Advertisement
ಬೆಳಗಾವಿ: ಕೋವಿಡ್ ಸೋಂಕಿನಿಂದ ತೀವ್ರ ಆತಂಕದಲ್ಲಿರುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸೂಕ್ತ ಮತ್ತು ಕಠಿಣ ನಿರ್ಧಾರ ತೆಗೆದುಕೊಳ್ಳಲು ಯಾವುದೇ ಉಸ್ತುವಾರಿ ಸಚಿವರಿಲ್ಲದೇ ಇರುವದು ಸಾರ್ವಜನಿಕರಲ್ಲಿ ಗೊಂದಲದ ಜೊತೆಗೆ ಚಿಂತೆ ಉಂಟುಮಾಡಿದೆ.
Related Articles
Advertisement
ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ತೀವ್ರವಾಗುತ್ತಿದ್ದಂತೆ ಜಾಗೃತರಾದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಅಧಿಕಾರಿಗಳ ಸಭೆ ನಡೆಸಿ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದುವರೆಗೆ ವಿತರಣೆಯಾಗಿರುವ ಲಸಿಕೆ ಪ್ರಮಾಣದ ಮಾಹಿತಿ ಪಡೆದುಕೊಂಡಿದ್ದಾರೆ.
ಮಹಾರಾಷ್ಟ್ರದ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಇನ್ನಷ್ಟು ಬಿಗಿಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿ ಸರಕಾರ ವಿಳಂಬ ಮಾಡದೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದರೆ ಅಧಿಕಾರಿಗಳಿಗೆ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ನೆರೆಯ ಮಹಾರಾಷ್ಟ್ರದಿಂದ ಪ್ರತಿನಿತ್ಯ ನೂರಾರು ಜನರು ಬೆಳಗಾವಿಗೆ ಬರುತ್ತಿದ್ದಾರೆ. ಈ ಎಲ್ಲ ಜನರ ಕೋವಿಡ್ ತಪಾಸಣೆ ಸಮರ್ಪಕವಾಗಿ ಆಗುತ್ತಿಲ್ಲ. ಚೆಕ್‌ಪೋಸ್ಟ್ ಗಳಲ್ಲಿ ಸರಿಯಾಗಿ ತಪಾಸಣೆ ಆಗುತ್ತಿಲ್ಲ. ಇದರ ಮೇಲುಸ್ತುವಾರಿ ನಡೆಸಲು ಸಚಿವರೇ ಇಲ್ಲ. ಇದರಿಂದ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಏರುತ್ತಲೇ ಇದೆ ಎಂಬುದು ಸಾರ್ವಜನಿಕರ ಆತಂಕ.
ಉಸ್ತುವಾರಿ ಸಚಿವರ ನಿಯೋಜನೆ ಆಗುವವರೆಗೆ ಜಿಲ್ಲೆಯ ನಾಲ್ವರಲ್ಲಿ ಒಬ್ಬರು ಸಚಿವರು ಅಧಿಕಾರಿಗಳ ಸಭೆ ನಡೆಸಬೇಕು. ಕೋವಿಡ್ ಆಸ್ಪತ್ರೆ ಹಾಗೂ ಸುರಕ್ಷಾ ಕ್ರಮಗಳ ಪರಿಶೀಲನೆ ನಡೆಸಬೇಕು. ಲಸಿಕೆ ವಿತರಣೆ ಹಾಗು ಜನಜಾಗೃತಿಯ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ಜರುಗಿಸಬೇಕು. ಆದರೆ ಇದಾವುದೂ ಅಗುತ್ತಿಲ್ಲ ಎಂಬ ಅಸಮಾಧಾನ ಸಾರ್ವಜನಿಕರಲ್ಲಿದೆ. ಸೋಂಕಿತರ ಸಂಖ್ಯೆ ಏರಿಕೆ: ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಆಗುತ್ತಿದೆ. ಪ್ರತಿ ನಿತ್ಯ 100ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದೃಢಪಡುತ್ತಿವೆ. ಜಿಲ್ಲೆಯಲ್ಲಿ ಸೋಂಕಿತರು ಹೆಚ್ಚಾದಂತೆ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆಗಳು ಲಭ್ಯ ಇವೆ, ಆಕ್ಸಿಜನ್, ಐಸಿಯು, ವೆಂಟಿಲೇಟರ್ ಲಭ್ಯತೆ ಎಷ್ಟಿದೆ ಎಂಬ ಮಾಹಿತಿಯನ್ನು ಸಚಿವರು ಪಡೆದುಕೊಂಡು ಯಾವುದೇ ಕೊರತೆ ಇದ್ದರೆ ತಕ್ಷಣ ಅದರ ಬಗ್ಗೆ ಕ್ರಮವಾಗಬೇಕು ಎಂಬ ಒತ್ತಾಯ ಜನರಿಂದ ಕೇಳಿಬಂದಿದೆ.
ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದನ್ನು ಮನಗಂಡ ಸರಕಾರ ಕೂಡಲೇ ಕಠಿಣ ಕ್ರಮಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಇದರ ಉಸ್ತುವಾರಿಗಾಗಿ ನೇಮಕ ಮಾಡಿದೆ. ಅದರಂತೆ ಉತ್ತರವಲಯಕ್ಕೆ ನೇಮಕಗೊಂಡಿರುವ ಎಡಿಜಿಪಿ ಭಾಸ್ಕರ್ ರಾವ್ ಶುಕ್ರವಾರ ಬೆಳಗಾವಿಗೆ ಧಾವಿಸಿ ವಿವಿಧ ಸಮಾಜದ ಮುಖಂಡರ ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಜನರಲ್ಲಿ ಸ್ವಲ್ಪ ಧೈರ್ಯ ತುಂಬಿದ್ದಾರೆ.