Advertisement
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಅವ್ಯವಸ್ಥೆಯ ಆಗರವಾಗಿದ್ದರ ಬಗ್ಗೆ ಪ್ರಶಸ್ತಿ ಪುರಸ್ಕೃತರು ಆಕ್ರೋಶ ವ್ಯಕ್ತಪಡಿಸಿದ್ದು, ಈಗಾಗಲೇ ಕೆಲ ಪುರಸ್ಕೃತರು ಪ್ರಶಸ್ತಿ ವಾಪಸ್ ನೀಡಲು ಮುಂದಾಗಿದ್ದಾರೆ. ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಸೇರಿದಂತೆ ಕೆಲವರು ಪ್ರಶಸ್ತಿ ಹಿಂದಿರುಗಿಸಲು ಮುಂದಾಗಿದ್ದಾರೆ. ಇನ್ನು ಸೂಕ್ತ ಆಯ್ಕೆ ಮಾನದಂಡವಿಲ್ಲದೆ 550ಕ್ಕೂ ಹೆಚ್ಚಿನ ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ ಎಂಬ ಆಕ್ಷೇಪವೂ ಕೇಳಿಬಂದಿದೆ.
Related Articles
Advertisement
ಸಾಕೇನಮ್ಮ ಇಷ್ಟು ಸಾಧಕರು – ಪರಮೇಶ್ವರ್ ವ್ಯಂಗ್ಯ: ಶನಿವಾರ ಪಾಲಿಕೆಯಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಉಪಮುಖ್ಯಮಂತ್ರಿಯೂ ಆದ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಅವರು, ಪುರಸ್ಕೃರ ಸಂಖ್ಯೆ ಕಂಡು ಅಚ್ಚರಿ ವ್ಯಕ್ತಪಡಿಸಿದರು. ಪ್ರಶಸ್ತಿ ಪ್ರದಾನ ವೇಳೆ ಜೆಡಿಎಸ್ ಮಹಿಳೆ ಸದಸ್ಯರೊಬ್ಬರಿಗೆ ಪರಮೇಶ್ವರ್, “ಸಾಕೇನಮ್ಮ ಇಷ್ಟು ಜನ ಸಾಧಕರು’ ಎಂದು ವ್ಯಂಗ್ಯವಾಡಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿದ ಅವರು, “ಎಲ್ಲವೂ ನಿಮ್ಮ ಮೇಯರ್ ಕೃಪಾಕಟಾಕ್ಷ’ ಎಂದರು ಎಂದು ತಿಳಿದುಬಂದಿದೆ. ತಮ್ಮ ಭಾಷಣದಲ್ಲೂ ಈ ಬಗ್ಗೆ ಪ್ರಸ್ತಾಪಿಸಿದ ಪರಮೇಶ್ವರ್, “ನೀವೆಲ್ಲಾ ಏನು ಸಾಧನೆ ಮಾಡಿದ್ದೀರೋ ಗೊತ್ತಿಲ್ಲ. ಆದರೆ ನಿಮ್ಮ ಕ್ಷೇತ್ರಗಳಲ್ಲಿ ಸಣ್ಣ-ಪುಟ್ಟ ಸಾಧನೆ ಮಾಡಿರುತ್ತೀರಾ. ಹೀಗಾಗಿಯೇ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ’ ಎಂದು ಮಾರ್ಮಿಕವಾಗಿ ಹೇಳಿದರು.
ಪುರಸ್ಕೃತ ಸಾಧನೆಯೇ ರಹಸ್ಯ: ಪಾಲಿಕೆಯಿಂದ ಪ್ರತಿವರ್ಷ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಮಾಹಿತಿ ಹಾಗೂ ಅವರ ಸಾಧನೆ ಕುರಿತು ಕೈಪಿಡಿ ಸಿದ್ಧಪಡಿಸಲಾಗುತ್ತದೆ. ಇದರಿಂದ ಸಾಧನೆಯ ಪರಿಚಯ ನೀಡುವುದು ಇದರ ಉದ್ದೇಶ. ಆದರೆ, ಈ ಬಾರಿ ಪ್ರಶಸ್ತಿ ಪುರಸ್ಕೃತರ ಕುರಿತು ಕೈಪಿಡಿ ಸಿದ್ಧಪಡಿಸಿಲ್ಲ. ಜತೆಗೆ ನೂರಾರು ಜನರ ಸ್ವ-ವಿವರಗಳ ಮಾಹಿತಿಯೂ ಪಾಲಿಕೆಯ ಬಳಿಯಿಲ್ಲ ಎಂಬುದು ಆಶ್ಚರ್ಯಕರ ಸಂಗತಿ.
