Advertisement

“ಭಾರತೀಯ ಭಾಷೆಗಳ ಸಿನೆಮಾ ಬೆಳೆ ಬಗ್ಗೆ ಅಪನಂಬಿಕೆ ಬೇಕಿಲ್ಲ”: ಟಿ.ಎಸ್‌.ನಾಗಾಭರಣ

10:13 AM Nov 23, 2023 | Team Udayavani |

ಪಣಜಿ: ಭಾರತೀಯ ಭಾಷೆಗಳ ಸಿನೆಮಾಗಳ ಬೆಳೆ ಬಗ್ಗೆ ಅಪನಂಬಿಕೆ ಬೇಕಿಲ್ಲ ಎಂದು ಭಾರತೀಯ ಪನೋರಮಾ ಕಥಾ ವಿಭಾಗದ ತೀರ್ಪುಗಾರರ ಸಮಿತಿ ಅಧ್ಯಕ್ಷ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಅಭಿಪ್ರಾಯಪಟ್ಟಿದ್ದಾರೆ.

Advertisement

ಇಫಿ ಚಿತ್ರೋತ್ಸವದಲ್ಲಿ “ಉದಯವಾಣಿ”ಯೊಂದಿಗೆ ಮಾತನಾಡಿದ ಅವರು, ಭಾರತೀಯ ಭಾಷೆಗಳಲ್ಲಿ ಬಹಳಷ್ಟು ವಿಭಿನ್ನವಾದ ಸಿನೆಮಾಗಳು ಬರುತ್ತಿವೆ. ಈ ಬಾರಿಯ ಸಿನೆಮಾಗಳಲ್ಲೂ ಅಂಥ ವೈವಿಧ್ಯತೆ ಇದೆ. ವಿವಿಧ ಹಂತಗಳಲ್ಲಿ ಕೆಲವು ಸಿನೆಮಾಗಳಿಗೆ ಅವಕಾಶ ಕಲ್ಪಿಸಲು ಆಗಿಲ್ಲವಷ್ಟೇ. ಅದೇ ಸಂದರ್ಭದಲ್ಲಿ ಕೊರತೆ ಇರುವ ಸಿನೆಮಾಗಳ ಸಂಖ್ಯೆಯೂ ಕಡಿಮೆಯೇನಿಲ್ಲ ಎಂದು ಅಭಿಪ್ರಾಯಪಟ್ಟರು.

ತಂತ್ರಜ್ಞಾನವಿದೆ, ಮೊಬೈಲ್‌ ಇದೆ ಎಂದ ಕೂಡಲೇ ಸಿನೆಮಾ ಸಾಧ್ಯವಾಗದು. ಒಂದು ಒಳ್ಳೆಯ ಸಿನೆಮಾ ರೂಪಿಸುವುದೆಂದರೆ ಅದು ತಪಸ್ಸೇ. ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ಒಂದೆರಡು ಘಟನೆಯನ್ನು ಆಧಾರವಾಗಿಟ್ಟುಕೊಂಡು ಸಿನೆಮಾ ಹೇಳಲಿಕ್ಕಾಗದು. ಆದರೆ ಅಂಥ ಪ್ರಯತ್ನಗಳೂ ಸಾಕಷ್ಟು ನಡೆಯುತ್ತಿವೆ. ಈ ಬಾರಿಯ ಆಯ್ಕೆಗೆ ಸಲ್ಲಿಸಿದವುಗಳಲ್ಲಿಯೂ ಬಹಳಷ್ಟು ಅಂಥ ಸಿನೆಮಾಗಳು ಇದ್ದವು ಎಂದು ವಿವರಿಸಿದರು.

ಭಾರತೀಯ ಪನೋರಮಾ: “ಭಾರತೀಯ ಪನೋ­ರಮಾ ಎಂದರೆ ಭಾರತೀಯ ಭಾಷೆಗಳ ಸಿನೆಮಾಗಳ ಉತ್ಸವ. ಹಾಗೆಯೇ ಅದನ್ನು ಬಿಂಬಿಸಬೇಕು. ಭಾರತದ ಸಂಸ್ಕೃತಿಯೇ ವೈವಿಧ್ಯಮಯವಾದುದು. ಹಾಗಾಗಿ ಅವುಗಳನ್ನು ಪ್ರತಿನಿಧಿಸುವ ಸಿನೆಮಾಗಳಿಂದ ಕೂಡಿದ ಉತ್ಸವವನ್ನು ಭಾರತೀಯ ಭಾಷೆಗಳ ಪನೋರಮಾ ಉತ್ಸವ ಎನ್ನಬೇಕು’ ಎಂದು ನಾಗಾಭರಣ ಅಭಿಪ್ರಾಯಪಟ್ಟರು.

