Advertisement

ಅಭಿವೃದ್ಧಿ ನಿರ್ಲಕ್ಷಿಸುವ ಅಧಿಕಾರಿಗಳು ಬೇಕಿಲ್ಲ

04:29 PM Nov 08, 2019 | Suhan S |

ನಾಗಮಂಗಲ: ಸಭೆಗೆ ಸಮರ್ಪಕ ಮಾಹಿತಿ ನೀಡದ, ಆಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡದ ಅಧಿಕಾರಿಗಳು ನಮ್ಮ ಕ್ಷೇತ್ರಕ್ಕೆ ಬೇಕಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಎನ್‌.ಅಪ್ಪಾಜಿಗೌಡ ತರಾಟೆಗೆ ತೆಗೆದುಕೊಂಡರು.

Advertisement

ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ಮನೋಭಾವ ಹೊಂದಿರುವ ಅಧಿಕಾರಿಗಳು ಹಾಗೂ ಇಲಾಖೆಯ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸದ ಅಧಿಕಾರಿಗಳ ಅವಶ್ಯಕತೆ ನನ್ನ ಕ್ಷೇತ್ರಕ್ಕೆ ಇಲ್ಲ. ಅಂತವರು ಬದಲಾಗದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ವಿಧಾನಪರಿಷತ್‌ ಸದಸ್ಯ ಎನ್‌.ಅಪ್ಪಾಜಿಗೌಡ ಖಡಕ್‌ ವಾರ್ನಿಂಗ್‌ ನೀಡಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಶಾಸಕ ಸುರೇಶ್‌ಗೌಡರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಮಾಹಿತಿ ಇಲ್ಲದೆ ಏಕೆ ಬರುವಿರಿ?: ಸಭೆಯಲ್ಲಿ ಪಶುಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಶರತ್‌, ಇಲಾಖೆ ಕುರಿತು ಮಾಹಿತಿ ನೀಡುವ ಸಂದರ್ಭ ಮಧ್ಯ ಪ್ರವೇಶಿಸಿ ಮಾತನಾಡಿದ ಅಪ್ಪಾಜಿಗೌಡ, ಪಶುಸಂಗೋಪನಾ ಇಲಾಖೆಯಲ್ಲಿ ಸರ್ಕಾರದ ಯಾವೊಂದು ಸೌಲಭ್ಯಗಳೂ ಸಾರ್ವಜನಿಕರಿಗೆ ತಲುಪುತ್ತಿಲ್ಲ. ತಾಲೂಕಿನ ಜನತೆ ಬದುಕುತ್ತಿರುವುದು ಪಶುಸಂಗೋಪನೆ ನಂಬಿಕೊಂಡು ಎಂಬ ಅರಿವಿದೆಯಾ, ರಾಸುಗಳ ವಿಮೆ ಯೋಜನೆ ಕುರಿತಾಗಿ ಯಾವೊಂದು ಮಾಹಿತಿಯನ್ನೂ ನೀವು ನೀಡುತ್ತಿಲ್ಲ. ಅಂಕಿ-ಅಂಶಗಳ ಸಮೇತ ಮಾಹಿತಿ ಇಲ್ಲದಿದ್ದರೆ ಸಭೆಗೆ ಯಾಕ್‌ ಬರುತ್ತೀರಾ, ಬಸವೇಶ್ವರ ನಗರದಲ್ಲಿ ಪಶುವೈದ್ಯಕೀಯ ಕಾಲೇಜನ್ನು ಹಿಂದಿನ ಸಿಎಂ ಕುಮಾರಸ್ವಾಮಿಯವರಿದ್ದಾಗ ತಾಂತ್ರಿಕವಾಗಿ ಅನುಮೋದನೆ ಯಾಗಿತ್ತು. ಅದು ಯಾವ ಹಂತದಲ್ಲಿದೆ. ಆ ಜಾಗದ ವ್ಯಾಪ್ತಿ ಎಷ್ಟಿದೆ ಎಂದು ಪ್ರಶ್ನೆಗಳ ಸುರಿಮಳೆಗೈದರು. ಆದರೆ ಈ ಯಾವುದೇ ಪ್ರಶ್ನೆಗಳಿಗೂ ಸೂಕ್ತ ಉತ್ತರ ನೀಡಲು ತಡಬಡಾಯಿಸಿದ ಅಧಿಕಾರಿ ವಿರುದ್ಧ ಆಕ್ರೋಶಗೊಂಡರು.

