ಜಿಯೋ ಈಗ, ಟಿವಿ ನೆಟ್‌ವರ್ಕ್‌ಗೂ ಕೈ ಹಾಕಿದೆ.
Related Articles
Advertisement
ಇದೀಗ ಜಿಯೋ ಕೂಡ ಈ ತಂತ್ರಜ್ಞಾನದ ಪ್ರಯೋಗ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಇಂಟರ್‌ನೆಟ್ ಇಲ್ಲದೇ ಟಿವಿ ವೀಕ್ಷಿಸಬಹುದು. ಇದಕ್ಕೆ ಜಿಯೋ ಹೋಮ್ ಟಿವಿ ಎಂದು ಹೆಸರಿಸಲಾಗುತ್ತದೆ ಎಂದು ಹೇಳಲಾಗಿದೆಯಾದರೂ, ಅಂತಿಮವಾಗಿ ಅದಕ್ಕೆ ಯಾವ ಹೆಸರು ಹಾಗೂ ರೂಪ ಕೊಡುತ್ತಾರೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಈ ಹಿಂದೆ ಬ್ರಾಡ್‌ಕಾಸ್ಟ್ ಎಂಬ ಆಂಡ್ರಾಯ್ಡ ಅಪ್ಲಿಕೇಶನ್ ಬಳಸಿ ಪರೀಕ್ಷೆ ನಡೆಸಲಾ ಗುತ್ತಿತ್ತು. ಆದರೆ ಈ ತಂತ್ರಜ್ಞಾನ ಟಿವಿ ವಲಯದಲ್ಲಿ ಕ್ರಾಂತಿಕಾರಕ ವಂತೂ ಹೌದು. ಇದೇ ಇಎಂಬಿಎಂಎಸ್ ತಂತ್ರಜ್ಞಾನ ಬಳಸಿ ಕೊಂಡು ಸೆಟ್ ಟಾಪ್ ಬಾಕ್ಸ್ ತಯಾರಿಸಿ ಟಿವಿಗೆ ಕನೆಕ್ಟ್ ಮಾಡಿದರೆ, ಅತ್ಯದ್ಭುತ ಕ್ಲಾರಿಟಿ ಚಾನೆಲ್‌ಗಳನ್ನು ನಾವು ಟಿವಿಯಲ್ಲಿ ನೋಡಬಹುದು. ಈ ಹಿಂದೆ ಜಿಯೋ ಡಿಟಿಎಚ್ ಕೂಡ ಮಾರು ಕಟ್ಟೆಗೆ ಬರಲಿದೆ ಎಂದು ಸುದ್ದಿಹಬ್ಬಿತ್ತಾದರೂ, ಅದರ ವಾಸ್ತವಾಂಶ ಇನ್ನೂ ಖಚಿತಪಟ್ಟಿಲ್ಲ. ಆದರೆ ಬ್ರಾಡ್‌ಬ್ಯಾಂಡ್ ಸೇವೆಯಂತೂ ಕೆಲವು ನಗರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಇತರ ನಗರಗಳಿಗೆ ಶೀಘ್ರದಲ್ಲೇ ಪರಿಚಯಿಸಲ್ಪಡಲೂಬಹುದು. ಈ ಇಎಂಬಿಎಂಎಸ್ ಇನ್ನೊಂದು ಅನುಕೂಲವೆಂದರೆ ಒಂದೇ ಟವರ್‌ನಡಿ ಸಾವಿರಾರು ಜನರು ಕೂತು ಒಂದೇ ಸಮನೆ ಎಚ್‌ಡಿ ಕಂಟೆಂಟ್ ನೋಡಿದರೂ ನೆಟ್‌ವರ್ಕ್ ಸ್ಲೋ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಬ್ರಾಡ್‌ಬ್ಯಾಂಡ್ ಜತೆಗೆ ಜಿಯೋ ಟಿವಿಯಂತೂ ಭಾರಿ ಸದ್ದು ಮಾಡುವುದರಲ್ಲಿ ಸಂಶಯವೇ ಇಲ್ಲ. ಹಾಗಾದರೆ ಈಗಿರುವ ಡಿಟಿಎಚ್ ಕಂಪನಿಗಳು ಮತ್ತು ಕೇಬಲ್ ಕಂಪನಿಗಳು ಕಣ್ಣು, ಕಿವಿ ಮುಚ್ಚಿಕೊಂಡು ಕೂತಿರಲಾರವು. ಇನ್ನು, ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಾರ ಕ್ಕೊಂದಾದರೂ ಹೊಸ ಸ್ಮಾರ್ಟ್‌ಫೋನ್, ಹೊಸ ಗ್ಯಾಜೆಟ್ ಬಿಡುಗಡೆಯಾಗುತ್ತದೆ. ಅಂಥ ಉತ್ಪನ್ನಗಳ ಮೇಲೆ ಒಮ್ಮೆ ಕಣ್ಣುಹಾಯಿಸಿ, ಹೇಗಿದೆ ಎಂದು ನಮ್ಮ ಓದುಗರಿಗೆ ತಿಳಿಸುವ ಪ್ರಯತ್ನ ಇಲ್ಲಿದೆ. ಮಧ್ಯಮ ಶ್ರೇಣಿಯ ನೋಕಿಯಾ 7 ಪ್ಲಸ್
