ದಾವಣಗೆರೆ: ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಜಿಲ್ಲೆಯಲ್ಲಿ ಬರ ಪರಿಹಾರ ಕಾರ್ಯ ಕೈಗೊಳ್ಳಲು ಅನುದಾನದ ಕೊರತೆ ಇಲ್ಲ ಎಂದು ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷ ಶಿವಶಂಕರ ರೆಡ್ಡಿ ಹೇಳಿದ್ದಾರೆ.
ಬರ ಪರಿಸ್ಥಿತಿ ಅಧ್ಯಯನ ಹಾಗೂ ನಿರ್ವಹಣೆ ಪ್ರಗತಿ ಪರಿಶೀಲನೆ ಹಿನ್ನೆಲೆಯಲ್ಲಿ ಭಾನುವಾರ ತಂಡದೊಂದಿಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದ ಅವರು, ದಾವಣಗೆರೆ ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ಟ್ಯಾಂಕರ್‌ನಲ್ಲಿ ಕುಡಿಯವ ನೀರು ಪೂರೈಕೆಗೆ ಚಾಲನೆ ನೀಡಿ ಮಾತನಾಡಿ, ಬರ ಪರಿಹಾರ ಕಾಮಗಾರಿ ಹಾಗೂ ಕಾರ್ಯ ಅನುಷ್ಠಾನಕ್ಕೆ ಅನುದಾನದ ತೊಂದರೆಯೇ ಇಲ್ಲ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಎರಡೂ ಹಂಗಾಮದಲ್ಲೂ ಮಳೆ ಕೊರತೆಯಾಗಿ, ಬರ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು, ವಾಸ್ತವ ಅರಿಯಲು, ಅಧಿಕಾರಿಗಳು ಏನೇನು ಕ್ರಮ ವಹಿಸಿದ್ದಾರೆಂಬುದನ್ನು ಅಧ್ಯಯನ ಮಾಡಲು ಸಿಎಂ ಕುಮಾರಸ್ವಾಮಿ ನಮ್ಮ ತಂಡಕ್ಕೆ ಸೂಚಿಸಿದ್ದಾರೆ. ಹಾಗಾಗಿ ಸಮಸ್ಯೆ ತಿಳಿದು, ಪ್ರಾಮಾಣಿಕವಾಗಿ ಸ್ಪಂದಿಸಲು ಬಂದಿದ್ದೇವೆ ಎಂದು ಹೇಳಿದರು.
ಕಳೆದ ಸಾಲಿನ ಎರಡೂ ಹಂಗಾಮದಲ್ಲೂ ಬೆಳೆ ನಷ್ಟವಾಗಿರುವ ಬಗ್ಗೆ ಈಗಾಗಲೇ ನಮ್ಮ ಇಲಾಖೆ ಸಮೀಕ್ಷೆ ನಡೆಸಿದೆ. 52 ಕೋಟಿ ರೂ.ನಷ್ಟು ಜಿಲ್ಲೆಯಲ್ಲಿ ಬೆಳೆ ನಷ್ಟ ಸಂಭವಿಸಿದೆ. ರಾಜ್ಯದಲ್ಲಿ ಒಟ್ಟಾರೆ 1,600 ಕೋಟಿಯಷ್ಟು ಬೆಳೆ ನಷ್ಟವಾಗಿದೆ. 2 ತಿಂಗಳ ಹಿಂದೆಯೇ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕೇಂದ್ರ ನಮ್ಮ ಮನವಿಗೆ ಸ್ಪಂದಿಸುವ ನಿರೀಕ್ಷೆ ಇದೆ. ನೆರವು ಬಿಡುಗಡೆಯಾದ ತಕ್ಷಣ ಬರ ಪರಿಹಾರ ಸಂಬಂಧ ಮತ್ತಷ್ಟು ಕಾರ್ಯಗಳನ್ನ ತ್ವರಿತವಾಗಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹುಣಸೆಕಟ್ಟೆ ಗ್ರಾಮದಲ್ಲಿದ್ದ 6 ಕೊಳವೆಬಾವಿ ಒಣಗಿವೆ. ಅಲ್ಲದೆ ಮತ್ತೆ ಕೊರೆಯಿಸಿದ ನಾಲ್ಕು ಕೊಳವೆಬಾವಿಯಲ್ಲಿ ನೀರು ಸಿಕ್ಕಿಲ್ಲ. ಹಾಗಾಗಿ ಈ ಗ್ರಾಮಕ್ಕೆ ಟ್ಯಾಂಕರಲ್ಲಿ ನೀರು ಪೂರೈಸಲಾಗುವುದು. ಜಿಲ್ಲೆಯ ಕೆಲವು ಗ್ರಾಮಗಳಲ್ಲೂ ಇದೇ ಪರಿಸ್ಥಿತಿ ಇದೆ. ಎಲ್ಲಿ ಸಮಸ್ಯೆ ಇದೆಯೋ ಆ ಗ್ರಾಮದಲ್ಲಿ ತಕ್ಷಣ ನೀರು ಸರಬರಾಜಿಗೆ ಕ್ರಮ ವಹಿಸಲಾಗುವುದು. 1000 ಅಡಿ ಕೊರೆದಾದರೂ ಸಹ ನೀರು ಪೂರೈಕೆಗೆ ಮುಂದಾಗುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಜತೆಗೆ ಜಾನುವಾರುಗಳಿಗೂ ನೀರು-ಮೇವಿನ ಬಗ್ಗೆಯೂ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಸಮಿತಿ ಸದಸ್ಯರಾದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ವಾಸು, ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್, ಜಿಪಂ ಸಿಇಒ ಎಸ್. ಅಶ್ವತಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕಾರಿ ಉದೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಟಿ.ಆರ್. ವೇದಮೂರ್ತಿ, ತಹಶೀಲ್ದಾರ್ ಸಂತೋಷಕುಮಾರ್, ಇತರರು ಈ ಸಂದರ್ಭದಲ್ಲಿದ್ದರು.