Advertisement
ಹತ್ತು ನಿಮಿಷಕ್ಕೆ ಸಹಿ ಮಾಡಿದ್ರು: ಯಡಿಯೂರಪ್ಪ ಒಬ್ಬರೇ ಎಲ್ಲಾ ಇಲಾಖೆ ನೋಡಿಕೊಳ್ಳೋಕಾಗುತ್ತಾ..? ಕೆಲ ಮಂತ್ರಿಗಳಿಗೆ ಹೆಚ್ಚುವರಿ ಖಾತೆ ಕೊಟ್ಟಿದ್ದಾರೆ. ಅವರೂ ಕೆಲಸ ಮಾಡುತ್ತಿಲ್ಲ. ನಮ್ಮ ಪಕ್ಷ ಬಿಟ್ಟು ಬಿಜೆಪಿಗೆ ಹೋಗಿ ಗೆದ್ದಿರೋರ ಕಥೆ ಅವರನ್ನೇ ಕೇಳಬೇಕು. ಗೆದ್ದ 24 ಗಂಟೆಯಲ್ಲಿ ಮಂತ್ರಿ ಮಾಡುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದರು. ಇದುವರೆಗೂ ಮಂತ್ರಿ ಮಾಡಲು ಸಾಧ್ಯವಾಗಿಲ್ಲ. ಯಡಿಯೂರಪ್ಪ ಅವರಿಗೆ ಬಿಜೆಪಿ ವರಿಷ್ಠರು ಸಂಪುಟ ವಿಸ್ತರಣೆಗೆ ಅವಕಾಶವನ್ನೇ ನೀಡುತ್ತಿಲ್ಲ. ನಾನು ಸಿಎಂ ಆಗಿದ್ದಾಗ ಸಂಪುಟ ವಿಸ್ತರಣೆಗೆ ಮೇಡಂ (ಸೋನಿಯಾಗಾಂಧಿ), ರಾಹುಲ್ ಹತ್ತು ನಿಮಿಷಕ್ಕೆ ಸಹಿ ಮಾಡಿ ಕೊಟ್ಟಿದ್ದರು ಎಂದರು.
Related Articles
Advertisement
ನಾಲ್ಕು ಕಾರ್ಯಾಧ್ಯಕ್ಷರ ಸೃಷ್ಟಿ ನನ್ನದಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕಾತಿಗೆ ಪರ- ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ಕೆಪಿಸಿಸಿ ಅಧ್ಯಕ್ಷರ ನೇಮಕಾತಿಯಲ್ಲಿ ನಾಲ್ಕು ಕಾರ್ಯಾಧ್ಯಕ್ಷರ ನೇಮಕ ಮಾಡುವಂತೆ ನಾನು ಒತ್ತಡ ಹಾಕಿದ್ದೇನೆ ಎಂಬುದು ಮಾಧ್ಯಮಗಳ ಸೃಷ್ಟಿ. ನೀವೇ ಇದನ್ನು ಸೃಷ್ಟಿ ಮಾಡಿಕೊಂಡಿದ್ದೀರಾ. ನೀವೇ ಉತ್ತರ ಕೊಡಿ ಎಂದು ಮಾಧ್ಯಮದವರ ವಿರುದ್ಧ ಗರಂ ಆದರು.
ನಾನು ಎಲ್ಲಿಯೂ ನಾಲ್ಕು ಕಾರ್ಯಾಧ್ಯಕ್ಷರ ಹುದ್ದೆ ನೀಡುವಂತೆ ಹೇಳಿಲ್ಲ. ಸದ್ಯ ರಾಜ್ಯದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಇಲ್ವಾ. ಹಿಂದೆ ದೇಶಪಾಂಡೆ ಕಾಲದಲ್ಲಿ ಕಾರ್ಯಾಧ್ಯಕ್ಷರು ಇರಲಿಲ್ವಾ, ಡಿ.ಕೆ.ಶಿವಕುಮಾರ್ ಅವರೇ ಕಾರ್ಯಾಧ್ಯಕ್ಷರಾಗಿದ್ದರು. ಈಗಲೂ ಈಶ್ವರ್ ಖಂಡ್ರೆ ಇದ್ದಾರೆ. ನಾಲ್ಕು ಮಂದಿ ಕಾರ್ಯಾಧ್ಯಕ್ಷರು ಬೇಕೆಂದು ಹೈಕಮಾಂಡ್‌ಗೆ ನಾನೇ ಒತ್ತಡ ಹಾಕ್ತಿದ್ದೇನೆ ಅಂತ ಸೃಷ್ಟಿ ಮಾಡಲಾಗುತ್ತಿದೆ. ಡಾ.ಜಿ.ಪರಮೇಶ್ವರ್ ಕಾರ್ಯಾಧ್ಯಕ್ಷರು ಬೇಡ ಅಂತಿದ್ದಾರೆ. ಅದು ಅವರ ಅಭಿಪ್ರಾಯ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ ಎಂದು ಹೇಳಿದರು.
