Advertisement

ಅಭ್ಯರ್ಥಿಗಳ ಪ್ರಚಾರಕ್ಕೆ ಮುಖಂಡರ ಸುಳಿವಿಲ್ಲ

07:37 AM May 27, 2019 | Team Udayavani |

ಔರಾದ: ಪಟ್ಟಣ ಪಂಚಾಯತ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇನ್ನೂ ಎರಡು ದಿನ ಮಾತ್ರ ಬಾಕಿ ಉಳಿದಿವೆ. ಆದರೂ ಕಾಂಗ್ರೆಸ್‌ ಪಕ್ಷದ ತಾಲೂಕು ಅಧ್ಯಕ್ಷ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಪ್ರಚಾರಕ್ಕೆ ಬಾರದಿರುವುದರಿಂದ ಕಾಂಗ್ರೆಸ್‌ ಅಭ್ಯರ್ಥಿಗಳಲ್ಲಿ ಆತಂಕ ಶುರುವಾಗಿದೆ.

Advertisement

20 ವಾರ್ಡ್‌ಗಳಿಂದ ಕೂಡಿದ ಪಟ್ಟಣ ಪಂಚಾಯತನಲ್ಲಿ 19 ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಲ್ಲಿದ್ದು ವಾರ್ಡ್‌ 9ರಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಧೋಡಿಬಾರಾವ್‌ ನರೋಟೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿಗೆ ಪ್ರತಿಷ್ಠೆ: ಕಾಂಗ್ರೆಸ್‌ ಪಕ್ಷದ ಮುಖಂಡರು ಬಲವಂತದಿಂದ ಬಿಜೆಪಿ ಅಭ್ಯರ್ಥಿ ನಾಮಪತ್ರ ಹಿಂಪಡೆಯುವಂತೆ ಮಾಡಿದ್ದಾರೆ ಎನ್ನುವ ಪ್ರಶ್ನೆ ಶಾಸಕ ಹಾಗೂ ಸಂಸದರ ಮನದ‌ಲ್ಲಿ ಬೇರೂರಿದೆ. ಹೀಗಾಗಿಯೇ ಪಟ್ಟಣದಲ್ಲಿ ನಡೆದ ಬಹಿರಂಗ ಪ್ರಚಾರ ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ ನಾಯಕರು ಗರಂ ಆಗಿದ್ದರು.ಅದಲ್ಲದೇ ಜಿಲ್ಲೆಯಲ್ಲಿ ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಿದ ಸಂಸದರಿಗೆ ಈ ಚುನಾವಣೆಯೂ ಕೂಡ ಪ್ರತಿಷ್ಠೆಯಾಗಿದೆ. ಆದ್ದರಿಂದ ಶಾಸಕ ಪ್ರಭು ಚವ್ಹಾಣ ಅವರು ಸುಡುವ ಬಿಸಿಲನ್ನೂ ಲೆಕ್ಕಿಸದೇ ಪಕ್ಷದ ಅಭ್ಯರ್ಥಿಗಳೊಂದಿಗೆ ಪಟ್ಟಣ ಪ್ರತಿಯೊಂದು ವಾರ್ಡ್‌ನ ಮನೆ ಮನೆಗೆ ತೆರಳಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಪಕ್ಷದ ಅಭ್ಯರ್ಥಿಗಳಲ್ಲಿ ಗೆಲುವಿನ ಆತ್ಮವಿಶ್ವಾಸ ಹೆಚ್ಚಾಗಿ ಉತ್ಸಾಹದಿಂದ ಪ್ರಚಾರದಲ್ಲಿ ತೊಡಗಿದ್ದಾರೆ.

ಪ್ರಚಾರಕ್ಕೆ ಎರಡು ದಿನ ಮಾತ್ರ: ಪಟ್ಟಣ ಪಂಚಾಯತ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇನ್ನೂ ಎರಡು ದಿನಗಳು ಮಾತ್ರ ಸಮಯವಿದೆ. ಆದರೆ ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಹೋದ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ರಾಜಕುಮಾರ ಹಲಬರ್ಗೆ ಸೇರಿದಂತೆ ಓರ್ವ ಪಕ್ಷದ ಮುಖಂಡರು ಕೂಡ ಪ್ರಚಾರಕ್ಕೆ ಬಂದಿಲ್ಲ. ಇದರಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ. ಇನ್ನಾದರೂ ಪಕ್ಷದ ಮುಖಂಡರು ಪ್ರಚಾರಕ್ಕೆ ಬಂದು ಅಭ್ಯರ್ಥಿಗಳಿಗೆ ಸಹಕಾರ ನೀಡುತ್ತಾರಾ ಕಾದು ನೋಡಬೇಕಾಗಿದೆ.