“ಎರಡನೇ ಪಟ್ಟಿಯಲ್ಲಿದ್ದಾರೆ ರಾಮಣ್ಣ, ಭೀಮಣ್ಣ, ಸೋಮಣ್ಣ’: ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದ ಅವ್ಯವಸ್ಥೆ ಹಾಗೂ ಪುರಸ್ಕೃತರ ಸಂಖ್ಯೆ ಹೆಚ್ಚಳದ ಬಗ್ಗೆ ಕಾಂಗ್ರೆಸ್‌ನ ಹಿರಿಯ ಸದಸ್ಯರೊಬ್ಬರು, ಶುಕ್ರವಾರದವರೆಗೆ 277 ಸದಸ್ಯರ ಪಟ್ಟಿಯನ್ನು ಆಯ್ಕೆ ಮಾಡಿ ಸಮಿತಿ ಸದಸ್ಯರೆಲ್ಲಾ ಸಹಿ ಮಾಡಿದ್ದೆವು. ಆದರೆ, ಶುಕ್ರವಾರ ಸಂಜೆ ಹಾಗೂ ಶನಿವಾರ ಬೆಳಗ್ಗೆ ಸಿ.ವಿ.ರಾಮನ್ ನಗರ ಹಾಗೂ ಪುಲಿಕೇಶಿನಗರ ಕ್ಷೇತ್ರಗಳ ತಮ್ಮ ಬೆಂಬಲಿಗರ ಹೆಸರನ್ನು ಮೇಯರ್, ಪುರಸ್ಕೃತರ ಪಟ್ಟಿಗೆ ಸೇರಿಸಿದರೆ ನಾವು ಅಸಹಾಯಕರಾದೆವು’ ಎಂದು ಬೇಸರ ವ್ಯಕ್ತಪಡಿಸಿದರು.
ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡ ಪುರಸ್ಕೃತರ ಹೆಸರು ನೀಡುವಂತೆ ಕೋರಿದರೆ, ಪಟ್ಟಿ ಪಡೆದು ಏನು ಮಾಡುತ್ತೀರಾ, ಪಟ್ಟಿಯಲ್ಲಿ ರಾಮಣ್ಣ, ಭೀಮಣ್ಣ, ಸೋಮಣ್ಣ ಎಂಬ ಹೆಸರುಗಳಿವೆ. ಅವರು ಯಾರು, ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂಬ ಮಾಹಿತಿ ನಮಗೆ ಇನ್ನೂ ತಿಳಿದಿಲ್ಲ. ಮೇಯರ್ ಯಾರನ್ನೂ ಗಣನೆಗೆ ತೆಗೆದುಕೊಳ್ಳದೆ ಪುರಸ್ಕೃತರನ್ನು ಆಯ್ಕೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅರ್ಧದಲ್ಲೇ ವೇದಿಕೆ ಇಳಿದ ಪ್ರಮುಖರು: ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿನ ಅವ್ಯವಸ್ಥೆಯನ್ನು ಕಂಡ ಉಪಮೇಯರ್ ಪದ್ಮಾವತಿ ನರಸಿಂಹ ಮೂರ್ತಿ, ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ, ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್ ಸೇರಿದಂತೆ ಪಾಲಿಕೆಯ ಪ್ರಮುಖ ನಾಯಕರು ಕಾರ್ಯಕ್ರಮದ ಅರ್ಧದಲ್ಲಿಯೇ ವೇದಿಕೆ ಇಳಿದು ಹೊರಟರು.
ಮೊದಲು ಸಮಿತಿಯಲ್ಲಿ 277 ಅರ್ಹ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆನಂತರದಲ್ಲಿ ಯಾರನ್ನು ಪಟ್ಟಿಗೆ ಸೇರಿಸಲಾಗಿದೆ ಎಂಬುದು ಗಮನಕ್ಕೆ ಬಂದಿಲ್ಲ. ಕಾರ್ಯಕ್ರಮದಲ್ಲಿನ ಅವ್ಯವಸ್ಥೆ ನೋಡಿ ಬೇಸರವಾಗಿ ಹೊರಟು ಬಂದೆ.-ಪದ್ಮಾವತಿ ನರಸಿಂಹಮೂರ್ತಿ, ಉಪಮೇಯರ್ ಕಾಂಗ್ರೆಸ್-ಜೆಡಿಎಸ್ ಸದಸ್ಯರು ತಮಗಿಷ್ಟಬಂದ ರೀತಿಯಲ್ಲಿ ಪುರಸ್ಕೃತರ ಸಂಖ್ಯೆ ಹೆಚ್ಚಿಸಿದ್ದಾರೆ. ಮೊದಲು ಸಮಿತಿಯಲ್ಲಿ ಚರ್ಚಿಸಿದಾಗ 277 ಪುರಸ್ಕೃತರ ಪಟ್ಟಿಗೆ ಮಾತ್ರ ಸಹಿ ಹಾಕಿದ್ದು, ಹೆಚ್ಚುವರಿಯಾಗಿ ಸೇರ್ಪಡೆಗೊಂಡವರ ಬಗ್ಗೆ ಗೊತ್ತಿಲ್ಲ.
-ಪದ್ಮನಾಭರೆಡ್ಡಿ, ವಿರೋಧ ಪಕ್ಷ ನಾಯಕ