“ಟಗರು’ ಚಿತ್ರದಲ್ಲಿ ನಟ ಧನಂಜಯ್ ಅವರ ಡಾಲಿ ಪಾತ್ರವನ್ನು ನೋಡಿ ಮೆಚ್ಚಿದ್ದ ನಿರ್ದೇಶಕ ರಾಮ್ ಗೋಪಾಲ ವರ್ಮ (ಆರ್‌ಜಿವಿ), ಧನಂಜಯ್ ಕೇವಲ ಕನ್ನಡ ಮಾತ್ರವಲ್ಲ ಇಡೀ ದಕ್ಷಿಣ ಭಾರತದ ಚಿತ್ರರಂಗಕ್ಕೆ ಸಲ್ಲುವಂತಹ ವಿಭಿನ್ನ ನಟ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದರು. ಅದರಂತೆ, ಈಗ ಆರ್‌ಜಿವಿ ತಮ್ಮ ಗರಡಿಯಲ್ಲಿ ಪಳಗಿದ ಹುಡುಗ ಸಿದ್ಧಾರ್ಥ್ ನಿರ್ದೇಶನದ “ಭೈರವಗೀತ’ ಚಿತ್ರದ ಮೂಲಕ ಧನಂಜಯ್ ಅವರನ್ನ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಚಿತ್ರರಂಗಕ್ಕೂ ಪರಿಚಯಿಸುತ್ತಿದ್ದಾರೆ.
ಇತ್ತೀಚೆಗೆ ಭೈರವಗೀತ ಚಿತ್ರದ ಮೊದಲ ಟ್ರೇಲರ್ ಅದ್ದೂರಿಯಾಗಿ ಹೊರಬಂದಿದೆ. ಟ್ರೇಲರ್ ಬಿಡುಗಡೆಗಾಗಿ ಬೆಂಗಳೂರಿಗೆ ಬಂದಿದ್ದ ಆರ್‌ಜಿವಿ, ಚಿತ್ರದ ಮತ್ತು ಧನಂಜಯ್ ಕುರಿತು ಒಂದಷ್ಟು ಮಾತುಗಳನ್ನಾಡಿದ್ದಾರೆ. ಅದು ಅವರ ಮಾತಲ್ಲೇ … “ನಾನು ಯಾವುದೇ ಪಾತ್ರಗಳನ್ನು ನೋಡುವಾಗ ಅದನ್ನು ನಿರ್ವಹಿಸುವ ನಟನ ಸಾಮರ್ಥ್ಯ, ದೌರ್ಬಲ್ಯವನ್ನು ಸೂಕ್ಷ್ಮವಾಗಿ ನೋಡುತ್ತೇನೆ. ಸಾಮಾನ್ಯವಾಗಿ ಒಬ್ಬ ನಟನಿಗೆ ಅವನದ್ದೇ ಆದ ಒಂದಷ್ಟು ಇತಿಮಿತಿಗಳಿರುತ್ತವೆ.
ನಾನು ಕಂಡಂತೆ ಧನಂಜಯ್ ಒಬ್ಬ ಮೆಥಡ್ ಆ್ಯಕ್ಟರ್. ನಿಜ ಹೇಳಬೇಕೆದಂದರೆ, ದಕ್ಷಿಣ ಭಾರತದಲ್ಲಿ ಧನಂಜಯ್ ಅಂತ ಮೆಥಡ್ ಆ್ಯಕ್ಟರ್ ಅನ್ನು ಮೊದಲ ಬಾರಿ ನೋಡಿದ್ದು, ಅವರು ಈ ಹಿಂದೆ ನಟಿಸಿದ್ದ ಟಗರು ಚಿತ್ರದಲ್ಲಿ. ಆ ಚಿತ್ರ ನೋಡಿದಾಗಲೇ ಧನಂಜಯ್ ತುಂಬಾ ಇಷ್ಟವಾದರು. “ಭೈರವ ಗೀತಾ’ ಸ್ಕ್ರಿಪ್ಟ್ ಕೇಳಿದಾಗ ಭೈರವನ ಪಾತ್ರಕ್ಕೆ ಅವರೇ ಸೂಕ್ತ ಅನ್ನಿಸಿತು. ಕಥೆಯನ್ನು ಅವರಿಗೆ ಹೇಳಿದಾಗ ಅವರು ಖುಷಿಯಿಂದ ಒಪ್ಪಿಕೊಂಡರು. ಭೈರವಗೀತ 90ರ ದಶಕದಲ್ಲಿ ರಾಯಲ ಸೀಮಾದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಚಿತ್ರ.
