Advertisement

ಸಾಹಿತ್ಯದಲ್ಲಿ ಎಡ-ಬಲ ಎಂಬುದಿಲ್ಲ

07:06 AM Jun 30, 2019 | Lakshmi GovindaRaj |

ಬೆಂಗಳೂರು: ಸಾಹಿತ್ಯದಲ್ಲಿ ಎಡ-ಬಲ ಎಂಬುವುದಿಲ್ಲ. ಎಡಬಲದ ಲೇಪನವು ಸಾಹಿತ್ಯವಲಯಕ್ಕೆ ಒಳ್ಳೆಯದಲ್ಲ ಎಂದು ಲೇಖಕ ಡಾ.ಮೊಗಳ್ಳಿ ಗಣೇಶ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಟ್ರಸ್ಟ್‌, ಶನಿವಾರ ಭಾರತೀಯ ವಿದ್ಯಾಭನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಸಾಲಿನ “ಮಾಸ್ತಿ ಪುರಸ್ಕಾರ’ ಸ್ವೀಕರಿಸಿ ಮಾತನಾಡಿದ ಅವರು, ತಾಯಿಯ ಎದೆ ಹಾಲಿಗೆ ಎಡಬಲ ಎಂಬುವುದಿಲ್ಲವೋ ಹಾಗೇ ಸಾಹಿತ್ಯ ಲೋಕದಲ್ಲೂ ಎಡ ಪಂಥೀಯ ಮತ್ತು ಬಲ ಪಂಥೀಯ ಎಂಬುವುದಿಲ್ಲ ಎಂದು ಹೇಳಿದರು.

ಯಾವುದೇ ಲೇಖಕನಾಗಿರಲಿ ತನ್ನ ಬರಹದ ಮೂಲಕ ಮನುಷ್ಯತ್ವವನ್ನು ಓದುಗರಲ್ಲಿ ಬಿತ್ತಬೇಕು. ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ರಾಷ್ಟ್ರಕವಿ ಕುವೆಂಪು, ಪೂರ್ಣ ಚಂದ್ರ ತೇಜಸ್ವಿ, ಲಂಕೇಶ್‌ ಸೇರಿದಂತೆ ಹಲವು ಸಾಹಿತಿಗಳು ತಮ್ಮ ಬರಹದ ಮೂಲಕ ಮನುಷ್ಯತ್ವವನ್ನು ಬಿತ್ತಿದ್ದಾರೆ. ಆ ದಾರಿಯಲ್ಲಿ ಸಾಹಿತ್ಯ ವಲಯ ಸಾಗಬೇಕಾಗಿದೆ ಎಂದರು.

ಕನ್ನಡ ಸಾಹಿತ್ಯಕ್ಕೆ ಹಿರಿಯ ಸಾಹಿತಿಗಳು ಸುಭದ್ರವಾದ ನೆಲೆಯನ್ನು ಹಾಕಿಕೊಟ್ಟಿದ್ದಾರೆ. ಉತ್ತಮವಾದ ಕಥೆ, ಕಾದಂಬರಿ, ಕವಿತೆ ರಚನೆ ಮೂಲಕ ದೇಶದ ತುಂಬೆಲ್ಲ ಮನೆ ಮಾತಾಗಿದ್ದಾರೆ. ಅವರನ್ನೆಲ್ಲಾ ಸ್ಫೂರ್ತಿಯಾಗಿಟ್ಟು ಕೊಂಡು, ಸಾಹಿತ್ಯ ಬರವಣಿಗೆ ಮೂಲಕ ಮುಂದಿನ ತಲೆಮಾರಿಗೆ ಮಾನವೀಯತೆಯನ್ನು ಬಿತ್ತೋಣ ಎಂದು ಹೇಳಿದರು.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಮಾತನಾಡಿ, ಕುವೆಂಪು ಅವರ “ಶೂದ್ರತಪಸ್ವಿ’ ನಾಟಕ ರಚನೆಯಾದ ವೇಳೆ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರು ಈ ಬಗ್ಗೆ ಅಪಸ್ವರ ಎತ್ತಿದ್ದರು. ಆದರೆ ಅದು ಕುವೆಂಪು ಅವರೊಂದಿಗಿನ ಪತ್ರ ಬರವಣಿಗೆ ವಿನಿಮಯಕ್ಕಷ್ಟೇ ಸೀಮಿತವಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾಸ್ತಿ ಅವರು ಮನ್ನಣೆ ನೀಡುತ್ತಿದ್ದರು ಎಂದು ಹೇಳಿದರು.

