ದಾವಣಗೆರೆ: ಖಾಸಗಿ ಶಾಲಾ-ಕಾಲೇಜುಗಳಲ್ಲಿ ಪಠ್ಯಪುಸ್ತಕ, ಲೇಖನ ಸಾಮಗ್ರಿ ಮಾರಾಟಕ್ಕೆ ಸಂಬಂಧಿತ ಇಲಾಖೆಯವರು ಕಡಿವಾಣ ಹಾಕಬೇಕು ಎಂದು ಪುಸ್ತಕ ಮತ್ತು ಸ್ಟೇಷನರಿ ಮಾರಾಟಗಾರರ ಸಂಘದ ಸಲಹೆಗಾರ ಎಸ್.ಟಿ. ವಿಜೇಂದ್ರ ಒತ್ತಾಯಿಸಿದ್ದಾರೆ.
ಖಾಸಗಿ ಶಾಲಾ-ಕಾಲೇಜುಗಳು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ಲೇಖನ ಸಾಮಗ್ರಿ ಮಾರಾಟ ಮಾಡಬಾರದು ಎಂದು ಶಿಕ್ಷಣ ಇಲಾಖೆ ಅಧಿ ನಿಯಮ ಹೊರಡಿಸಿದ್ದರೂ ಸಹ ದುಬಾರಿ ಬೆಲೆಗೆ ಪಠ್ಯಪುಸ್ತಕ ಮತ್ತು ಲೇಖನ ಸಾಮಗ್ರಿ ಮಾರಾಟ ಮಾಡಲಾಗುತ್ತಿದೆ ಎಂದು ಶುಕ್ರವಾರ
ಸುದ್ದಿಗೋಷ್ಠಿಯಲ್ಲಿ ದೂರಿದರು.
ಖಾಸಗಿ ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ಧಾರಣೆಗೆ ಪಠ್ಯಪುಸ್ತಕ, ಲೇಖನ ಸಾಮಗ್ರಿ ಮಾರಾಟ ಮಾಡುವುದರಿಂದ ವಿದ್ಯಾರ್ಥಿಗಳ ಪೋಷಕರಿಗೆ ಆರ್ಥಿಕ ಹೊರೆಯಾಗಲಿದೆ. ಅಲ್ಲದೆ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಸಲ್ಲಿಕೆ ಆಗಬೇಕಾದ ಕೋಟ್ಯಾಂತರ ರೂಪಾಯಿ ಆದಾಯ ಖೋತಾ ಆಗಲಿದೆ. ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಬೇಕಾದ ಶಿಕ್ಷಣ ಸಂಸ್ಥೆಗಳು ವ್ಯಾಪಾರ ಕೇಂದ್ರಗಳಾಗಿ ಮಾರ್ಪಡಲಿವೆ ಎಂದು ತಿಳಿಸಿದರು.
ಖಾಸಗಿ ಶಾಲಾ-ಕಾಲೇಜುಗಳ ಆರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡುವಾಗಲೇ ಪಠ್ಯಪುಸ್ತಕ ಮತ್ತು ಲೇಖನ ಸಾಮಗ್ರಿಗಳ ಮಾರಾಟ ಮಾಡಬಾರದು ಎಂಬುದಾಗಿ ಷರತ್ತು ವಿಧಿಸಿರುತ್ತದೆ. ಅಲ್ಲದೆ ಉಚ್ಚ ನ್ಯಾಯಾಲಯವೂ ಸಹ ಪಠ್ಯಪುಸ್ತಕ ಮಾರಾಟಕ್ಕೆ ನಿರ್ಬಂಧ ಹೇರಿದೆ. ಆದರೂ, ಸಹ ಖಾಸಗಿ ಶಿಕ್ಷಣ
ಸಂಸ್ಥೆಗಳು ಸ್ವತಃ ತಾವೇ ಪಠ್ಯ ಪುಸ್ತಕಗಳನ್ನು ಮುದ್ರಿಸಿ, ತಮಗೆ ಇಷ್ಟ ಬಂದ ಬೆಲೆಗೆ ಮಾರಾಟ ಮಾಡುತ್ತಿವೆ. ಖಾಸಗಿ ಶಾಲಾ- ಕಾಲೇಜುಗಳಲ್ಲೇ ಪಠ್ಯಪುಸ್ತಕ, ಲೇಖನ ಸಾಮಗ್ರಿಮಾರಾಟದ ಪರಿಣಾಮ ಪುಸ್ತಕ ಮತ್ತು ಸ್ಟೇಷನರಿ ವ್ಯಾಪಾರ ಮಾಡುವ ಸಣ್ಣಪುಟ್ಟ ವ್ಯಾಪಾರಿಗಳು ವ್ಯಾಪಾರ ಇಲ್ಲದೇ ಬೀದಿ ಪಾಲಾಗಲಿದ್ದಾರೆ ಎಂದು ತಿಳಿಸಿದರು.
ಖಾಸಗಿ ಶಾಲಾ-ಕಾಲೇಜುಗಳಲ್ಲಿ ಪಠ್ಯಪುಸ್ತಕ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ, ರಕ್ಷಣಾಧಿಕಾರಿ, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರು ಸೇರಿದಂತೆ ಪ್ರಮುಖ 11 ಇಲಾಖೆಗಳ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸಂಘದ ಬೇಡಿಕೆಗೆ ಸ್ಪಂದಿಸಿ ಅಧಿ ಕಾರಿಗಳು ಪುಸ್ತಕ ಮತ್ತು ಲೇಖನ ಸಾಮಾಗ್ರಿಗಳ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ನ್ಯಾಯಾಂಗ ಹೋರಾಟವನ್ನು ಸಹ ನಡೆಸಲು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಎಚ್.ಲಕ್ಷ್ಮಣ, ಕಾರ್ಯದರ್ಶಿ ಕೆ.ಎಂ. ರೇವಣಸಿದ್ದಯ್ಯ, ಖಜಾಂಚಿ ಎಂ.ಆರ್. ಮಹೇಂದ್ರ ಕುಮಾರ್, ಉಪಾಧ್ಯಕ್ಷ ರುದ್ರೇಶ್, ಸಹ ಕಾರ್ಯದರ್ಶಿ
ಗಿರೀಶ್ ಗುತ್ತಲ್, ಪ್ರವೀಣ್ ಮಾಗಾನಹಳ್ಳಿ, ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.