Advertisement

ಪಕ್ಷದಲ್ಲಿ ಗುಂಪುಗಾರಿಕೆ, ಲಾಬಿ ಮಾಡುವ ಅಗತ್ಯ ನನಗಿಲ್ಲ: ಡಿಕೆಶಿ

09:56 AM Dec 13, 2019 | Sriram |

ಬೆಂಗಳೂರು: ಪಕ್ಷದಲ್ಲಿ ಗುಂಪುಗಾರಿಕೆ ಮಾಡಿ, ಸ್ಥಾನಕ್ಕಾಗಿ ಲಾಬಿ ಮಾಡುವ ಯಾವ ಅಗತ್ಯವೂ ನನಗಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಲಾಬಿ ಮಾಡುತ್ತಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

Advertisement

ಪಕ್ಷದಲ್ಲಿ ನಾನು ಗುಂಪುಗಾರಿಕೆ ಮಾಡುವವನಲ್ಲ. ಜಾತಿ, ಧರ್ಮದ ಮೇಲೆ ಗುಂಪು ಕಟ್ಟಿಲ್ಲ. ಅದರ ಅಗತ್ಯ ಇದ್ದಿದ್ದರೆ ನಾನು ಎಸ್‌.ಎಂ. ಕೃಷ್ಣ ಅವರ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ಗುಂಪು ಕಟ್ಟಿ ರಾಜಕೀಯ ಮಾಡಬಹುದಿತ್ತು. ಆದರೆ ಆ ಕೆಲಸ ನಾನು ಮಾಡಿದವನಲ್ಲ. ನನ್ನನ್ನು ನನ್ನ ಕ್ಷೇತ್ರದ ಜನತೆ ಮತ್ತು ಪಕ್ಷ ಬೆಳೆಸಿದೆ. ಜನರು ಕೊಟ್ಟಿರುವ ಸ್ಥಾನಮಾನವೇ ನನಗೆ ಸಾಕು. ಈ ಸಂದರ್ಭದಲ್ಲಿ ನಾನು ಯಾವುದೇ ಲಾಬಿ ಮಾಡಿಲ್ಲ ಎಂದು ಹೇಳಿದರು.

ಚುನಾವಣ ಫ‌ಲಿತಾಂಶದಿಂದ ಬೇಸರವಾಗಿ ದಿನೇಶ್‌ ಗುಂಡೂರಾವ್‌, ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಹೈಕಮಾಂಡ್‌ ಅವರ ರಾಜೀನಾಮೆ ಅಂಗೀಕರಿಸಿಲ್ಲ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನವಾಗಲಿ, ಶಾಸಕಾಂಗ ಪಕ್ಷದ ನಾಯಕತ್ವದ ಸ್ಥಾನವಾಗಲಿ ಖಾಲಿ ಇಲ್ಲ ಎಂದರು.

ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಗೆಲುವು-ಸೋಲುಗಳು ಸರ್ವೇ ಸಾಮಾನ್ಯ. ಇಂಥ ಸೋಲುಗಳಿಂದ ಧೃತಿಗೆಡಬಾರದು. ಇಂಥ ಫ‌ಲಿತಾಂಶಗಳನ್ನು ನೋಡಿದ್ದೇವೆ. ಮಂಡ್ಯ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಪುತ್ರ ನಾಮಪತ್ರ ಸಲ್ಲಿಕೆ ವೇಳೆ ಹೋಗಿದ್ದೆ. ನಾನು ಅದುವರೆಗೂ ನಾಮಪತ್ರಕ್ಕೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ದನ್ನು ನೋಡಿರಲಿಲ್ಲ. ಆದರೆ ಅವು ಮತಗಳಾಗಿ ಬದಲಾಗಿರಲಿಲ್ಲ. ಹಾಗೆಯೇ ಈ ಉಪ ಚುನಾವಣೆಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಪ್ರಚಾರದ ವೇಳೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರಾದರೂ ಅವು ಮತಗಳಾಗಿ ಪರಿವರ್ತನೆಯಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕರ್ತರು ವಿಶ್ವಾಸ ಕಳೆದುಕೊಳ್ಳಬಾರದು. ಪಕ್ಷದಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಯಾರ ಬಗ್ಗೆಯೂ ಹಗೆ ಮತ್ತು ದ್ವೇಷ ಸಾಧಿಸಬಾರದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿರುವುದನ್ನು ವಿರೋಧಿಸಿ, “ಭಾರತ್‌ ಬಚಾವ್‌’ ಆಂದೋಲನದಲ್ಲಿ ಪಾಲ್ಗೊಳ್ಳಲು ಎಲ್ಲ ಶಾಸಕರು, ನಾಯಕರಿಗೆ ಸಂದೇಶ ಕಳುಹಿಸಿದ್ದಾರೆ. ಹೀಗಾಗಿ ನಾನು ದಿಲ್ಲಿಗೆ ತೆರಳುತ್ತಿದ್ದೇನೆ. ಕೇಂದ್ರ ಸರಕಾರ ಜಾರಿಗೆ ತರಲಿರುವ ಪೌರತ್ವ ತಿದ್ದುಪಡಿ ಕಾನೂನು ದೇಶಕ್ಕೆ ಮಾರಕ. ಎಲ್ಲ ಪಕ್ಷ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿರುವುದು ಕೇಂದ್ರ ಸರಕಾರದ ಕರ್ತವ್ಯ. ಆದರೆ ಅದನ್ನು ಕೇಂದ್ರ ಸರಕಾರ ಮಾಡುತ್ತಿಲ್ಲ. ಹೀಗಾಗಿ ದೇಶದೆಲ್ಲೆಡೆ ಪ್ರತಿಭಟನೆಗಳು ಆರಂಭವಾಗಿದ್ದು, ಕೇಂದ್ರ ಸರಕಾರದ ಧೋರಣೆಯನ್ನು ವಿರೋಧಿಸಿ ಪಕ್ಷ ಪ್ರತಿಭಟನೆಗೆ ಮುಂದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next