Advertisement

“ರಾಜ್ಯ ಸರಕಾರ ಹೆಚ್ಚು ದಿನ ಇರುತ್ತದೆಂಬ ಭ್ರಮೆ ಇಲ್ಲ’

09:25 PM Jul 05, 2019 | Sriram |

ಕುಂದಾಪುರ: ರಾಜ್ಯದಲ್ಲಿ 210 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆದು ಇಷ್ಟು ತಿಂಗಳಾದರೂ ಇನ್ನೂ ಅಧಿಕಾರ ದೊರೆತಿಲ್ಲ. ಸರಕಾರದ ಬೇಜವಾಬ್ದಾರಿ ನೀತಿಯಿಂದ, ಪಕ್ಷಪಾತಿತನದಿಂದ ಹೀಗಾಗಿದೆ. ಈ ಸರಕಾರ ಬಹಳ ದಿನ ಇರುತ್ತದೆ ಎಂಬ ಭ್ರಮೆಯಲ್ಲಿ ಯಾರೂ ಇಲ್ಲ. ಇದ್ದರೂ ಪರಿಸ್ಥಿತಿ ಉತ್ತಮವಾಗುತ್ತದೆ ಎಂಬ ನಂಬಿಕೆ ಇಲ್ಲ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಅವರು ಶುಕ್ರವಾರ ಅಪರಾಹ್ನ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮನೆ ಮನೆಗೆ ತೆರಳಿ ಸದಸ್ಯರಾಗಿಸಿ
ಕಾಂಗ್ರೆಸ್‌, ಜೆಡಿಎಸ್‌ ಎಂದು ಹೆಸರು ಹೇಳಿದ ಕೂಡಲೇ ಮನೆಯೊಳಗೆ ಬರಬೇಡಿ ಎಂಬಂತಹ ವಾತಾವರಣ ಬಂದಿದೆ. ಬಿಜೆಪಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ರಾಜಕೀಯ ಪಕ್ಷವಾಗಿದ್ದು ಎಲ್ಲ ಜನಪ್ರತಿನಿಧಿಗಳೂ ಸದಸ್ಯತ್ವ ಅಭಿ ಯಾನದಲ್ಲಿ ಸಕ್ರಿಯವಾಗಿ ಪೂರ್ಣ ಪ್ರಮಾಣದಲ್ಲಿ  ತೊಡಗಿಸಿಕೊಳ್ಳಬೇಕು. ಜು. 6ರಿಂದ ಆ. 11ರ ವರೆಗೆ ಪಕ್ಷದ ವಿವಿಧ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮನೆ ಮನೆಗೆ ತೆರಳಿ ಸದಸ್ಯರಾಗಿಸಿ ಎಂದರು.