ಹಿಂದೊಂದು ಕಾಲದಲ್ಲಿ ಮೊಬೈಲ್ ಮಾರುಕಟ್ಟೆಯನ್ನು ಆಳಿದ್ದ ನೋಕಿಯಾ ಬ್ರಾಂಡ್ ಅನ್ನು ಎಚ್‌ಎಂಡಿ ಗ್ಲೋಬಲ್ ಎಂಬ ಫಿನ್ಲಂಡ್ ಕಂಪನಿ ಖರೀದಿಸಿ, ಕಳೆದ ವರ್ಷ ಆರು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತ್ತು. ಈ ವರ್ಷ ಇನ್ನಷ್ಟು ಸರಣಿಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ 7 ಪ್ಲಸ್ ಕೂಡ ಒಂದು. ಸದ್ಯ 25,999 ರೂ. ಬೆಲೆಯ ಈ ಸ್ಮಾರ್ಟ್‌ಫೋನ್ ನೋಡುವುದಕ್ಕಂತೂ ಚೆನ್ನಾಗಿದೆ. ಇದು ಅಲ್ಯೂಮಿನಿಯಂನಿಂದ ಮಾಡಿದ್ದರೂ ಕೈಯಲ್ಲಿ ಹಿಡಿದರೆ ಲೋಹದ ಭಾವ ಉಂಟಾಗುವುದಿಲ್ಲ. ಪ್ಲಾಸ್ಟಿಕ್‌ನಿಂದ ಮಾಡಿದ ಫೋನ್ ಕೈಯಲ್ಲಿ ಹಿಡಿದಂತಿದೆ. ಹಿಂಭಾಗದಲ್ಲಿ ನೋಕಿಯಾ ಹಾಗೂ ಆಂಡ್ರಾಯ್ಡ ಒನ್ ಲೋಗೋ, ಮೇಲ್ಭಾಗದಲ್ಲಿ ಡ್ಯುಯೆಲ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ. ಬಲಭಾಗದಲ್ಲಿ ಪವರ್ ಹಾಗೂ ವಾಲ್ಯೂಮ್ ಬಟನ್‌ಗಳು ಹಾಗೂ ಎಡಬದಿಗೆ ಡ್ಯುಯೆಲ್ ಸಿಮ್ ಸ್ಲಾಟ್‌ಗಳಿವೆ. ಡಿಸ್‌ಪ್ಲೇ ವಿಷಯದಲ್ಲಿ 7 ಪ್ಲಸ್ ಅಷ್ಟೇನೂ ಗಮನಾರ್ಹವಾಗಿಲ್ಲ. 6 ಇಂಚು ಫುಲ್ ಎಚ್‌ಡಿ ಪ್ಲಸ್ ಐಪಿಎಸ್ ಎಲ್‌ಸಿಡಿ ಸ್ಕ್ರೀನ್ ಇದ್ದು, 1080/2160 ಪಿಕ್ಸೆಲ್ ರೆಸೊಲ್ಯುಶನ್ ಇದೆ. ಈ ಶ್ರೇಣಿಯ ಫೋನ್‌ಗಳಲ್ಲಿ ಇದು ಸಾಮಾನ್ಯವಾದರೂ, ಸಾಮಾನ್ಯ ಕೆಲಸಕ್ಕೆ ತೊಂದರೆ ಯಿಲ್ಲ. ಆದರೆ ನಿರೀಕ್ಷಿಸಿದಷ್ಟು ಕಲರ್‌ಫುಲ್ ಹಾಗೂ ಆಕರ್ಷಕ ಸ್ಕ್ರೀನ್ ಏನೂ ಅಲ್ಲ. ಹಾಗಂತ ಕಳಪೆಯೂ ಅಲ್ಲ. ಸ್ವಲ್ಪ ಹಳೆಯ ಆವೃತ್ತಿಯ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಇದರಲ್ಲಿದೆ. ಇನ್ನೊಂದು ಆಕರ್ಷಕ ಸಂಗತಿಯೆಂದರೆ ಸ್ಕ್ರೀನ್ ಮೇಲೆ ಎರಡು ಬಾರಿ ಟ್ಯಾಪ್ ಮಾಡಿದರೆ ಸ್ಕ್ರೀನ್ ಬೆಳಗುತ್ತದೆ. ಸ್ಕ್ರೀನ್ ಬೆಳಗಿಸಲು ಪವರ್ ಬಟನ್ ಒತ್ತುವ ಶ್ರಮ ಕಡಿಮೆಯಾಗುತ್ತದೆ. ಹೊಸ ಆವೃತ್ತಿಯ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 660 ಪ್ರೋಸೆಸರ್ ಇದೆ. ಹೀಗಾಗಿ ಭಾರಿ ಗೇಮ್‌ಗಳನ್ನು ಯಾವುದೇ ಕಿರಿಕಿರಿ ಇಲ್ಲದೇ ಆಡಬಹುದು. 