Advertisement
ಜಮ್ಮು – ಕಾಶ್ಮೀರದ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಉಗ್ರರಿಗೆ ಆಶ್ರಯ ನೀಡಿ ಬಂಧಿಲ್ಪಟ್ಟ ಪ್ರಕರಣಕ್ಕೂ ಇದೀಗ ಕಾಂಗ್ರೆಸ್ ಜಾತಿ, ಧರ್ಮದ ಬಣ್ಣ ಬಳಿಯುವ ಮೂಲಕ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ. ಭಯೋತ್ಪಾದನೆ, ಉಗ್ರರ ದಾಳಿ ವಿಚಾರದಲ್ಲಿ ರಾಜಕೀಯ ಪಕ್ಷಗಳು ಇಂತಹ ವರಸೆಯನ್ನು ಮುಂದುವರಿಸಿಕೊಂಡು ಬಂದಿವೆ. ಅದು ಇತ್ತೀಚೆಗೆ ನಡೆದ ಪುಲ್ವಾಮಾ ದಾಳಿಯಾಗಲಿ, ಉರಿ, ಪಠಾಣ್‌ಕೋಟ್ ಸೆಕ್ಟರ್ ಮೇಲೆ ದಾಳಿ ವಿಚಾರದಲ್ಲಿ ಪರ, ವಿರೋಧ ವ್ಯಕ್ತವಾಗಿದ್ದವು. ಆದರೆ ದೇಶದ ಭದ್ರತೆ, ಗುಪ್ತಚರ ಇಲಾಖೆ, ಸೇನೆ ವಿಚಾರದಲ್ಲಿ ರಾಜಕೀಯ ಪಕ್ಷಗಳು ಜವಾಬ್ದಾರಿಯುತ ವಾಗಿ ನಡೆದುಕೊಳ್ಳಬೇಕಾದ ಅಗತ್ಯವಿದೆ.
Related Articles
ದೇಶದ ಮುಕುಟ ಮಣಿಯಂತಿರುವ ಜಮ್ಮು-ಕಾಶ್ಮೀರ ಸತತವಾಗಿ ಭಯೋತ್ಪಾದನೆಯ ಅಟ್ಟಹಾಸಕ್ಕೆ ನಲುಗಿ ಹೋಗಿದೆ. ಹಿಜ್ಬುಲ್ ಮುಜಾಹಿದೀನ್, ಜೈಶ್ – ಎ – ಮೊಹಮ್ಮದ್ ಹಾಗೂ ಲಷ್ಕರ್ – ಎ – ತೊಯ್ಬಾದಂತಹ ಉಗ್ರಗಾಮಿ ಸಂಘಟನೆಗಳು 2018ರಲ್ಲಿ ನಡೆಸಿದ 321 ದಾಳಿಗೆ 123 ಜನರು ಬಲಿಯಾಗಿದ್ದಾರೆ. 2014ರಲ್ಲಿ ಭಯೋತ್ಪಾದಕ ದಾಳಿ ಮಿತಿ ಮೀರಿತ್ತು. 2019ರ ಜಾಗತಿಕ ಭಯೋತ್ಪಾದಕ ಸೂಚಿ ಪ್ರಕಾರ ವಿಶ್ವಾದ್ಯಂತ ನಡೆದ ಉಗ್ರರ ದಾಳಿಗೆ 33,555 ಮಂದಿ ಸಾವನ್ನಪ್ಪಿದ್ದರು.
Advertisement
ಇಂತಹ ವಿಧ್ವಂಸಕ, ಉಗ್ರರ ಕೃತ್ಯಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ದೇಶದ ಗುಪ್ತಚರ ಇಲಾಖೆ ಮಾಹಿತಿ ಕಲೆ ಹಾಕಿ ಶಂಕಿತರನ್ನು ಬಂಧಿಸುವ ಕಾರ್ಯಾಚರಣೆಗೆ ಮುಂದಾಗಿ ರುವುದರಿಂದಲೇ ಸಾಕಷ್ಟು ದಾಳಿ, ಸಾವು-ನೋವು ತಪ್ಪಿದೆ. ಅದರ ಪರಿಣಾಮ ಎಂಬಂತೆ 2019ರಲ್ಲಿ ಉಗ್ರರ ದಾಳಿ ಪ್ರಕರಣ ಇಳಿಕೆ ಕಂಡಿದ್ದಲ್ಲದೇ ಸಾವಿನ ಪ್ರಮಾಣ 15,952ಕ್ಕೆ ಕುಸಿತವಾಗಿದೆ. ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ಅಟ್ಟಹಾಸದ ಪರಿಣಾಮ 2018ರಲ್ಲಿ 123 ಅಮಾಯಕರು ಸಾವನ್ನಪ್ಪಿದ್ದಾರೆ. ಒಂದೆಡೆ ಉಗ್ರರ ದಾಳಿ, ಮತ್ತೂಂದೆಡೆ ನಕ್ಸಲೀಯರ ದಾಳಿಯನ್ನು ತಡೆಗಟ್ಟಬೇಕಾಗಿರುವುದು ತೀರಾ ಅಗತ್ಯ. ಇದರ ಜತೆಗೆ ಉಗ್ರಗಾಮಿ ಸಂಘಟನೆ, ಮಾವೋ ವಾದಿ ಸಂಘಟನೆಯತ್ತ ಯುವ ಸಮೂಹ ಆಕರ್ಷಿತರಾಗ ದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ಇದೆ.
ಮಾವೋವಾದಿ, ಉಗ್ರಗಾಮಿ ಸಂಘಟನೆಯಂತಹ ವಿಧ್ವಂಸಕ ಕೃತ್ಯಗಳಲ್ಲಿ ತೊಡಗುವವರನ್ನು ಬಹಿರಂಗವಾಗಿ, ಪರೋಕ್ಷವಾಗಿ ಸಮರ್ಥಿಸಿಕೊಳ್ಳುತ್ತಿರುವುದು ದುರಂತವಾ ಗಿದೆ. ಇಂತಹ ಸಮಾಜಘಾತುಕ, ದೇಶದ್ರೋಹಿ ಕೃತ್ಯದಲ್ಲಿ ತೊಡಗಿದ್ದವರ ಬಂಧನದ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ನಡೆಸುವ ಮುನ್ನ ಉಗ್ರರನ್ನು ಹೆಡೆಮುರಿ ಕಟ್ಟುವಲ್ಲಿ ಶ್ರಮಿಸುತ್ತಿರುವ ಪೊಲೀಸ್ ಮತ್ತು ಗುಪ್ತಚರ ಇಲಾಖೆಗೆ ನೈತಿಕ ಸ್ಥೈರ್ಯ ತುಂಬಲು ಮುಂದಾಗಬೇಕಾಗಿದೆ ಎಂಬುದನ್ನು ಮನಗಾಣಲಿ.