Advertisement
ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳು ನಿಯಂತ್ರಣದಲ್ಲಿರುವುದರಿಂದ ಲಾಕ್ ಡೌನ್ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಮನಗಂಡಿದೆ.
Related Articles
Advertisement
ಬೆಂಗಳೂರಿನಿಂದ ಬಂದವರಿಗೆ ಸೋಂಕು ತಗುಲಿರುವ ಪ್ರಕರಣಗಳು ಜಿಲ್ಲೆಯ ಎಲ್ಲ ತಾಲೂಕುಗಳಿಂದ ವಿವಿಧ ಗ್ರಾಮಗಳಲ್ಲಿ ವರದಿಯಾಗಿವೆ. ಬೆಂಗಳೂರಿನಿಂದ ಬರುವ ಪ್ರಯಾಣಿಕರನ್ನು ಚೆಕ್‌ಪೋಸ್ಟ್ ಸ್ಥಾಪಿಸಿ ನಿರ್ಬಂಧಿಸುವ ಆಲೋಚನೆ ಜಿಲ್ಲಾಡಳಿತಕ್ಕೆ ಇತ್ತು. ಆದರೆ ಈಗ ಬೆಂಗಳೂರು ಲಾಕ್ ಡೌನ್ ಘೋಷಿಸಿರುವುದರಿಂದ ಆ ಕ್ರಮವನ್ನು ಕೈಬಿಡಲಾಗಿದೆ.
ಬೆಂಗಳೂರು ಲಾಕ್ ಡೌನ್ ಘೋಷಿಸಿ ಮೂರು ದಿನಗಳಾಗಿದ್ದರಿಂದ ಅಲ್ಲಿನವರು ಈಗಾಗಲೇ ಜಿಲ್ಲೆಗೆ ಬಂದಿದ್ದಾರೆ. ಹೀಗಿರುವಾಗ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಿದರೂ ಪರಿಣಾಮವಿಲ್ಲ ಎಂದು ಜಿಲ್ಲಾಡಳಿತ ಮನಗಂಡಿದೆ.
ಲಾಕ್ ಡೌನ್ ಮಾಡಿದರೆ ಬೆಂಗಳೂರಿನಿಂದ ಬಂದವರ ಗಂಟಲು ದ್ರವ ಮಾದರಿ ಪರೀಕ್ಷೆಗೂ ಅಡಚಣೆಯಾಗುತ್ತದೆ. ಆದ್ದರಿಂದ ಲಾಕ್ ಡೌನ್ ಮಾಡುವ ಅಗತ್ಯವಿಲ್ಲ. ಅದರ ಬದಲು ಬೆಂಗಳೂರಿನಿಂದ ಬಂದವರ ಗಂಟಲು ದ್ರವ ಮಾದರಿ ಪರೀಕ್ಷೆಯನ್ನು ಹೆಚ್ಚು ಹೆಚ್ಚು ನಡೆಸಲು ನಿರ್ಧರಿಸಲಾಗಿದೆ.
ಅಲ್ಲದೇ, ಗಾಳಿ ಮತ್ತು ತುಂತುರು ಮಳೆಯಿಂದಾಗಿ ವಾತಾವರಣದಲ್ಲಿ ಬದಲಾವಣೆಯಾಗಿದ್ದು, ಶೀತದ ಪ್ರಕರಣಗಳು ವರದಿಯಾಗುತ್ತಿವೆ. ಅಂಥವರ ಗಂಟಲು ದ್ರವ ಮಾದರಿ ಪರೀಕ್ಷೆಯನ್ನು ಹೆಚ್ಚು ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.
ಇಷ್ಟೇ ಅಲ್ಲದೇ, ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ಜನರು ಸ್ವಯಂಪ್ರೇರಿತರಾಗಿ ಲಾಕ್ ಡೌನ್ ನಡೆಸುತ್ತಿದ್ದಾರೆ. ಕೆಲವು ತಾಲೂಕಿನಲ್ಲಿ ಮಧ್ಯಾಹ್ನ 4 ಗಂಟೆಯ ನಂತರ ಲಾಕ್ ಡೌನ್ ಇದೆ.
ಈ ಕುರಿತು ‘ಉದಯವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು, ಜಿಲ್ಲೆಯಲ್ಲಿ ಲಾಕ್ ಡೌನ್ ವಿಧಿಸುವ ಅಗತ್ಯ ಸದ್ಯಕ್ಕೆ ಕಂಡುಬಂದಿಲ್ಲ. ಕೋವಿಡ್ 19 ಪ್ರಕರಣಗಳು ನಿಯಂತ್ರಣದಲ್ಲಿವೆ ಹಾಗಾಗಿ ಈ ಸಂದರ್ಭದಲ್ಲಿ ಲಾಕ್‌ಡೌನ್ ಅಗತ್ಯವಿಲ್ಲ. ಬೆಂಗಳೂರಿನಿಂದ ಬರಬೇಕಾದ ಜನರು ಬಂದಿದ್ದಾರೆ. ಬೆಂಗಳೂರಿನಿಂದ ಬಂದಿರುವುದರಿಂದ ಟೆಸ್ಟ್ ಗಳನ್ನು ಹೆಚ್ಚು ಮಾಡಬೇಕು. ಅಲ್ಲದೇ ಸಾರಿ, ILI ಟೆಸ್ಟ್ ಗಳನ್ನು ಹೆಚ್ಚಿಸಲಾಗುವುದು, ಮತ್ತು ಸೂಕ್ತ ವೈದ್ಯೋಪಚಾರ ನಡೆಸಲಾಗುವುದು ಎಂದು ಹೇಳಿದರು.
ಹಾಗೆಂದು, ಜನರು ನಿರ್ಲಕ್ಷ್ಯ ವಹಿಸಬಾರದು. ಭೌತಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಹೊರಗೆ ಹೋದಾಗ ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ಇದೇ ಸಂದರ್ಭದಲ್ಲಿ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.