Advertisement

Govt ;ಹಳೆಯದಕ್ಕೆ ಅನುದಾನವಿಲ್ಲ; ಹೊಸ ಕಾಮಗಾರಿ ಆರಂಭವಾಗಿಲ್ಲ !

11:30 PM Sep 02, 2023 | Team Udayavani |

ಉಡುಪಿ: ರಾಜ್ಯದಲ್ಲಿ ಹೊಸ ಸರಕಾರ ರಚನೆಯಾಗಿ 100 ದಿನ ಕಳೆದರೂ ಅಭಿವೃದ್ಧಿ ಕಾರ್ಯ ವೇಗ ಪಡೆದಿಲ್ಲ ಹಾಗೂ ಹಳೆಯ ಕಾಮಗಾರಿಗಳು ಅನುದಾನ ಬಾರದೇ ಪುನರಾರಂಭಗೊಂಡಿಲ್ಲ. ಹೊಸ ಪ್ರಸ್ತಾವನೆಗೂ ಅನುಮೋದನೆ ದೊರೆತಿಲ್ಲ.

Advertisement

ಲೋಕೋಪಯೋಗಿ ಇಲಾಖೆಯಿಂದ ರಸ್ತೆ, ಸೇತುವೆ, ಸರಕಾರಿ ಕಟ್ಟಡ ನಿರ್ಮಾ ಣಕ್ಕೆ ಪ್ರಸ್ತಾವನೆ, ಮೀನುಗಾರಿಕೆ ಇಲಾಖೆ ಯಿಂದ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರಕ್ಕಾಗಿ ಸಲ್ಲಿಸಿದ ಪ್ರಸ್ತಾವನೆ ಸರಕಾರದ ಹಂತದಲ್ಲೇ ಬಾಕಿಯಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಸಲ್ಲಿಸಿರುವ ಸುಮಾರು 21 ಪ್ರಸ್ತಾವನೆಗಳಲ್ಲಿ 3 ಮಾತ್ರ ಅಂಗೀಕಾರಗೊಂಡಿವೆ.

ಬೈಂದೂರಿನಲ್ಲಿ ನ್ಯಾಯಾಲಯದ ಹೊಸ ಕಟ್ಟಡ ನಿರ್ಮಾಣಕ್ಕೆ 17.50 ಕೋ.ರೂ., ಕುಂದಾಪುರದಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣಕ್ಕೆ 8 ಕೋ.ರೂ., ಕೊಲ್ಲೂರಿನ ಹೊಸ ಪ್ರವಾಸಿ ಮಂದಿರದ 2ನೇ ಹಂತದ ಕಾಮಗಾರಿ ಮತ್ತು ಹಳೇ ಪ್ರವಾಸಿ ಮಂದಿರದ ನವೀಕರಣಕ್ಕೆ 3 ಕೋ.ರೂ., ಬೈಂದೂರು ಪ್ರವಾಸಿ ಮಂದಿರದ 2ನೇ ಹಂತದ ಕಾಮಗಾರಿಗೆ 1.5 ಕೋ.ರೂ., ಬೈಂದೂರು ಪಟ್ಟಣ ಪಂಚಾಯತ್‌ ಕಟ್ಟಡ ನಿರ್ಮಾಣಕ್ಕೆ 5 ಕೋ.ರೂ., ಉಡುಪಿಯಲ್ಲಿ ಲೋಕೋಪಯೋಗಿ ಇಲಾಖೆಯ ನೌಕರರು/ ಅಧಿಕಾರಿಗಳಿಗೆ ವಸತಿ ಸಮುಚ್ಚಯ ನಿರ್ಮಾಣಕ್ಕೆ 8 ಕೋ.ರೂ., ಕಾರ್ಕಳದಲ್ಲಿ ಹೊಸ ಉಪವಿಭಾಗ ಕಚೇರಿ ನಿರ್ಮಾಣಕ್ಕೆ 3 ಕೋ.ರೂ., ಬ್ರಹ್ಮಾವರ ತಾಲೂಕು ಬ್ರಹ್ಮಾವರ-ಜನ್ನಾಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸೇತುವೆ ಮರು ನಿರ್ಮಾಣ ಮತ್ತು ರಸ್ತೆ ವಿಸ್ತರಣೆಗೆ 8 ಕೋ.ರೂ., ಕುಂದಾಪುರ-ತೀರ್ಥಹಳ್ಳಿ (ಕುಂದಾಪುರದಿಂದ ಬಸ್ರೂರಿನವರೆಗೆ) ರಸ್ತೆ ಕಾಂಕ್ರೀಟ್‌ಗೆ 20 ಕೋ.ರೂ., ಬಾಳೆಬರ ಘಾಟಿಯಲ್ಲಿ ರಸ್ತೆ ಕಾಂಕ್ರೀಟ್‌ಗೆ 18 ಕೋ.ರೂ., ಬೈಂದೂರು-ವೀರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಅಭಿವೃದ್ಧಿಗೆ 23 ಕೋ.ರೂ. ಹಾಗೂ ಜಡ್ಕಲ್‌- ಹಳ್ಳಿಹೊಳೆ-ಸಿದ್ದಾ ಪುರ-ಅಮಾಸೆಬೈಲು-ಹೆಬ್ರಿ ರಸ್ತೆಯಲ್ಲಿ ಸೇತುವೆ ಪುನರ್‌ ನಿರ್ಮಾಣಕ್ಕೆ 3.40 ಕೋ.ರೂ. ಸಹಿತ ವಿವಿಧ ಕಾಮಗಾರಿಗೆ 119 ಕೋ.ರೂ. ಜಿಲ್ಲೆಗೆ ಅಗತ್ಯವಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ 200 ಕೊಠಡಿ, ಸುಮಾರು 75 ಶಾಲೆಗಳು ಸಹಿತ ವಿವಿಧ ಕಟ್ಟಡ ಕಾಮಗಾರಿಗೆ 38.96 ಕೋ.ರೂ. ಖರ್ಚು ಅಂದಾಜಿಸಲಾಗಿದೆ. ಅದರಲ್ಲಿ 20.51 ಕೋ.ರೂ. ಬಿಡುಗಡೆ ಮಾಡಲಾಗಿದೆ. ಸುಮಾರು 18 ಕೋ.ರೂ. ಅನುದಾನ ಬರಬೇಕಿದೆ.