ಕೇಂದ್ರ ಸರಕಾರ ಬಜೆಟ್‌ ಮೂಲಕ ಅದ್ಭುತವಾದ ಯೋಜನೆಗಳನ್ನು ನೀಡಿದೆ. ಮೀನುಗಾರಿಕಾ ಸಚಿವಾಲಯ ತೆರೆದು ಹೊಸ ಯೋಜನೆಗಳನ್ನು ಮೀನುಗಾರ ರಿಗಾಗಿ ನೀಡಿದೆ. ಕಾರ್ಮಿಕರಿಗೂ ನಿವೃತ್ತಿ ವೇತನ ಘೋಷಣೆ ಮಾಡಿದೆ. ಇಂತಹ ಹತ್ತು ಹಲವು ಕೇಂದ್ರದ ಸಾಧನೆಗಳನ್ನು, ಜನೋಪಕಾರಿ ಯೋಜನೆಗಳನ್ನು ತಿಳಿಸಿ. ಅಂತೆಯೇ ರಾಜ್ಯ ಸರಕಾರದ ವೈಫಲ್ಯವನ್ನು ತಿಳಿಸಿ. ವೃದ್ಧಾಪ್ಯ ವೇತನಕ್ಕೆ ಅರ್ಜಿ ಕೊಟ್ಟರೆ ಸಕಾಲ ನಿಯಮ ಪ್ರಕಾರ ಒಂದು ತಿಂಗಳಲ್ಲಿ  ಮಾಸಾಶನ ನೀಡಲಾರಂಭಿಸಬೇಕು. ಆದರೆ ರಾಜ್ಯದಲ್ಲಿ ಅರ್ಜಿ ಕೊಟ್ಟು 8 ತಿಂಗಳಾದರೂ ಮಾಸಾಶನ ನೀಡದ ಪ್ರಕರಣಗಳಿವೆ. ರಾಜ್ಯ ಸರಕಾರ ಅಸ್ತಿತ್ವದಲ್ಲಿಯೇ ಇಲ್ಲ ಎಂಬ ಸ್ಥಿತಿಯಿದೆ. ವಿಧಾನಸೌಧದಲ್ಲಿ  ಸಚಿವರೇ ಇಲ್ಲ. ಅಧಿಕಾರಿಗಳು ವಸೂಲಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಪ್ರಸ್ತಾವಿಸಿದ ಬಿಜೆಪಿ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್‌ ಶೆಟ್ಟಿ, ಉಡುಪಿ ಜಿಲ್ಲೆಯಲ್ಲಿ 2 ಲಕ್ಷ ಸದಸ್ಯರನ್ನು ಮಾಡಲು ಯೋಜಿಸಿದ್ದು  ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರ ಸದಸ್ಯರ ನೋಂದಣಿಯಾಗಬೇಕು. 222 ಮತಗಟ್ಟೆಗಳಲ್ಲಿ ತಲಾ 200 ಸದಸ್ಯರಾದರೂ ಆಗಬೇಕು. ಕಳೆದ ಬಾರಿ ಮಿಸ್‌ ಕಾಲ್‌ ಕೊಟ್ಟು ಸದಸ್ಯರಾಗಿದ್ದರೂ ಈ ಬಾರಿ ನವೀಕರಣ ಮಾಡಲೇಬೇಕು ಎಂದರು.

Advertisement

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸದಸ್ಯತ್ವ ಅಭಿಯಾನ ಜಿಲ್ಲಾ ಸಂಚಾಲಕ ನವೀನ್‌ ಶೆಟ್ಟಿ ಕುತ್ಯಾರು, ಜಿಲ್ಲಾ ಕಾರ್ಯದರ್ಶಿ ಪ್ರವೀಣ್‌, ತಾಲೂಕು ಸಹಸಂಚಾಲಕ ಸದಾನಂದ ಬಳ್ಕೂರು ಉಪಸ್ಥಿತರಿದ್ದರು.

ಸದಸ್ಯತ್ವ ಅಭಿಯಾನ ತಾಲೂಕು ಸಂಚಾಲಕ ಶಂಕರ ಅಂಕದಕಟ್ಟೆ  ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ ಬಿಲ್ಲವ ಸ್ವಾಗತಿಸಿದರು.

ಇಂದು ಚಾಲನೆ
ಜು. 6ರಂದು ಸಂಜೆ 5 ಗಂಟೆಗೆ ಶಾಸ್ತ್ರಿ  ಸರ್ಕಲ್‌ನಲ್ಲಿ ಸದಸ್ಯತ್ವ ಅಭಿಯಾನ ಉದ್ಘಾಟನೆಯಾಗಲಿದೆ . ಸದಸ್ಯತ್ವ ಅಭಿಯಾನಕ್ಕೆ ತಾಲೂಕು ಸಂಚಾಲಕರಾಗಿ ಶಂಕರ ಅಂಕದಕಟ್ಟೆ, ಸಹಸಂಚಾಲಕರಾಗಿ ಸದನಂದ ಬಳ್ಕೂರು, ದಾಖಲಾತಿ ಪ್ರಮುಖ್‌ ಆಗಿ ಸಂತೋಷ್‌ ಶೆಟ್ಟಿ, ಸಹಪ್ರಮುಖ್‌ ಆಗಿ ಅರುಣ್‌ ಬಾಣ, ಸಾಮಾಜಿಕ ಜಾಲತಾಣ ಮುಖ್ಯಸ್ಥರಾಗಿ ವಿನೋದ್‌ರಾಜ್‌ ಪೂಜಾರಿ ಅವರನ್ನು ನೇಮಿಸಲಾಗಿದೆ.
– ಸುರೇಶ್‌ ಶೆಟ್ಟಿ ಕಾಡೂರು, ಅಧ್ಯಕ್ಷರು, ಬಿಜೆಪಿ


Advertisement

Udayavani is now on Telegram. Click here to join our channel and stay updated with the latest news.

Next