ನಕಲಿ ವೈದ್ಯರ ಹಾವಳಿ: ತಾಲೂಕಿನಲ್ಲಿ ಪಶುಸಂಗೋಪನೆ ಇಲಾಖೆ ಸಮಸ್ಯೆಗಳಿಂದ ಕೂಡಿದೆ. ಈ ಇಲಾಖೆಯಲ್ಲಿ ನಕಲಿವೈದ್ಯರೇ ಹೆಚ್ಚಾಗಿ, ಡಿ-ದರ್ಜೆ ನೌಕರನೂ ವೈದ್ಯರಾಗಿದ್ದಾರೆ. ಹೀಗಾಗಿ ತಾಲೂಕಿನಲ್ಲಿ ಅನೇಕ ರಾಸುಗಳು ಸಾವನ್ನಪ್ಪಿವೆ. ಆದರೂ ಅಂತವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೇವಲ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದು ಬಿಟ್ಟು ರೈತರ ಬಳಿ ಹೋಗಿ ಸಮಸ್ಯೆಗಳಿಗೆ ಸ್ಪಂದಿಸಿ. ರಾಸುಗಳ ಮರಣದ ಬಳಿಕ ಪರಿಹಾರ ನೀಡುವುದು ಮುಖ್ಯವಲ್ಲ, ಅನಾಹುತಗಳು ಸಂಭವಿಸದಂತೆ ಎಚ್ಚರವಹಿಸಿ. ನಕಲಿ ವೈದ್ಯರ ವಿರುದ್ಧ ಶೀಘ್ರ ಕ್ರಮಕ್ಕೆ ಸೂಚಿಸಿದರು.

ಡಿ-ದರ್ಜೆ ನೌಕರರ ನೇಮಕದಲ್ಲಿ ಭ್ರಷ್ಟಾಚಾರ: ಪಶುಸಂಗೋಪನೆ ಇಲಾಖೆಯಲ್ಲಿ ಡಿ-ದರ್ಜೆ ಸಿಬ್ಬಂದಿ ನೇಮಕಕ್ಕೆ ಯಾವುದೇ ಮಾನದಂಡ ಅನುಸರಿಸದೆ ಲಂಚ ಕೊಟ್ಟವರನ್ನು ನೇಮಿಸಿಕೊಳ್ಳುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಲಂಚ ಪಡೆದು ಸಿಬ್ಬಂದಿ ನೇಮಿಸಿಕೊಳ್ಳುವ ಮೂಲಕ ಪ್ರಾಣಿಗಳ ಜೀವ ಮತ್ತು ರೈತರ ಜೀವನದ ಜೊತೆ ಚೆಲ್ಲಾಟವಾಡದಿರಿ ಎಂದು ಎಚ್ಚರಿಕೆ ಕೊಟ್ಟರು. ಕೃಷಿ ಯೋಜನೆಯಡಿ ಎಷ್ಟು ಅರ್ಜಿ ಬಂದಿವೆ, ಈ ಯೋಜನಾ ಆಯ್ಕೆ ಸಮಿತಿ ಸದಸ್ಯರು ಯಾರು ಎಂದು ಜಯರಾಮಯ್ಯರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಯರಾಮಯ್ಯ ಯೋಜನೆಗೆ ಅರ್ಹ ಫ‌ಲಾನುಭವಿಗಳನ್ನು ಜನಪ್ರತಿನಿಧಿಗಳ ಶಿಫಾರಸು ಪತ್ರ ಹಾಗೂ ಅರ್ಜಿಗಳ ಸೀನಿಯಾರಿಟಿ ಮಾನದಂಡವಾಗಿಟ್ಟು ಆಯ್ಕೆ ಮಾಡಲಾಗುವುದು. ಇದಕ್ಕೆ ಯಾವುದೇ ಆಯ್ಕೆ ಸಮಿತಿ ಇಲ್ಲ ಎಂದರು. ಸಭೆಯಲ್ಲಿ ಜಿಪಂ ಸದಸ್ಯರಾದ ಶಿವಪ್ರಕಾಶ್‌, ಮುತ್ತಣ್ಣ, ತಾಪಂ ಅಧ್ಯಕ್ಷ ದಾಸೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್‌ಕುಮಾರ್‌, ತಹಶೀಲ್ದಾರ್‌ ರೂಪಾ, ಇಒ ಅನಂತರಾಜು, ಅಧಿಕಾರಿಗಳಾದ ಶಾಂತ, ಬಿಇಒ ಜಗದೀಶ್‌, ಜಯಪ್ರಕಾಶ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next