ಚನ್ನರಾಯಪಟ್ಟಣ/ಹಿರೀಸಾವೆ: ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡಿದ್ದರಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹಗಲು ಕನಸು ಕಂಡಿದ್ದರೆ ಅದು ಸಾಧ್ಯವಿಲ್ಲ. ಡಿಕೆಶಿ ಸಾರಥ್ಯದಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ ಎಂದು ಸಚಿವ ಡಾ. ನಾರಾಯಣಗೌಡ ತಿಳಿಸಿದರು.
ತಾಲೂಕಿನ ಹಿರೀಸಾವೆ ಹೋಬಳಿ ಚಿಕ್ಕೋನಹಳ್ಳಿ ಗೇಟ್ ಬಳಿ ಇರುವ ಶ್ರೀ ಸಾಯಿಬಾಬ ಮಂದಿರಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಅಧ್ಯಕ್ಷರಾಗಿದ್ದರಿಂದ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ಹೊಡೆತ ಹೊರತು ಬಿಜೆಪಿಗಲ್ಲ, ಪದಗ್ರಹಣ ವಿನೂತನವಾಗಿ ಮಾಡಿಕೊಂಡಿರುವುದು ಅವರ ಪಕ್ಷದ ಸಂಘಟನೆಗೆ ಹೊರತು ಬೇರೆ ಯಾವುದೇ ರಾಜಕೀಯ ಬೆಳವಣಿಗೆಗಲ್ಲ ಎಂದು ಹೇಳಿದರು.
ಬಿಜೆಪಿ ಸದೃಢವಾಗಿದೆ: ಬಿಜೆಪಿ ಪಕ್ಷ ರಾಜ್ಯ ಹಾಗೂ ರಾಷ್ಟ್ರದಲ್ಲಿ ಸದೃಢವಾಗಿ ಬೆಳೆದಿದೆ. ಕಳೆದ ಆರೇಳು ವರ್ಷದಿಂದ ಕೇಂದ್ರ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊರೊನಾವನ್ನು ವೈಜ್ಞಾನಿಕವಾಗಿ ಎದುರಿಸುತ್ತಿದ್ದು ಇತರ ರಾಜ್ಯಕ್ಕೆ ಹೋಲಿಸಿದರೆ ಕಡಿಮೆ ಸಾವು ಸಂಭವಿಸಿವೆ ಎಂದರು.
ರೈತರಿಗಾಗಿ ಕೇಂದ್ರದೊಂದಿಗೆ ಚರ್ಚೆ: ರಾಜ್ಯದಲ್ಲಿ ರೈತರಿಗೆ ತೆಂಗು ಹಾಗೂ ಕೊಬ್ಬರಿಗೆ ಬೆಂಬಲ ಬೆಲೆ ನಿಗದಿಪಡಿಸುವ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಹಲವು ಬಾರಿ ಚರ್ಚೆ ನಡೆಸಲಾಗಿದೆ. ಅಧಿವೇಶನದಲ್ಲಿ ಪ್ರಸ್ತಾಪಿಸಿ ಕೊಬ್ಬರಿ ಹಾಗೂ ತೆಂಗು ಬೆಳೆಗೆ ಸೂಕ್ತ ದರ ಹಾಗೂ ಬೆಂಬಲ ಬೆಲೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ತೆಂಗಿನ ಉತ್ಪನಗಳ ಕಾರ್ಖಾನೆ ಆರಂಭ: ಚನ್ನರಾಯಪಟ್ಟಣ ಹಾಗೂ ತಿಪಟೂರು ಮಧ್ಯೆ ಆಯಿಲ್ ಕಾರ್ಖಾನೆ ನಿರ್ಮಾಣದ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿ ಸಿದ್ದು ಯೋಜನೆ ರೂಪಿಸಿ ಕಾರ್ಯ ರೂಪಕ್ಕೆ ತರಲಾಗುವುದು ಎಂದರು. ಸಾಯಿಬಾಬ ಮಂದಿರದ ಗುರುಮೂರ್ತಿ ಗುರೂಜಿ, ದಸರೀಘಟ್ಟ ಚಂದ್ರಶೇಖರಸ್ವಾಮೀಜಿ, ಮಾಜಿ ಶಾಸಕ ಸುಧಾಕರ್, ರೇಷ್ಮೆ ಇಲಾಖೆ ಉಪ ನಿರ್ದೇಶಕ ಶಿವಲಿಂಗಯ್ಯ. ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಜಗದೀಶ್, ಪೌರಾಡಳಿತ ಮಂಡಳಿಯ ಯೋಜನಾ ನಿರ್ದೇಶಕ ಸತೀಶ್, ತೋಟಗಾರಿಕೆ ಉಪನಿರ್ದೇಶಕ ಮಂಜುನಾಥ್ ಉಪಸ್ಥಿತರಿದ್ದರು.