Advertisement

ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಗೈರಾಗಿದ್ದಕ್ಕೆ ವಿದ್ಯಾರ್ಥಿಗಳಿಗೆ ಊಟವೂ ಇಲ್ಲ ಪಾಠವೂ ಇಲ್ಲ!

02:11 PM Jan 17, 2020 | Suhan S |

ಎಚ್‌.ಡಿ.ಕೋಟೆ: ಸರ್ಕಾರಿ ಶಾಲೆಯ ನಿಯೋಜಿತ ಶಿಕ್ಷಕರೊಬ್ಬರ ಗೈರಾಗಿದ್ದಕ್ಕೆ ಗುರುವಾರ ಮಧ್ಯಾಹ್ನದ ಬಿಸಿಯೂಟವೂ ಇಲ್ಲದೆ 2.30ಗಂಟೆ ತನಕ ವಿದ್ಯಾರ್ಥಿಗಳು ಉಪವಾಸ ಇದ್ದ ಘಟನೆ ತಾಲೂಕಿನ ಮುಷ್ಕರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದೆ.

Advertisement

ತಾಲೂಕಿನ ಮುಷ್ಕರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕೃಷ್ಣೇಗೌಡ ಮತ್ತು ನಳಿನಾ ಎಂಬ ಇಬ್ಬರು ಶಿಕ್ಷಕರ ನಿಯೋಜಿಸಲಾಗಿದೆ. ನಳಿನಾ ಅವರನ್ನು ಪ್ರಭಾರಿಯಾಗಿ ಭೀಮನಹಳ್ಳಿ ಸರ್ಕಾರಿ ಶಾಲೆಗೆ ನಿಯೋಜಿಸಲಾಗಿದೆ. ಇದೀಗ ಮುಷ್ಕರೆ ಗ್ರಾಮದ ಶಾಲೆಗೆ ಕೃಷ್ಣೇಗೌಡ ಜೊತೆಗೆ ಮತ್ತೂಬ್ಬ ಅತಿಥಿ ಶಿಕ್ಷಕರನ್ನು ನೀಡಲಾಗಿದೆ. ಕೃಷ್ಣೇಗೌಡ ಪ್ರತಿ ಸೋಮವಾರ, ಮಂಗಳವಾರ ಮತ್ತು ಬುಧವಾರ ಮಾತ್ರ ಶಾಲೆಗೆ ಹಾಜರಾಗುತ್ತಿದ್ದು, ಇನ್ನುಳಿದ ಗುರುವಾರ, ಶುಕ್ರವಾರ ಮತ್ತು ಶನಿವಾರ ಶಾಲೆಗೆ ಗೈರಾಗುತ್ತಿದ್ದಾರೆ. ಆದರೂ ದಿನದ ಹಾಜರಾತಿಯಲ್ಲಿ ವಾರದ 6 ದಿನಗಳೂ ಹಾಜರಿರುವುದಾಗಿ ನಮೋದಿಸಿಕೊಂಡಿರುತ್ತಾರೆ ಎಂದು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಎಂದಿನಂತೆ ಗುರುವಾರ ಕೃಷ್ಣೇಗೌಡ ಹಿರಿಯ ಅಧಿಕಾರಿಗಳ ಅನುಮತಿ ಪಡಿಯದೇ ಶಾಲೆಗೆ ಗೈರಾಗಿದ್ದರು. ಅಡುಗೆ ತಯಾರಿಕೆ ಸಹಾಯಕ ಮಹಿಳೆಯು ಅವರ ಸಂಬಂಧಿಕರೊಬ್ಬರು ಮೃತ ಪಟ್ಟ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರ ಕೃಷ್ಣೇಗೌಡರಿಗೆ ಈ ದಿನ ತಡವಾಗಿ ಶಾಲೆಗೆ ಆಗಮಿಸುವುದಾಗಿ ತಿಳಿಸಿದ್ದರು. ಅತಿಥಿ ಶಿಕ್ಷಕರ ಮಾತ್ರ ಶಾಲೆಗೆ ಹಾಜ ರಾಗಿದ್ದು, ಮಧ್ಯಾಹ್ನ 2 ಗಂಟೆಯಾದರೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಾಗಿರಲಿಲ್ಲ. ಕೂಡಲೇ ಗ್ರಾಮಸ್ಥರು ಪತ್ರಿಕೆಗೆ ದೂರು ಹೇಳಿ ಕೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದಾಗ 2 ಗಂಟೆಯಾದರೂ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಇಲ್ಲದೇ ಉಪವಾಸವಿದ್ದರು. ಶಿಕ್ಷಕ ಕೃಷ್ಣೇಗೌಡರು ಶಾಲೆಗೆ ಗೈರಾಗಿದ್ದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಾಗ, ಸ್ಥಳಕ್ಕೆ ಸಿಆರ್‌ಪಿ ಮಂಜುನಾಥ್‌ ಆಗಮಿಸಿದರು. ಈ ವೇಳೆ ಪರಿಶೀಲನೆ ನಡೆಸಿದಾಗ, ಶಿಕ್ಷಕರ ಗೈರಾಗಿರುವುದರ ಜೊತೆಗೆ ಮಕ್ಕಳಿಗೆ ಬಿಸಿಯೂಟ ನೀಡದೇ ಇರುವುದು ಕಂಡು ಬಂತು. ಬಳಿಕ 2.30ಗಂಟೆ ವೇಳೆಗೆ ರೈಸ್‌ಬಾತ್‌ ಮಾಡಿಸಿ ಮಕ್ಕಳಿಗೆ ಮಧ್ಯಾಹ್ನದ ಲಘು ಉಪಾಹಾರ ನೀಡಲಾಯಿತು.