ಇಲಾಖೆಗಳಿಂದ ಪ್ರಸ್ತಾವನೆ
ಲೋಕೋಪಯೋಗಿ, ಪ್ರವಾಸೋ ದ್ಯಮ, ಮೀನುಗಾರಿಕೆ ಇಲಾಖೆ ಸಹಿತ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯ ಗಳಿಗೆ ಜಿಲ್ಲಾ ಮಟ್ಟದಿಂದ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲಾಗಿದೆ. ಆದರೆ ಹೊಸ ಸರಕಾರದಿಂದ ಈವರೆಗೂ ಯಾವುದೇ ಪ್ರಸ್ತಾವನೆಗೆ ಅಂಗೀಕಾರ ಸಿಕ್ಕಿಲ್ಲ. ಯಾವುದೇ ಹೊಸ ಕಾಮಗಾರಿ, ಅಭಿವೃದ್ಧಿ ಕಾರ್ಯ ಆರಂಭವಾಗಿಲ್ಲ. ಗ್ಯಾರಂಟಿ ಯೋಜನೆಗೇ ಆದ್ಯತೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

ಬರ ನಿರ್ವಹಣೆಗೆ ಅನುದಾನ ಅಗತ್ಯ
ರಾಜ್ಯ ಸರಕಾರ ಸೆಪ್ಟಂಬರ್‌ ಮೊದಲ ವಾರದಲ್ಲಿ ಬರ ಘೋಷಣೆ ಮಾಡುವ ಸಾಧ್ಯತೆಯಿದೆ. ಒಂದೊಮ್ಮೆ ಬರ ತಾಲೂಕುಗಳ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯನ್ನು ಕೈಬಿಟ್ಟರೆ, ಇಲ್ಲಿನ ಪರಿಸ್ಥಿತಿ ನಿರ್ವಹಣೆಗೆ ಅನುದಾನದ ಕೊರತೆ ಎದುರಾಗಲಿದೆ. ವಿಪತ್ತು ನಿರ್ವಹಣೆ ಖಾತೆಯಲ್ಲಿ ಅನುದಾನವಿದ್ದರೂ ಬರ ಘೋಷಣೆಯಾಗದೇ ಇದ್ದರೆ ಅದರ ಬಳಕೆ ಅಸಾಧ್ಯವಾಗಲಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಪೂರೈಕೆಗೂ ಅನುದಾನ ಕೊರತೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲೆಯಲ್ಲಿ ಹೊಸದಾಗಿ ಅಭಿವೃದ್ಧಿ ಕಾಮಗಾರಿಗೆ ಯಾವುದೇ ಅನುದಾನ ಬಂದಿಲ್ಲ. ಕೆಲವು ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಅನುದಾನ ಬರುವ ನಿರೀಕ್ಷೆಯಿದೆ. ಬರ ಘೋಷಣೆಯಾದರೆ ವಿಪತ್ತು ನಿರ್ವಹಣೆ ಖಾತೆಯಲ್ಲಿರುವ ಅನುದಾನವನ್ನು ಬರ ಸಂಬಂಧಿ ತುರ್ತು ಕಾರ್ಯಗಳಿಗೆ ವಿನಿಯೋಗಿಸಲು ಸಾಧ್ಯವಿದೆ. ಬೇರೆ ಕಾಮಗಾರಿಗೆ ಈ ಅನುದಾನ ಬಳಸಲು ಬರುವುದಿಲ್ಲ.
– ಡಾ| ವಿದ್ಯಾ ಕುಮಾರಿ,
ಜಿಲ್ಲಾಧಿಕಾರಿ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next