Advertisement

ಬೆಳೆ ಸಮೀಕೆಯಲ್ಲಿ ಲೋಪ ಬೇಡ

07:20 PM Aug 28, 2020 | Suhan S |

ಬೀದರ: ಜಿಲ್ಲೆಯಲ್ಲಿ ಮಳೆಯಿಂದಾಗಿ 19,305 ಹೇಕ್ಟರ್‌ನಲ್ಲಿ ಬೆಳೆ ಹಾನಿಯಾಗಿರುವುದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಕೃಷಿ-ಕಂದಾಯ ಇಲಾಖೆಯ ಜಂಟಿ ಸಮೀಕ್ಷೆ ಇನ್ನೂ ನಡೆಯಬೇಕಿದೆ. ಸಮೀಕ್ಷೆಯನ್ನು ಪರಿಣಾಮಕಾರಿ ಆಗಿ ನಡೆಸಿ ರೈತರ ಮನೆ ಬಾಗಿಲಿಗೆ ಪರಿಹಾರ ಒದಗಿಸಲು ಕ್ರಮ ವಹಿಸಬೇಕು. ಲೋಪವಾದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕಂದಾಯ ಸಚಿವ ಆರ್‌. ಅಶೋಕ ಎಚ್ಚರಿಸಿದರು.

Advertisement

ತಾಲೂಕಿನ ಬೆನಕನಳ್ಳಿ ಗ್ರಾಮದಲ್ಲಿ ಮಳೆಯಿಂದ ಹಾಳಾದ ಬೆಳೆ ವೀಕ್ಷಣೆ ನಂತರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಜೂನ್‌ನಿಂದ ಈವರೆಗೆ 445 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ. 19ರಷ್ಟು ಹೆಚ್ಚಾಗಿದೆ. ಮಳೆಯಿಂದ 13 ಸಾವಿರ ಹೆಕ್ಟೇರ್‌ ಹೆಸರು, 1600 ಹೆಕ್ಟೇರ್‌ ಉದ್ದು, 1294 ಹೆಕ್ಟೇರ್‌ ತೊಗರಿ, 3634 ಹೆಕ್ಟೇರ್‌ಸೋಯಾಬಿನ್‌ ಮತ್ತು 95 ಹೆಕ್ಟೇರ್‌ ಎಳ್ಳು ಬೆಳೆ ಹಾಳಾಗಿವೆ. ಹುಮನಾಬಾದ್‌ ತಾಲೂಕಿನಲ್ಲಿ 5548 ಹೆಕ್ಟೇರ್‌, ಭಾಲ್ಕಿಯಲ್ಲಿ 4100 ಹೆಕ್ಟೇರ್‌, ಬಸವಕಲ್ಯಾಣದಲ್ಲಿ 1605 ಹೆಕ್ಟೇರ್‌, ಬೀದರನಲ್ಲಿ 854 ಹೆಕ್ಟೇರ್‌ ಹಾಗೂ ಔರಾದನಲ್ಲಿ 814 ಹೆಕ್ಟೇರ್‌ ಬೆಳೆ ಹಾನೀಗೀಡಾಗಿದೆ ಎಂದು ಡಿಸಿ ಆರ್‌. ರಾಮಚಂದ್ರನ್‌ ಮಾಹಿತಿ ನೀಡಿದರು.

ಸರ್ಕಾರಿ ಸ್ಮಶಾನ ಭೂಮಿಯಿರಲಿ: ಜಿಲ್ಲೆಯಲ್ಲಿ ಯಾರೇ ಹೇಳಿದರೂ ಜಾತಿಯ ಆಧಾರದಲ್ಲಿ ಸ್ಮಶಾನ ಮಂಜೂರು ಮಾಡುವುದು ಬೇಡ. ಸರ್ಕಾರಿ ಸ್ಮಶಾನ ಎಂದೇ ಮಂಜೂರು ಮಾಡಬೇಕು. ಎಲ್ಲ ಸಮುದಾಯವರಿಗೂ ಅಂತಿಮ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಬೇಕು. ಮಾಸಾಶನ, ಸ್ಮಶಾನ ನನ್ನ ಆದ್ಯತಾ ವಲಯಗಳು ಎಂದರು. ಈಗಿರುವ ಜಿಲ್ಲಾಧಿಕಾರಿ ಕಚೇರಿ, ನಗರಸಭೆ ಸ್ಥಳದಲ್ಲೇ ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಿಸಬೇಕು. ಇಲ್ಲವಾದರೆ ಧರಣಿ ನಡೆಸಲಾಗುತ್ತದೆ. ಈ ಹಿಂದೆಯೇ ಇದಕ್ಕಾಗಿ 50 ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿದ್ದು,. ಆದಷ್ಟು ಬೇಗ ಸಂಕೀರ್ಣ ನಿರ್ಮಿಸಬೇಕು ಎಂದು ಶಾಸಕ ರಹೀಮ್‌ ಖಾನ್‌ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಅಶೋಕ ಅವರು, ಈ ವಿಷಯ ನನ್ನ ಗಮನದಲ್ಲಿದೆ ಎಂದರು. ಸಭೆಯಲ್ಲಿ ಸಂಸದ ಭಗವಂತ ಖೂಬಾ, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ರಾಜಶೇಖರ ಪಾಟೀಲ, ಬಿ. ನಾರಾಯಣರಾವ್‌, ರಘುನಾಥ ಮಲ್ಕಾಪುರೆ, ಕಂದಾಯ ಇಲಾಖೆ ಆಯುಕ್ತ ಡಾ| ಎನ್‌.ವಿ. ಪ್ರಸಾದ್‌, ಎಸ್ಪಿ ನಾಗೇಶ ಡಿ.ಎಲ್‌., ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್‌, ಸಹಾಯಕ ಆಯುಕ್ತರು, ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next