ಗ್ರಾಮಕ್ಕೆ ಹೋಗುತ್ತಿರುವ ವಿದ್ಯಾರ್ಥಿಗಳು: ಮುಷ್ಕರೆ ಗ್ರಾಮದಲ್ಲಿ 1ರಿಂದ 5ನೇ ತರಗತಿ ತನಕ ಸರ್ಕಾರಿ ಶಾಲೆ ಕಾರ್ಯನಿರ್ವಹಿಸುತ್ತಿದ್ದರೂ ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ. ಶಿಕ್ಷಕರು ಸರಿಯಾಗಿ ಶಾಲೆಗೆ ಹಾಜರಾಗುತ್ತಿಲ್ಲ ಎಂಬ ಕಾರಣದಿಂದ ಅದೇ ಗ್ರಾಮದ ಸುಮಾರು 25ಕ್ಕೂ ಅಧಿಕ ವಿದ್ಯಾರ್ಥಿಗಳು ನೆರೆಯ ಭೀಮನಹಳ್ಳಿ ಸರ್ಕಾರಿ ಶಾಲೆಗೆ ಬಾಡಿಗೆ ವಾಹನದಲ್ಲಿ ಹೋಗಿ ಬರುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗುಣಮಟ್ಟದ ಶಿಕ್ಷಣವಿಲ್ಲದಕ್ಕೆ  ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣ :  ಈ ಹಿಂದೆ ಈ ಮುಷ್ಕರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿದ್ದ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಗ್ರಾಮಸ್ಥರೊಂದಿಗೆ ಸೌಹಾರ್ದಯುತವಾಗಿದ್ದರು. ಗ್ರಾಮದ ಎಲ್ಲಾ ಮಕ್ಕಳು ಇದೇ ಶಾಲೆಗೆ ಹೋಗಿ ಕಲಿಯುತ್ತಿದ್ದರು. ಆದರೆ, ಈಗ ಆ ಶೈಕ್ಷಣಿಕ ವಾತಾವರಣ ಇಲ್ಲ. ಕಲಿಕೆಯಲ್ಲಿ ಮಕ್ಕಳು ಹಿಂದೆ ಬೀಳುತ್ತಿರುವುದನ್ನು ಗಮನಿಸಿದ ಪೋಷಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ನೆರೆಯ ಭೀಮನಹಳ್ಳಿಗೆ 1ರಿಂದ 5ನೇ ತರಗತಿಯ 25ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕಳುಹಿಸುತ್ತಿದ್ದೇವೆ. ಮುಷೆರೆ ಗ್ರಾಮದಲ್ಲಿ ಈಗ ಕೇವಲ 11 ಆದಿವಾಸಿ ವಿದ್ಯಾರ್ಥಿಗಳು ಮಾತ್ರ ಕಲಿಯುತ್ತಿದ್ದಾರೆ. ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಪೋಷಕರ ಮನವೊಲಿಸಿ ಮುಂದಿನ ಶೈಕ್ಷಣಿಕ ವರ್ಷದಿಂದಲಾದರೂ ಎಲ್ಲಾ ಮಕ್ಕಳಿಗೂ ಮುಷೆRರೆ ಗ್ರಾಮದಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ನುರಿತ ಶಿಕ್ಷಕರನ್ನು ನಿಯೋಜಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

 ಪೋಷಕರ ಜೊತೆ ಚರ್ಚೆ: ಬಿಇಒ :  ಮುಷ್ಕರೆ ಗ್ರಾಮದಲ್ಲೇ ಸರ್ಕಾರಿ ಶಾಲೆ ಇದೆಯಾದರೂ ಅದೇ ಗ್ರಾಮದ 25ಕ್ಕೂ ಅಧಿಕ ವಿದ್ಯಾರ್ಥಿಗಳು ನೆರೆಯ ಭೀಮನಹಳ್ಳಿ ಸರ್ಕಾರಿ ಶಾಲೆಗೆ ಹೋಗುತ್ತಿರುವ ವಿಷಯ ತಿಳಿದು ಬಂದಿದೆ. ಅತೀ ಶೀಘ್ರದಲ್ಲಿ ಪೋಷಕರ ಜೊತೆ ಚರ್ಚಿಸಿ ಆ ಗ್ರಾಮದ ಮಕ್ಕಳು ಅದೇ ಗ್ರಾಮದ ಶಾಲೆಗೆ ದಾಖಲಾತಿ ಪಡೆಯಲು ಪ್ರಯತ್ನಿಸುತ್ತೇನೆ. ಶಾಲೆಗೆ ಗೈರಾಗುವ ಶಿಕ್ಷಕ ಕೃಷ್ಣೇಗೌಡ ಮತ್ತು ಬಿಸಿಯೂಟ ತಯಾರಿಕೆ ಲೋಪದ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ ತಿಳಿಸಿದ್ದಾರೆ.

 

-ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next