ರೈತರ ಆಸ್ತಿ ಜಪ್ತಿ: ರಾಜ್ಯದಲ್ಲಿ ಸಾಲ ಮಾಡಿದ ರೈತರ ಆಸ್ತಿಯನ್ನು ಬ್ಯಾಂಕ್‌ಗಳು ಜಪ್ತಿ ಮಾಡಲಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ರೈತನ ಮಗ ಹಾಗೂ ಸರ್ಕಾರ ರೈತಪರವಾಗಿರುವುದರಿಂದ ರೈತರ ಆಸ್ತಿಯನ್ನು ಜಪ್ತಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನನ್ನ ಕಾಲದಲ್ಲಿ ಮುಚ್ಚಿಲ್ಲ: ಮೈಷುಗರ್ ಸಕ್ಕರೆ ಕಾರ್ಖಾನೆ ನಾನು ಸಿಎಂ ಆಗಿದ್ದಾಗ ಮುಚ್ಚಿಲ್ಲ. ನನ್ನ ಕಾಲದಲ್ಲಿ ಸರಿ ಇತ್ತು. ಸಮ್ಮಿಶ್ರ ಸರ್ಕಾರದಲ್ಲಿ ಪುನಶ್ಚೇತನ ಆಗಿಲ್ಲ. ಮೈಷುಗರ್ ಮುಚ್ಚಲು ಸಮ್ಮಿಶ್ರ ಸರ್ಕಾರ ಕಾರಣ ಎಂದು ಹೇಳುವ ಮೂಲಕ ಜೆಡಿಎಸ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಗೋಷ್ಠಿಯಲ್ಲಿ ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಮತ್ತಿತರರಿದ್ದರು.
ಸರ್ಕಾರದ ಗುಪ್ತಚರ ಇಲಾಖೆ ವಿಫಲ: ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ಬಾಂಬ್ ಪತ್ತೆ ಪ್ರಕರಣ ಭಯ ಹುಟ್ಟಿಸುವ ಘಟನೆಯಾಗಿದೆ. ಇದರಲ್ಲಿ ರಾಜ್ಯದ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು. ಇಂತ ಘಟನೆಗಳು ನಡೆಯಬಾರದು. ಇಷ್ಟೆಲ್ಲ ನಡೆಯುತ್ತಿದ್ದರೂ ಸರ್ಕಾರದ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಮಂಗಳೂರಿನಲ್ಲಿ ಘಟನೆ ಮೇಲೆ ಘಟನೆಗಳು ಜರುಗುತ್ತಲೇ ಇವೆ. ಗೋಲಿಬಾರ್ ಪ್ರಕರಣ ನಡೆಯಿತು. ಇದರಿಂದ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ಆ ಕೆಲಸ ಮಾಡಲಿಲ್ಲ.
ಬಾಂಬ್ ಪತ್ತೆ ಪ್ರಕರಣದ ಹಿಂದೆ ಯಾರಿದ್ದಾರೆ, ಯಾರ ಕೈವಾಡ ಎಂಬುದರ ಬಗ್ಗೆ ಸಂಪೂರ್ಣ ಕೂಲಂಕುಷ ತನಿಖೆ ನಡೆಯಬೇಕು ಎಂದು ಹೇಳಿದರು. ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದಿದ್ದಕ್ಕೆ ಇಂಥ ಘಟನೆಗಳು ನಡೆಯುತ್ತಿವೆ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೈಸೂರಿನಲ್ಲಿ ಗಲಾಟೆ ನಡೆದಾಗ ವಿದ್ಯಾರ್ಥಿಗಳ ಮೇಲೂ ಪ್ರಕರಣ ದಾಖಲಿಸಿದ್ದರು. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲಿನ ಪ್ರಕರಣ ಮಾತ್ರ ವಾಪಸ್ ಪಡೆದಿದ್ದೆ. ಆದರೆ ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ತಿರುಗೇಟು ನೀಡಿದರು.