4ಜಿಬಿ ಎಲ್‌ಪಿಡಿಡಿಆರ್4 ರ್ಯಾಮ್ ಕೂಡ ಇದ್ದು, ಪ್ರೋಸೆಸರ್‌ಗೆ ಪೂರಕವಾಗಿದೆ. ಇತರ ಕಂಪನಿಗಳ ಯೂಸರ್ ಇಂಟರ್‌ಫೇಸ್‌ನಲ್ಲಿದ್ದಂತೆ ಇದರಲ್ಲಿ ಯಾವ ಹೆಚ್ಚುವರಿ ಗಿಮಿಕ್‌ಗಳೂ ಇಲ್ಲ. ಸ್ಟಾಕ್ ಆಂಡ್ರಾಯ್ಡನ ಯುಐ ಹಾಗೆಯೇ ಇದೆ. 7 ಪ್ಲಸ್‌ನಲ್ಲಿ ಮೆಚ್ಚಿಕೊಳ್ಳುವ ಒಂದು ಪ್ರಮುಖ ಸಂಗತಿಯೆಂದರೆ ಕ್ಯಾಮೆರಾ. ಝೀಸ್ ಆಪ್ಟಿಕ್ಸ್‌ನೊಂದಿಗೆ 12 ಎಂಪಿ ಹಾಗೂ 13 ಎಂಪಿ ಹಿಂಬದಿ ಕ್ಯಾಮೆರಾ ಇವೆ. 1.7 ಅಪರ್ಚರ್ ಇದ್ದುದರಿಂದ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ತೆಗೆಯಬಹುದು. ಮುಂಬದಿ 16 ಎಂಪಿ ಕ್ಯಾಮೆರಾ ಸೆಲ್ಫಿ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಮುಂದಿನ ಮತ್ತು ಹಿಂದಿನ ಕ್ಯಾಮೆರಾಗಳೆರಡನ್ನೂ ಬಳಸಿ ಫೋಟೋ ತೆಗೆಯುವ ಬೋತಿ ಸೌಲಭ್ಯ ಕೂಡ ಇದೆ. 3800 ಎಂಎಎಚ್ ಬ್ಯಾಟರಿ ಈ ಶ್ರೇಣಿಯಲ್ಲೇ ಮೊದಲನೆ ಯದು. 30 ಸಾವಿರ ರೂ.ಕೆಳಗಿನ ಹ್ಯಾಂಡ್‌ಸೆಟ್‌ಗಳಲ್ಲಿ ಇಷ್ಟು ದೀರ್ಘಬಾಳಿಕೆ ಕ್ಯಾಮೆರಾ ಸಿಗುವುದು ದುಸ್ತರ. 12 ಗಂಟೆಗಳವರೆಗೆ ನಿರಂತರ ಬಳಕೆ ಮಾಡಿದರೂ ಬ್ಯಾಟರಿ ಬಾಳಿಕೆ ಬರುತ್ತದೆ. ಆದರೆ ಬ್ಯಾಟರಿ ಸೆಟ್ಟಿಂಗ್ಸ್ ಮಾಡಿಕೊಂಡರೆ ಸೀಮಿತ ಬಳಕೆಯಲ್ಲಿ 2 ದಿನಗಳವರೆಗೂ ಬ್ಯಾಟರಿ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸಾಮಾನ್ಯ ಬಳಕೆಗೆ ಈ ಸ್ಮಾರ್ಟ್‌ಫೋನ್ ಸೂಕ್ತ. 18:9 ಆಸ್ಪೆಕ್ಟ್ ರೇಶಿಯೋ ಆಕರ್ಷಕವಾಗಿದೆ, ಆಪರೇಟಿಂಗ್ ಸಿಸ್ಟಂ ನೀಟಾಗಿದೆ ಹಾಗೂ ಪ್ರೋಸೆಸರ್ ಜಬರ್‌ದಸ್ತಾಗಿದೆ. ಕ್ಯಾಮೆರಾ ಹಾಗೂ ಬ್ಯಾಟರಿ ಬಗ್ಗೆ ಮಾತಿಲ್ಲ. ಆದರೆ 20 ರಿಂದ 22 ಸಾವಿರದವರೆಗಿನ ದರವಿದ್ದರೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಸುತ್ತಿತ್ತು. – ಕೃಷ್ಣ ಭಟ್