ಮೇಲ್ನೋಟಕ್ಕೆ ಇದೊಂದು ವೈಲೆಂಟ್ ಚಿತ್ರವಾದರೂ, ಅದರ ಹಿಂದೆ ಒಂದು ಪ್ರೇಮಕಥೆ ಇದೆ. ಜನರ ಬದುಕಿನ ಹೋರಾಟದ ಚಿತ್ರಣವಿದೆ. ಸಮಾಜದ ಎರಡು ವರ್ಗಗಳ ನಡುವಿನ ಸಂಘರ್ಷವಿದೆ. ಇದು ನಮ್ಮ ನಡುವೆಯೇ ನಡೆದ ಕಥೆ. ಹಾಗಾಗಿ ಇದನ್ನ ಚಿತ್ರ ಮಾಡಿದರೆ, ಬಹುಬೇಗ, ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತದೆ. ಇನ್ನು ಈ ಚಿತ್ರದ ಪಾತ್ರಗಳು ಕೂಡ ನಮ್ಮ ನೇಟಿವಿಟಿಯನ್ನು ಪ್ರತಿಬಿಂಬಿಸುವಂತಿರಬೇಕಿತ್ತು. ಹಾಗಾಗಿ ನಮಗೆ ಧನಂಜಯ್ ಸೂಕ್ತ ಅನಿಸಿದರು.
ಇನ್ನು ನಾಯಕಿಯ ಪಾತ್ರಕ್ಕೆ ಕ್ಲಾಸಿಕ್ ಭಾರತೀಯ ಹುಡುಗಿಯ ಲುಕ್ ಇರುವ ಮುಖ ಬೇಕಿತ್ತು. ಅದರಂತೆ ನಮಗೆ ಐರಾ ಸಿಕ್ಕಿದರು. ಉಳಿದಂತೆ ಒಂದೊಂದೆ ಪಾತ್ರಗಳು ಸಿಗುತ್ತಾ ಹೋದವು. ಅಂತಿಮವಾಗಿ ನಮ್ಮ ಕಲ್ಪನೆಯ ಪ್ರಕಾರ ಚಿತ್ರ ಬಂದಿದೆ ಎನ್ನುವುದು ಆರ್‌ಜಿವಿ ಮಾತು. ಇನ್ನೊಂದು ವಿಷಯವೆಂದರೆ, ಸಿದ್ಧಾರ್ಥ್ ಎಂಬ 22 ವರ್ಷದ ಹುಡುಗ ಭೈರವಗೀತ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೆ ಇಂಜಿನಿಯರಿಂಗ್ ಮುಗಿಸಿರುವ ಸಿದ್ಧಾರ್ಥ್, ತಮ್ಮ ಶಿಕ್ಷಣದ ನಡುವೆಯೇ ಆರ್‌ಜಿವಿ ಬಳಿ ಕೆಲ ಚಿತ್ರಗಳಿಗೆ ಸಂಕಲನಕಾರನಾಗಿ ಕೆಲಸ ಮಾಡಿದ್ದರು. ಸಿದ್ಧಾರ್ಥ್ ಪ್ರತಿಭೆಯನ್ನು ಹತ್ತಿರದಿಂದ ಕಂಡ ಆರ್‌ಜಿವಿ, ಭೈರವಗೀತ ಚಿತ್ರದ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಸಿದ್ಧಾರ್ಥ್ ಪ್ರತಿಭೆಯ ಬಗ್ಗೆ ಮಾತನಾಡುವ ಆರ್‌ಜಿವಿ, ಅವನ ವಯಸ್ಸು ಚಿಕ್ಕದಾದರೂ, ಪ್ರತಿಭೆ ದೊಡ್ಡದು.
ಸ್ಕ್ರಿಪ್ಟ್ನಲ್ಲಿ ಏನು ಅಂದುಕೊಂಡಿದ್ದನೊ, ಅದನ್ನು ಅಷ್ಟೇ ಅಚ್ಚುಕಟ್ಟಾಗಿ ಸ್ಕ್ರೀನ್ ಮೇಲೆ ತಂದಿದ್ದಾನೆ. ಧನಂಜಯ್ ಮತ್ತು ಸಿದ್ಧಾರ್ಥ್ ಇಬ್ಬರ ಕೆಮಿಸ್ಟ್ರಿ ವಕೌìಟ್ ಆಗಿದೆ ಎಂದು ನನಗನಿಸುತ್ತಿದೆ. ಟ್ರೇಲರ್ ತುಂಬ ಭರವಸೆ ಮೂಡಿಸುವಂತಿದೆ. ಟ್ರೇಲರ್‌ನಲ್ಲಿ ಏನಿದೆಯೋ, ಅದಕ್ಕಿಂತ ದುಪ್ಪಟ್ಟು ಸಿನಿಮಾದಲ್ಲಿ ನಿರೀಕ್ಷಿಸಬಹುದು. ಇದೇ ತಿಂಗಳ 22ರಂದು ಚಿತ್ರ ರಿಲೀಸ್ ಆಗಲಿದೆ. ಜನ ಹೇಗೆ ಸ್ವೀಕರಿಸುತ್ತಾರೋ, ಕಾದು ನೋಡೋಣ ಎನ್ನುತ್ತಾರೆ ಆರ್‌ಜಿವಿ.