Advertisement

ಪಾರ್ಕ್‌ಗಳಲ್ಲಿ ಕನಿಷ್ಠ ನಿಯಮ ಪಾಲನೆಯಾಗ್ತಿಲ್ಲ

12:43 PM Dec 19, 2021 | Team Udayavani |

ಬೆಂಗಳೂರು: ಸಾರ್ವಜನಿಕ ಸ್ಥಳಗಳು ಅದರಲ್ಲೂ ವಿಶೇಷವಾಗಿ ಉದ್ಯಾನ, ವಾಣಿಜ್ಯ ಮಳಿಗೆಗಳು ಮತ್ತು ಥಿಯೇಟರ್‌ಗಳಲ್ಲಿ ಎರಡು ಡೋಸ್‌ ಪಡೆದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಬಿಬಿಎಂಪಿ ಕೋವಿಡ್‌ ತಜ್ಞರ ಸಮಿತಿ ಸಲಹೆ ಮಾಡಿ ಎರಡು ವಾರ ಕಳೆದಿದೆ. ಈ ಮಧ್ಯೆ ರೂಪಾಂತರಿ ತಳಿ ಒಮಿಕ್ರಾನ್‌ ಪ್ರಕರಣಗಳ ಸಂಖ್ಯೆ ನಗರದಲ್ಲಿ ಎಂಟಕ್ಕೆ ಏರಿಕೆಯಾಗಿದೆ. ಆದರೆ, ಬಹುತೇಕ ಉದ್ಯಾನಗಳಲ್ಲಿ ಈಗಲೂ ಕನಿಷ್ಠ ಸ್ಕ್ರೀನಿಂಗ್‌ ಕೂಡ ನಡೆಯುತ್ತಿಲ್ಲ. ಇದು ಭೀತಿಯನ್ನು ಹೆಚ್ಚಿಸಿದೆ.

Advertisement

ಈಗಾಗಲೇ ವಾಣಿಜ್ಯ ಮಳಿಗೆಗಳು, ಚಿತ್ರಮಂದಿರಗಳು, ಮಾಲ್‌ಗ‌ಳಲ್ಲಿ ಎರಡು ಡೋಸ್‌ ಕಡ್ಡಾಯಗೊಳಿಸಿ ಜಾರಿಗೊಳಿಸಲಾಗಿದೆ. ಆದರೆ, ಉದ್ಯಾನಗಳಲ್ಲಿ ಮಾತ್ರ ಈ ನಿಯಮ ಇನ್ನೂ ಜಾರಿಯಾಗಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು ಸಾವಿರಕ್ಕೂ ಅಧಿಕ ಉದ್ಯಾನಗಳಿದ್ದು, ನಿತ್ಯ ಬೆಳಿಗ್ಗೆ ಮತ್ತು ಸಂಜೆ ಅಲ್ಲಿ ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ಪ್ರತಿ ಉದ್ಯಾನದಲ್ಲಿ ನೂರಾರು ಜನ ವಾಯುವಿಹಾರಕ್ಕೆ ಬರುತ್ತಾರೆ. ಹೀಗೆ ಬರುವವರು ಲಸಿಕೆ ಪಡೆದಿದ್ದಾರೆಯೇ ಎಂದು ಪರಿಶೀಲಿಸುವ ಗೋಜಿಗೆ ಬಿಬಿಎಂಪಿ ಹೋಗುತ್ತಿಲ್ಲ. ಕೊನೆಪಕ್ಷ ಸ್ಕ್ರೀನಿಂಗ್‌ ಕನಿಷ್ಠ ನಿಯಮಗಳೂ ಅಲ್ಲಿ ಪಾಲನೆ ಆಗುತ್ತಿಲ್ಲ.

ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಒಟ್ಟು ಕೊರೊನಾ ಪ್ರಕರಣದಲ್ಲಿ ಶೇ. 60ರಷ್ಟು ಬೆಂಗಳೂರು ನಗರದಲ್ಲಿ ಪತ್ತೆಯಾಗುತ್ತಿವೆ. ನಗರದಲ್ಲಿ ಸಾರ್ವಜನಿಕ ಸ್ಥಳಲ್ಲಿ ಕೊರೊನಾ ಮಾರ್ಗಸೂಚಿಗಳು ಪಾಲನೆಯಾಗುತ್ತಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಿವೆ. ಜತೆಗೆ ಜನರು ಮಾಸ್ಕ್ ಗಳನ್ನು ತೆಗೆದು ವಾಕ್‌ ಮಾಡುತ್ತಿರುವ ದೃಶ್ಯಗಳು ಪಾರ್ಕ್‌ ಗಳಲ್ಲಿ ಸಾಮಾನ್ಯವಾಗಿವೆ. ಈ ಮಧ್ಯೆ ಪ್ರಕರಣಗಳೂ ಹೆಚ್ಚುತ್ತಿವೆ. ಆದ್ದರಿಂದ ಉದ್ಯಾನಗಳಲ್ಲೂ ಶೀಘ್ರ ಎರಡೂ ಡೋಸ್‌ ಲಸಿಕೆ ಕಡ್ಡಾಯಗೊಳಿಸಬೇಕು. ಹಾಗೂ ಸ್ಕ್ರೀನಿಂಗ್‌ ಸೇರಿದಂತೆ ಅಗತ್ಯ ನಿಯಮಗಳ ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ತಜ್ಞರಿಂದ ಕೇಳಿಬರುತ್ತಿದೆ.