Advertisement

ಇಪ್ಪತ್ತನೇ ಶತಮಾನದ ಅಗ್ರಗಣ್ಯ ಸಾಹಿತಿಗಳಲ್ಲಿ ಒಬ್ಬರಾಗಿದ್ದ ಮಾಸ್ತಿ ವೆಂಕಟೇಶ ಅಂಯ್ಯಗಾರ್‌ ಅವರು ನವೋದಯ ಸಾಹಿತ್ಯದ ಕಾಲಘಟ್ಟದ ಎಲ್ಲಾ ಸಾಹಿತಿಗಳಿಗೆ ಪ್ರೋತ್ಸಾಹ ನೀಡಿದರು. ಅಷ್ಟೇ ಅಲ್ಲದೆ ಹಲವು ಕಿರಿಯ ಲೇಖಕರ ಕೃತಿಗಳನ್ನು ಪ್ರಕಟಿಸಿದರು. ಕನ್ನಡ ಸಾಹಿತ್ಯವನ್ನು ಹೊಸ ರೀತಿಯಲ್ಲಿ ಕಟ್ಟಿದ ಶ್ರೇಯಸ್ಸು ಮಾಸ್ತಿ ಅವರದ್ದಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎಂ.ಜಾನಕಿ ಮಾತನಾಡಿ, ಮಾಹಿತಿ ತಂತ್ರಜ್ಞಾನ ಯುಗ ವೇಗವಾಗಿ ಬೆಳೆಯುತ್ತಿದ್ದರೂ ಪುಸ್ತಕವನ್ನು ಕೊಂಡು ಓದುವ ಸಂಸ್ಕೃತಿ ಇನ್ನೂ ನಿಂತಿಲ್ಲ. ಪುಸ್ತಕ ಕೊಂಡು ಓದುವ ಸಂಸ್ಕೃತಿ ಮತ್ತಷ್ಟು ಬೆಳೆಯಲಿ ಎಂದು ಆಶಿಸಿದರು. ಹಿರಿಯ ಸಂಶೋಧಕ ಡಾ.ಹಂಪ ನಾಗರಾಜಯ್ಯ ಅವರು ಮಾಸ್ತಿ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು.

ಇದೇ ವೇಳೆ ಲೇಖಕಿ ಸವಿತಾ ನಾಗಭೂಷಣ್‌, ಈಶ್ವರಚಂದ್ರ, ಡಾ.ಕೆ.ಮರುಳಸಿದ್ದಪ್ಪ ಅವರಿಗೂ 2019ನೇ ಸಾಲಿನ ಮಾಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾದಂಬರಿಕಾರ ಎಂ.ಆರ್‌.ದತ್ತಾತ್ರಿ ಅವರಿಗೆ ಮಾಸ್ತಿ ಕಾದಂಬರಿ ಪುರಸ್ಕಾರ, ಕಥೆಗಾರ ಎ.ಎನ್‌.ಪ್ರಸನ್ನ ಮತ್ತು ಶೇಷಾದ್ರಿ ಕಿನಾರ ಅವರಿಗೆ ಮಾಸ್ತಿಕಥಾ ಪುರಸ್ಕಾರ ಪ್ರದಾನ ಮಾಡಲಾಯಿತು. ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಟ್ರಸ್ಟ್‌ ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್‌, ಹಿರಿಯ ಸಾಹಿತಿ ಡಾ.ಜಿ.ಎಸ್‌.ಸಿದ್ಧಲಿಂಗಯ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next