ನಂಜನಗೂಡು: ರಾಜ್ಯದಲ್ಲಿ ದಲಿತ ನಾಯಕತ್ವವನ್ನು ಹೊಸಕಿ ಹಾಕಿದ ಸಿದ್ದರಾಮಯ್ಯನವರಿಗೆ ಪಾಠ ಕಲಿಸಲು ಸ್ವಾಭಿಮಾನಿ ದಲಿತರು ಕಾದಿದ್ದಾರೆ. ದಲಿತ ವಿರೋಧಿಯಾದ ಅವರ ಪಾಲಿಗೆ ಇತ್ತ ಚಾಮುಂಡೇಶ್ವರಿ ಕ್ಷೇತ್ರದ ನಾಟಿ ಕೋಳಿಯೂ ಇಲ್ಲ, ಅತ್ತ ಬಾದಾಮಿಯೂ ಸಿಗಲ್ಲ ಎಂದು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ ಗುಡುಗಿದರು.
ಕಳೆದ ಉಪ ಚುನಾವಣೆಯಲ್ಲಿ ಇಲ್ಲಿಂದಲೇ ಸ್ಪರ್ಧಿಸಿ ಸೋಲು ಕಂಡಿದ್ದ ವಿ.ಶ್ರೀನಿವಾಸ್ ಪ್ರಸಾದ ಗುರುವಾರ ನಂಜನಗೂಡು ಕ್ಷೇತ್ರದ ಶಂಕರಪುರ ಶ್ರೀರಾಂಪುರದಲ್ಲಿ ಬಿಜೆಪಿ ಅಭ್ಯರ್ಥಿಯಾದ ತಮ್ಮ ಅಳಿಯ ಹರ್ಷವರ್ಧನ ಪರ ಮತಯಾಚಿಸಿ ಮಾತನಾಡಿದರು.
ಪರಮೇಶ್ವರ ಎಲ್ಲಿ?: ಯಾವುದೇ ಚುನಾವಣೆಯಲ್ಲಿ ಪ್ರಚಾರದ ಮುಂಚೂಣಿಯಲ್ಲಿ ಇರಬೇಕಾದವರು ಪಕ್ಷದ ರಾಜಾಧ್ಯಕ್ಷರು. ಆದರೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ ಈಗ ಎಲ್ಲಿದ್ದಾರೆಂದು ಪ್ರಶ್ನಿಸಿದರು. ದಲಿತರಾದ ಪರಮೇಶ್ವರ್ ಮುಂದೆ ಬರಲು ಇದೇ ಸಿದ್ದರಾಮಯ್ಯ ಬಿಡುತ್ತಿಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ರಾಜ್ಯದ ದಲಿತ ನಾಯಕರನ್ನು ಒಬ್ಬೊಬ್ಬರನ್ನಾಗಿ ತುಳಿಯುತ್ತಲೇ ಇದ್ದಾರೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ ಸೇರಿದಂತೆ ತಾವೆಲ್ಲ ಸಾಕ್ಷಿ ಎಂದರು. ದಲಿತ ನಾಯಕತ್ವವನ್ನು ನಾಶ ಮಾಡಲು ಹೊರಟ ಸಿದ್ದರಾಮಯ್ಯನವರನ್ನು ಸ್ವಾಭಿಮಾನಿ ದಲಿತರು ಯಾರೂ ಬೆಂಬಲಿಸಲು ಸಾಧ್ಯವೇ ಇಲ್ಲ ಎಂದು ಹರಿಹಾಯ್ದರು.
ವ್ಯಕ್ತಿತ್ವ ನೋಡಿ ಬೆಂಬಲಿಸಿ: ಹರ್ಷವರ್ಧನ ಅವರನ್ನು ತಮ್ಮ ಅಳಿಯ ಎಂದು ಬೆಂಬಲಿಸದೇ ಆತನ ವ್ಯಕ್ತಿತ್ವ ನೋಡಿ ಬೆಂಬಲಿಸಿ ಎಂದು ಪ್ರಸಾದ್ ಕೋರಿದರು. ತಾವು ಅಳಿಯನಿಗೆ ಟಿಕೆಟ್ ನೀಡಲು ಶಿಫಾರಸ್ಸು ಮಾಡಿರಲೇ ಇಲ್ಲ. ಆದರೂ ಟಿಕೆಟ್ ನೀಡಿದ್ದಾರೆ. ಸಿದ್ದರಾಮಯ್ಯನಿಗೆ ಪಾಠ ಕಲಿಸಲು ಬಿಜೆಪಿ ಬೆಂಬಲಿಸಬೇಕು. ರಾಜ್ಯದಲ್ಲಿನ ದುರಹಂಕಾರಿ ಆಡಳಿತಕ್ಕೆ ಕೊನೆ ಹಾಡಿ ಎಂದರು.
ರಾಜ್ಯ ಬಿಜೆಪಿ ಎಸ್‌ಸಿ, ಎಸ್‌ಟಿ ಮೋರ್ಚಾ ಅಧ್ಯಕ್ಷ ವೀರಯ್ಯ ಮಾತನಾಡಿ, ಕಾಂಗ್ರೆಸ್ ಬೆಂಬಲಿಸಿ ಹಸ್ತಕ್ಕೆ ಮತ ಹಾಕಿದರೆ ಮತ್ತೆ ಸಿದ್ದರಾಮಯ್ಯನಿಗೆ ಅಧಿಕಾರ ನೀಡಿದಂತಾಗುತ್ತದೆ. ದಲಿತ ನಾಯಕರಿಗೆಲ್ಲ ರಾಜಕೀಯ ಅಧಿಕಾರ ತಪ್ಪಿಸಿದ ಸಿದ್ದರಾಮಯ್ಯವರ ದಲಿತ ವಿರೋಧಿ ಮನೋಭಾವವನ್ನು ಕ್ಷೇತ್ರದಾದ್ಯಂತ ಪ್ರಚಾರ ಮಾಡಬೇಕು. ಸಿದ್ದರಾಮಯ್ಯನರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಿಲು ಬಿಜೆಪಿ ಬೆಂಬಲಿಸಿ ಹರ್ಷವರ್ಧನರಿಗೆ ಮತ ನೀಡಬೇಕು ಎಂದರು.
ಮುಖಂಡರಾದ ಯು.ಎನ್.ಪದ್ಮನಾಭರಾವ್ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಸವೇಗೌಡ ಬಿಜೆಪಿ ಬೆಂಬಲಿಸಲು ಕೋರಿದರು. ಪಕ್ಷದ ನಾಯಕರಾದ ಮಾಜಿ ಸಚಿವ ಎಂ.ಮಹದೇವು ಅಳಿಯ ಜಯದೇವು, ಜಿಪಂ ಮಾಜಿ ಉಪಾಧ್ಯಕ್ಷ ಡಾ.ಶಿವರಾಂ, ನಗರಸಭೆ ಸದಸ್ಯರಾದ ದೊರೆಸ್ವಾಮಿ, ವಿಜಯಾಂಬಿಕಾ, ಪುಟ್ಟರಾಜು, ದೇವಪುತ್ರ, ನಾಗರಾಜು (ಗಾಂಧಿ), ರಂಗಸ್ವಾಮಿ, ಮಹೇಶ ಅತ್ತಿಖಾನೆ ಇದ್ದರು.