ಲಕ್ಷಾಂತರ ಜನ ಭೇಟಿ: ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದಾಜು 1,300 ಉದ್ಯಾನಗಳಿವೆ. ಬೆಳಗ್ಗೆಯಿಂದ ಸಂಜೆವರೆಗೆ ಬರೀ 100 ಜನರ ಲೆಕ್ಕಹಾಕಿದರೂ ಪಾರ್ಕ್ ಗಳಲ್ಲಿ ಸರಿಸುಮಾರು 1.30 ಲಕ್ಷಕ್ಕೂ ಅಧಿಕ ಮಂದಿ ಪಾರ್ಕ್‌ಗಳಿಗೆ ನಿತ್ಯ ಭೇಟಿ ನೀಡುತ್ತಾರೆ. ಇದರಲ್ಲಿ ಕೊರೊನಾ ಲಸಿಕೆ ಪಡೆಯದವರು, ಒಂದು ಲಸಿಕೆ ಮಾತ್ರ ಪಡೆದವರು, ಶೀತ, ಜ್ವರ ಲಕ್ಷಣಗಳಿರುವವರು ಮತ್ತು ಇಲ್ಲದವರು ಎಲ್ಲರೂ ಇದ್ದಾರೆ. ಇದು ಮುಂಬರುವ ದಿನಗಳಲ್ಲಿ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಆರ್‌ಟಿನಗರದ ಗಂಗಾನಗರ ಪಾರ್ಕ್‌, ಕಬ್ಬನ್‌ ಪಾರ್ಕ್‌, ಗಿರಿನಗರದ ವಿವೇಕನಂದ ಪಾರ್ಕ್‌, ವಸಂತ ನಗರದ ನ್ಯಾಷನಲ್‌ ಮಿಲಿಟರಿ ಮೆಮೋರಿಯಲ್‌ ಪಾರ್ಕ್‌, ಮಂಜುನಾಥ್‌ ನಗರದ ಪಾರ್ಕ್‌ಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ನೂರಾರೂಮಂದಿ ಭೇಟಿ ನೀಡುತ್ತಿದ್ದಾರೆ. ಈ ಎಲ್ಲ ಪಾರ್ಕ್‌ಗಳಲ್ಲಿ ಇದೇ ಸ್ಥಿತಿ ಇದೆ.

ನಾವೇನು ಮಾಡೋದು….

Advertisement

ನಿತ್ಯ ಸುಮಾರು 100ರಿಂದ 200 ಮಂದಿ ಪಾರ್ಕ್‌ಗೆ ಭೇಟಿ ನೀಡುತ್ತಾರೆ. ಮುಂಜಾನೆ ಮತ್ತು ಸಂಜೆ ವೇಳೆ ಪಾರ್ಕ್‌ಗೆ ಬರುವವರ ಬಳಿ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಕೇಳಿದರೆ ಮೊಬೈಲ್‌ ಮನೆಯಲ್ಲಿದೆ. ಲಸಿಕೆ ಪ್ರಮಾಣ ಪತ್ರ ಕೈಯಲ್ಲಿ ಹಿಡಿದುಕೊಂಡು ತಿರುಗೊಕ್ಕೆ ಆಗುತ್ತಾ ಎಂದು ನಮ್ಮನ್ನೇ ಗದರಿಸುತ್ತಾರೆ. ಅಷ್ಟಕ್ಕೂ ನಮಗೆ ಅಧಿಕೃತವಾಗಿ ಆದೇಶವೂ ಇಲ್ಲ. ಜತೆಗೆ ಒಂದು ಪಾರ್ಕ್‌ನಲ್ಲಿ ಎರಡು ಮೂರು ಗೇಟ್‌ ಗಳಿರುತ್ತವೆ. ಒಬ್ಬರೇ ಸಿಬ್ಬಂದಿಯನ್ನು ನಿಯೋಜಿಸಿರುತ್ತಾರೆ. ಒಂದು ಕಡೆಯಲ್ಲಿ ಪರಿಶೀಲನೆ ಮಾಡಿದ್ದರೆ, ಇನ್ನೊಂದು ಗೇಟ್‌ನಲ್ಲಿ ಪರಿಶೀಲನೆ ಸಾಧ್ಯವಾಗುವುದಿಲ್ಲ ಎಂದು ಪಾರ್ಕ್‌ ಗಳ ಭದ್ರತಾ ಸಿಬ್ಬಂದಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಮಾಸ್ಕ್ ಮಾಯ! :

ಪಾರ್ಕ್‌ ಹಾಗೂ ಸಮೀಪದ ವಾಣಿಜ್ಯ ಮಳಿಗೆ, ಮಾರುಕಟ್ಟೆಗಳಿಗೆ ಸಾರ್ವಜನಿಕರು ಮಾಸ್ಕ್ ಧರಿಸದೆ ವಾಯುವಿಹಾರ ಮಾಡುತ್ತಿದ್ದಾರೆ. ಎರಡು ವಾರದ ಹಿಂದೆ ಹೆಚ್ಚುತ್ತಿರುವ ಕೊರೊನಾ ಪ್ರಕರಣದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳ ಸೇರಿದಂತೆ ವಿವಿಧ ಪ್ರವೇಶದಲ್ಲಿ ಮಾಸ್ಕ್ಧರಿಸದವರನ್ನು ಹುಡುಕಿ-ಹುಡುಕಿ ದಂಡ ವಿಧಿಸುತ್ತಿದ್ದರು. ಜನರು 250ರೂ. ದಂಡದ ಭೀತಿಯಿಂದ ಮಾಸ್ಕ್ ಧರಿಸಿಯೇ ಮನೆ ಹೊರಗೆ ಬರುತ್ತಿದ್ದರು. ಪ್ರಸ್ತುತ ಸಾರ್ವಜನಿಕ ಸ್ಥಳದಲ್ಲಿ ದಂಡ ವಿಧಿಸುವುದು ಕಡಿಮೆಯಾಗಿದೆ.

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next