ನಮ್ಮಲ್ಲಿ ಹಲವು ಭಾಷೆಗಳಿದ್ದು, ಅದರಲ್ಲಿ ಮಾಡಿದ ಸಿನೆಮಾಗಳಿವೆ. ಹಾಗೆಯೇ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರದ ಭಾಷೆಗಳಲ್ಲೂ ಸಿನೆಮಾಗಳು ಆಗುತ್ತಿವೆ. ಅದು ಖುಷಿಯ ಸಂಗತಿ. ನಮ್ಮ ಪನೋರಮಾದಲ್ಲಿ ಎರಡಕ್ಕೂ ಅವಕಾಶ ಕಲ್ಪಿಸಿದ್ದೇವೆ. ಉದಾಹರಣೆಗೆ ಈ ಬಾರಿ ಕರ್ಬಿಯಂಥ ಭಾಷೆಯ ಸಿನೆಮಾವೂ ಪನೋರಮಾ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಹಾಗಾಗಿ ಈ ಬಾರಿಯ ಪನೋರಮಾ ವಿಶಿಷ್ಟವಾದುದು ಎಂದು ಭಾರತೀಯ ಭಾಷೆಗಳ ಸಿನೆಮಾಗಳ ಬೆಳೆ ಕುರಿತೂ ವಿವರಿಸಿದರು.

Advertisement

ಪನೋರಮಾ ಆಯ್ಕೆಯ ಬಗ್ಗೆಯೂ ವಿವರಿಸಿ, ನಾವು ಯಾವುದೇ ಸಿನೆಮಾಗಳನ್ನೂ ಮತಗಳ ಆಧಾರದಲ್ಲಿ ಆಯ್ಕೆ ಮಾಡಿಲ್ಲ. ಬದಲಾಗಿ ಎಲ್ಲವನ್ನೂ ಅವಿರೋಧದ ನೆಲೆಯಲ್ಲೇ ಆಯ್ಕೆ ಮಾಡಿದ್ದೇವೆ. ತಂತ್ರಜ್ಞಾನ, ಕಥನಕ್ರಮ, ಪ್ರಯೋಗಶೀಲತೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಒಳ್ಳೆಯ ಸಿನೆಮಾಗಳಿಗೆ ಆದ್ಯತೆ ನೀಡಿದ್ದೇವೆ. ಇಂತಿಂತಹ ಭಾಷೆಗಳ ಸಿನೆಮಾಗಳು ಎನ್ನುವುದಕ್ಕಿಂತ ಸಿನೆಮಾದ ಭಾಷೆ ಪಕ್ವವಾಗಿರುವ ಸಿನೆಮಾಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಭಾರತೀಯ ಭಾಷೆಗಳೆನ್ನುವುದೇ ಸೂಕ್ತ
ದೇಶದ ಇತರ ಭಾಷೆಗಳನ್ನು ನಾವು ಭಾರತೀಯ ಭಾಷೆಗಳೆಂದೇ ಪರಿಗಣಿಸ­ ಬೇಕು. ಯಾಕೆಂದರೆ ಅವೆಲ್ಲವೂ ಭಾರತದ ಭಾಷೆಗಳು. ಅವುಗಳನ್ನು ಪ್ರಾದೇಶಿಕ ಭಾಷೆಗಳೆಂದು ಕರೆಯಬಾರದು ಎನ್ನುವುದು ನಾಗಾಭರಣ ಅವರ ಖಚಿತ ಅಭಿಪ್ರಾಯ. ರಾಷ್ಟ್ರೀಯ ಪ್ರಶಸ್ತಿಯಿಂದ ಹಿಡಿದು ಎಲ್ಲ ಕಡೆಯೂ ಹಿಂದಿ ಹೊರತುಪಡಿಸಿದ ಬೇರೆ ಭಾಷೆಗಳನ್ನು ಪ್ರಾದೇಶಿಕ ಭಾಷೆಗಳೆಂದು ಕರೆಯಲಾಗುತ್ತದೆ. ಅದೆಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದು ಸೂಕ್ತವಾದುದಲ್ಲ. ಅವೆಲ್ಲವನ್ನೂ ಭಾರತೀಯ ಭಾಷೆಗಳೆಂದೇ ಕರೆಯಬೇಕು. ಹಾಗೆಯೇ ದಾಖಲಿಸಬೇಕು ಸಹ ಎಂದು ಹೇಳಿದರು.

*ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next