ರಾಮ ನರೋಟೆ ಸಾರಥ್ಯ: ಪಟ್ಟಣದಲ್ಲಿ ನಡೆಯುವ ಪಟ್ಟಣ ಪಂಚಾಯತ ಚುನಾವಣೆ ಪ್ರಚಾರದ ಸಾರಥ್ಯವನ್ನು ನಾಯಕರು ಯಾರೂ ವಹಿಸಿಕೊಳ್ಳದಿರುವ ಹಿನ್ನೆಲೆಯಲ್ಲಿ ಮುಖಂಡ ರಾಮ ನರೋಟೆ ವಹಿಸಿಕೊಂಡು ಹತ್ತು ಬಡಾವಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನುಳಿದ ಒಂಬತ್ತು ಬಡಾವಣೆಯಲ್ಲಿ ಅಭ್ಯರ್ಥಿಗಳೇ ಸ್ವಂತ ಬಲದಿಂದ ಪ್ರಚಾರ ಮಾಡುತ್ತಿದ್ದಾರೆ.

Advertisement

ತಾರತಮ್ಯ ಯಾಕೆ?: ಪಟ್ಟಣ ಪಂಚಾಯತ ಚುನಾವಣೆ ಟಿಕೆಟ್ ಹಂಚುವಾಗ ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಮೀನಾಕ್ಷಿ ಸಂಗ್ರಾಮ, ವಿಜಯಕುಮಾರ ಕೌಡ್ಯಾಳ ನೇತೃತ್ವದಲ್ಲಿನ ಹತ್ತು ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ನೇತೃತ್ವದಲ್ಲಿ ರಾಮ ನರೋಟೆ ಸೇರಿದಂತೆ ಇನ್ನಿತರ ಬೆಂಬಲಿಗರಿಗೆ 10 ಟಿಕೆಟ್ ನೀಡುವ ಮೂಲಕ ಟಿಕೆಟ್‌ನಲ್ಲಿ ಸಮಪಾಲು ಹಂಚಿಕೆ ಮಾಡಲಾಗಿದೆ. ಆದರೆ ಅಂದಿನಿಂದ ಇಂದಿನವರೆಗೂ ಓರ್ವ ಮುಖಂಡರೂ ಬಂದು ಪ್ರಚಾರ ಮಾಡಿಲ್ಲ. ಮುಖಂಡ ರಾಮ ನರೋಟೆ ವಿಜಯಸಿಂಗ್‌ ಅವರು ತಮ್ಮ ಬೆಂಬಲಿಗರ ಪರವಾಗಿ ಶ್ರಮಿಸುತ್ತಿದ್ದಾರೆ. ಇನ್ನುಳಿದ ಬಡಾವಣೆಯಲ್ಲಿ ಸುಳಿಯುತ್ತಿಲ್ಲ ಎನ್ನುವುದು ಕಾಂಗ್ರೆಸ್‌ ಕಾರ್ಯಕರ್ತ ಮಾತು.

ವಿಜಯಸಿಂಗ್‌ ಇಲ್ಲದೆ ಗೆಲುವಿಲ್ಲ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ಹನ್ನೊಂದು ವರ್ಷಗಳಿಂದ ಪಕ್ಷ ಸಂಘಟನೆ ಜೊತೆಗೆ ಜನರ ಸಮಸ್ಯೆಗಳನ್ನು ಬಗೆ ಹರಿಸುವ ಮೂಲಕ ಜನರ ಹಾಗೂ ಕಾರ್ಯಕರ್ತರ ವಿಶ್ವಾಸ ಸಂಪಾದಿಸಿಕೊಂಡಿದ್ದಾರೆ. ಪಟ್ಟಣ ಪಂಚಾಯತ ಚುನಾವಣೆಯಲ್ಲಿ ವಿಜಯಸಿಂಗ್‌ ಬಂದರೆ ಮಾತ್ರ ಅಭ್ಯರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿದೆ. ಇಲ್ಲವಾದಲ್ಲಿ ಪಕ್ಷದ ಸ್ಥಿತಿ ಚುನಾವಣೆಯಲ್ಲಿ ಚಿಂತಾಜನಕವಾಗುತ್ತದೆ.

ಕಾಂಗ್ರೆಸ್‌ ಪಕ್ಷದಲ್ಲಿನ ಆತಂಕರಿಕ ಭಿನ್ನಮತ ಬಿಟ್ಟು ಪಕ್ಷದ ಎಲ್ಲಾ ನಾಯಕರು ಒಂದಾಗಿ ಬಂದು ಚುನಾವಣೆಯಲ್ಲಿ ಪ್ರಚಾರ ಮಾಡಿದರೆ ಮಾತ್ರ ಅಲ್ಪಸ್ವಲ್ಪ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳಿಗೆ ಸಂತೋಷವಾಗಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಬಿಜೆಪಿ ಮುಖಂಡರು ಹಾಗೂ ಅಭ್ಯರ್ಥಿಗಳು ಕಾಂಗ್ರೆಸ್‌ ಪಕ್ಷದ ನಾಯಕರ ಕಿತ್ತಾಟದ ಲಾಭ ಪಡೆದುಕೊಳ್ಳುತ್ತಾರೆ.

•ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next